ಬಿಜೆಪಿ ಸೇರುವ ನಾಯಕರ ಪಟ್ಟಿ ಕೊಟ್ಟ ಈಶ್ವರಪ್ಪ
ಬೆಂಗಳೂರು, ಫೆ.25 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರದ ಪರ್ವ ಆರಂಭವಾಗಿದೆ. ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ್, ಜೆಡಿಎಸ್ ಹಿರಿಯ ನಾಯಕ ಪಿಜಿಆರ್ ಸಿಂಧ್ಯಾ, ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಮುಂತಾದವರು ಬಿಜೆಪಿ ಸೇರಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕೆಎಸ್ ಈಶ್ವರಪ್ಪ, ಬೇರೆ-ಬೇರೆ ಪಕ್ಷಗಳ ವಿವಿಧ ನಾಯಕರು ಬಿಜೆಪಿ ಸೇರಲು ಬಯಸಿದ್ದಾರೆ ಎಂದು ತಿಳಿಸಿದರು. ಇವರಲ್ಲಿ ಕೆಲವರೊಂದಿಗೆ ಪಕ್ಷದ ನಾಯಕರು ಮಾತುಕತೆ ನಡೆಸಿದ್ದು, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. [ಬಾಬಾಗೌಡ ಪಾಟೀಲ್ ಬಿಜೆಪಿಗೆ]

ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ್, ಜೆಡಿಎಸ್ ಹಿರಿಯ ನಾಯಕ ಪಿಜಿಆರ್ ಸಿಂಧ್ಯಾ, ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ, ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ರಾಜೂಗೌಡ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು. [ಬೇಳೂರು, ರಾಜೂಗೌಡ ಬಿಜೆಪಿಗೆ]
ಬಿಜೆಪಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಮತ್ತು ಬಿಎಸ್ ಯಡಿಯೂರಪ್ಪ ಬಿಜೆಪಿಗೆ ಮರಳಿದ ನಂತರ ಬೇರೆ-ಬೇರೆ ಪಕ್ಷದ ವಿವಿಧ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಕೆಲವು ನಾಯಕರ ಜೊತೆ ಪಕ್ಷದ ನಾಯಕರು ಮಾತುಕತೆ ನಡೆಸಿದ್ದು, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಮಧ್ಯಂತರ ಚುನಾವಣೆ : ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಬಾಗಿಲು ತಟ್ಟುತ್ತಿತ್ತು, ಲೋಕಸಭೆ ಚುನಾವಣೆ ಮುಗಿದ ಬಳಿಕ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications