ಪ್ಯಾರಿಸ್ ಒಲಿಂಪಿಕ್ಸ್ ವೇಳೆ 3,00,000 ಕಾಂಡೋಮ್ ಉಚಿತ ವಿತರಣೆ-ಈ ನಿರ್ಧಾರ ಏಕೆ?-ಮಾಹಿತಿ, ವಿವರ
ಪ್ಯಾರಿಸ್, ಮಾರ್ಚ್, 21: ಬಹುತೇಕ ಮಂದಿ ಕಾಂಡೋಮ್ ಹೆಸರು ಕೇಳಿದರೆ ಸಾಕು ಮುಜುಗರಕ್ಕೊಳಗಾಗುತ್ತಾರೆ. ಆದರೆ ಇದು ಲೈಂಗಿಕತೆಯಲ್ಲಿ ತೊಡಗುವವರಿಗೆ ಹಾಗೂ ಎಚ್‌ಐವಿಯಂತಹ ರೋಗಗಳನ್ನು ತಡೆಗಟ್ಟಲು ತುಂಬಾ ಸಹಾಯ ಮಾಡುತ್ತದೆ. ಇನ್ನು ಸಿಟಿ ಆಫ್ ಲವ್ ಖ್ಯಾತಿಯ ಪ್ಯಾರೀಸ್‌ನಲ್ಲಿ ಒಲಿಂಪಿಕ್ಸ್ ನಡೆಯುವ ವೇಳೆ ಆಯೋಜನಕರು ಅಥ್ಲೀಟ್‌ಗಳಿಗೆ ಲೈಂಗಿಕ ಸಂಬಂಧ ಹೊಂದಲು ಅವಕಾಶ ಮಾಡಿಕೊಟ್ಟಿದ್ದು, ಸುರಕ್ಷತೆ ದೃಷ್ಟಿಯಿಂದ ಇದರಲ್ಲಿ ಪಾಲ್ಗೊಳ್ಳುವ 14,250 ಅಥ್ಲೀಟ್‌ಗಳಿಗೆ 3 ಲಕ್ಷ ಕಾಂಡೋಮ್ ವಿತರಿಸಲು ಆಯೋಜಕರು ತೀರ್ಮಾನ ಮಾಡಿದ್ದಾರೆ.
ಅಥ್ಲೀಟ್‌ಗಳು ಬಯಸಿದರೆ ಲೈಂಗಿಕತೆಯಲ್ಲಿ ತೊಡಗಲು ಮುಕ್ತರಾಗಿರುತ್ತಾರೆ. ಟೋಕಿಯೊ ಒಲಂಪಿಕ್ಸ್ ವೇಳೆ ಮಹಾಮಾಡಿ ಕೋವಿಡ್ ಆತಂಕ ಇದ್ದ ಹಿನ್ನೆಲೆ ಕಾಂಡೋಮ್ ವಿತರಣೆ ಮಾಡಿರಲಿಲ್ಲ. ಜುಲೈ 26ರಿಂದ ಆಗಸ್ಟ್ 11ರವರೆಗೆ ಒಲಿಂಪಿಕ್ಸ್ ನಡೆಯಲಿದ್ದು, ಈ ವೇಳೆ ಉಚಿತ ಕಾಂಡೋಮ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಅಲ್ಲದೆ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಲಾಗುವುದು ಎಂದು ಪ್ಯಾರಿಸ್ ಒಲಿಂಪಿಕ್ಸ್ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳ ಉಸ್ತುವಾರಿ ಲಾರೆಂಟ್ ದಲಾರ್ಡ್ ತಿಳಿಸಿದ್ದಾರೆ.

ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸಲು ಮತ್ತು ಎಚ್‌ಐವಿ-ಏಡ್ಸ್ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಲು ಮೊದಲ ಬಾರಿ 1988ರಲ್ಲಿ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ನಂತರ ಪ್ರತಿ ಒಲಿಂಪಿಕ್ಸ್‌ನಲ್ಲೂ ಇದು ಮುಂದುವರೆದಿದೆ. 2016ರ ರಿಯೊ ಒಲಿಂಪಿಕ್ಸ್ ವೇಳೆ 4.50 ಲಕ್ಷ ಕಾಂಡೋಮ್‌ಗಳನ್ನು ಹಂಚಿಕೆ ಮಾಡಲಾಗಿತ್ತು.
ಒಲಿಂಪಿಕ್ಸ್ ಕ್ರೀಡಾಗ್ರಾಮದ ಡೈರೆಕ್ಟರ್ ಲೌರೆಂಟ್ ಮಿಚೌದ್ ಪ್ರತಿಕ್ರಿಯಿಸಿ, "ಅಥ್ಲೀಟ್‌ಗಳು ಇಲ್ಲಿ ಅನ್ಯೋನ್ಯತೆಯಿಂದ ಇರುವುದು ತುಂಬಾ ಮುಖ್ಯ ಆಗಿರುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಹಿನ್ನೆಲೆ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ಸೆಕ್ಸ್ ಸೇರಿದಂತೆ ಲೈಂಗಿಕ ಸಂಪರ್ಕ ಹೊಂದಲು ನಿಷೇಧ ಹೇರಲಾಗಿತ್ತು.
ಇದೀಗ ಒಲಿಂಪಿಕ್ ಆಯೋಜಕರು ಮಹತ್ವದ ತೀರ್ಮಾನ ಪ್ರಕಟಿಸಿದ್ದು, "ನಾವು ಅಥ್ಲೀಟ್ ಆಯೋಗದ ಜೊತೆ ಮಾತುಕತೆ ನಡೆಸಿದ್ದು, ಕ್ರೀಡಾಪಟುಗಳು ಉತ್ಸಾಹದಿಂದ ಇರಲು ಹಾಗೂ ಆರಾಮಾವಾಗಿರುವಂತಹ ಕೆಲವು ಸ್ಥಳಗಳನ್ನು ನಿರ್ಮಾಣ ಮಾಡಲು ನಾವು ಬಯಸಿದ್ದೇವೆ" ಎಂದು ಲೌರೆಂಟ್ ಮಿಚೌದ್ ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications