ಶಿವಮೊಗ್ಗ; ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಅಪ್‌ಡೇಟ್
ಶಿವಮೊಗ್ಗ, ಅಕ್ಟೋಬರ್ 18: ನೈಋತ್ಯ ರೈಲ್ವೆ ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಕುರಿತು ಅಪ್‌ಡೇಟ್ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 27, 2023ರಂದು ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು.
ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಶಿವಮೊಗ್ಗ ಟೌನ್-ತಾಳಗುಪ್ಪ ವಿಭಾಗದ ನಡುವೆ ನಿರ್ಮಾಣವಾಗುತ್ತಿದೆ. ಸುಮಾರು 105 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ನೈಋತ್ಯ ರೈಲ್ವೆ ಈ ಯೋಜನೆಯ ಡಂಪಿಂಗ್, ಡೋಜಿಂಗ್ ಮತ್ತು ರೋಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದೆ.

ಶಿವಮೊಗ್ಗದಿಂದ ಹೊಸ ರೈಲುಗಳನ್ನು ಪ್ರಾರಂಭಿಸಲು ಮತ್ತು ಬೆಂಗಳೂರು ಮತ್ತು ಮೈಸೂರಿನಲ್ಲಿನ ನಿರ್ವಹಣಾ ಸೌಲಭ್ಯಗಳನ್ನು ಕಡಿಮೆ ಮಾಡಲು ಶಿವಮೊಗ್ಗ ನಗರದಲ್ಲಿ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೋಚಿಂಗ್ ಡಿಪೋ ನಿರ್ಮಾಣ ಕಾಮಗಾರಿ ಜೂನ್ 2024ರೊಳಗೆ ಪೂರ್ಣಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ಅಂದಾಜಿಸಿದೆ.
ಕೋಚಿಂಗ್ ಡಿಪೋ ವಿವರಗಳು; ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಶಿವಮೊಗ್ಗ-ತಾಳಗುಪ್ಪ ನಿಲ್ದಾಣಗಳ ನಡುವೆ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಮತ್ತು ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ. ಮುಖ್ಯ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ಮತ್ತು ಲೂಪ್ ಲೈನ್‌ಗಳಲ್ಲಿ ಗಂಟೆಗೆ 30 ಕಿ. ಮೀ. ವೇಗದಲ್ಲಿ ರೈಲು ಸಾಗುವಂತೆ ಡಿಪೋ ನಿರ್ಮಾಣವಾಗುತ್ತಿದೆ.
ಈ ಡಿಪೋದಲ್ಲಿ ಒಟ್ಟು 4 ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತದೆ. 1 ಸ್ಪೈರ್ ಲೈನ್, 1 ಟವರ್ ವ್ಯಾಗನ್ ಸೈಡಿಂಗ್, 1 ಟ್ರಾಕ್ ಯಂತ್ರ ಸೈಡಿಂಗ್, 1 ಸಿಕ್ ಲೈನ್ ಶೆಡ್, ಸಬ್ ವೇ, ಪ್ರಯಾಣಿಕರ ಓವರ್ ಬ್ರಿಡ್ಜ್ ಸಹ ಈ ಡಿಪೋದಲ್ಲಿ ನಿರ್ಮಾಣಗೊಳ್ಳಲಿವೆ.
ಶಿವಮೊಗ್ಗ ನಗರದಿಂದ ಪ್ರತಿನಿತ್ಯ 15ಕ್ಕೂ ಅಧಿಕ ರೈಲುಗಳ ಸಂಚಾರವಿದೆ. ಅಲ್ಲದೇ ಗೂಡ್ಸ್ ರೈಲುಗಳು ಸಹ ಆಗಮಿಸುತ್ತವೆ. ಆದರೆ ರೈಲುಗಳನ್ನು ನಿಲ್ಲಿಸಲು ಹಳಿಗಳ ಕೊರತೆ ಇದೆ. ಕೆಲವು ರೈಲುಗಳು ಶಿವಮೊಗ್ಗದಿಂದ ಮುಂದೆ ತಾಳಗುಪ್ಪ ತನಕ ಸಾಗುತ್ತವೆ.
ಗೂಡ್ಸ್ ರೈಲುಗಳನ್ನು ಭದ್ರಾವತಿ ಮತ್ತು ತರೀಕೆರೆಯಲ್ಲಿ ನಿಲ್ಲಿಸುವ ಸಮಸ್ಯೆಯನ್ನು ಅರಿತು ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಶಿವಮೊಗ್ಗದಲ್ಲಿ ಹೆಚ್ಚಿನ ಪ್ಲಾಟ್ ಫಾರಂ ಸಿಗಲಿದ್ದು, ಭವಿಷ್ಯದಲ್ಲಿ ಶಿವಮೊಗ್ಗದಿಂದ ಹೆಚ್ಚುವರಿ ರೈಲುಗಳನ್ನು ಓಡಿಸಲು ಸಹ ಅನುಕೂಲವಾಗಲಿದೆ.
ರೈಲ್ವೆ ಇಲಾಖೆಯ ಮಾಹಿತಿಯಂತೆ ಪ್ರತಿ ರೈಲು 3 ಸಾವಿರ ಕಿ. ಮೀ. ಓಡಿದ ಬಳಿಕ ಸರ್ವೀಸ್ ಮಾಡಿಸಬೇಕು. ಆದರೆ ಶಿವಮೊಗ್ಗದಲ್ಲಿ ಸರ್ವೀಸ್ ಸೌಲಭ್ಯ ಇಲ್ಲದ ಕಾರಣ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಬೆಂಗಳೂರು, ಮೈಸೂರು ಡಿಪೋಗಳ ಮೇಲಿನ ಒತ್ತಡ ಸಹ ಕಡಿಮೆಯಾಗಲಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ಸರ್ಕಾರಕ್ಕೆ ಕೋಚಿಂಗ್ ಡಿಪೋ ಕುರಿತು ಮನವಿ ಮಾಡಿದ್ದರು. 2020-21ರ ಬಜೆಟ್‌ನಲ್ಲಿ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋವನ್ನು ಘೋಷಣೆ ಮಾಡಲಾಯಿತು. ಅಲ್ಲದೇ 100 ಕೋಟಿ ಅನುದಾನ ಮೀಸಲಿಡಲಾಯಿತು.
ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಯಿತು. ನರೇಂದ್ರ ಮೋದಿ ಈ ವರ್ಷದ ಫೆಬ್ರವರಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಿ ಅಧಿಕೃತವಾಗಿ ಚಾಲನೆ ನೀಡಿದರು. 2024ರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಶಿವಮೊಗ್ಗದಲ್ಲಿ ಭವಿಷ್ಯದಲ್ಲಿ ಹೊಸ ಹೊಸ ರೈಲುಗಳು ಓಡಲಿವೆ. ಈಗಾಗಲೇ ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ತಾಳಗುಪ್ಪ-ತಡಸ-ಹೊನ್ನಾವರ-ಶಿರಸಿ-ಹುಬ್ಬಳ್ಳಿ ನೂತನ ಮಾರ್ಗದ ಕುರಿತು ಪ್ರಸ್ತಾವನೆ ಸಿದ್ಧವಾಗಿದೆ.












Click it and Unblock the Notifications