ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಳಗಾವಿಗೆ, ಪ್ರಯಾಣಿಕರು ಗರಂ

ಶಿವಮೊಗ್ಗ, ಏಪ್ರಿಲ್ 21: ಹವಾಮಾನ ವೈಪರೀತ್ಯದ ಕಾರಣಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಮತ್ತೆ ಸುದ್ದಿ ಮಾಡಿದೆ. ಶಿವಮೊಗ್ಗ ನಗರದ ಹೊರವಲಯದ ಸೊಗಾನೆಯಲ್ಲಿ ವಿಮಾನ ನಿಲ್ದಾಣವಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಈ ವಿಮಾನ ನಿಲ್ದಾಣದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವ ಮೊದಲ ವಿಮಾನ ನಿಲ್ದಾಣವಾಗಿದೆ. ಶಿವಮೊಗ್ಗದಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಕ್ಕೆ ವಿಮಾನ ಸೇವೆ ಇದೆ.

ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು 27/2/2023ರಂದು ಲೋಕಾರ್ಪಣೆ ಮಾಡಿದ್ದರು. ಶಿವಮೊಗ್ಗದಿಂದ ಬೆಂಗಳೂರು, ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಕ್ಕೆ ಸದ್ಯ ವಿಮಾನ ಸೇವೆ ಇದೆ. ಶಿವಮೊಗ್ಗ-ದೆಹಲಿ, ಶಿವಮೊಗ್ಗ-ಮುಂಬೈ ನಡುವೆ ವಿಮಾನ ಸಂಚಾರ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.

Shivamogga Tirupati Flight Landed In Belagavi

ಶಿವಮೊಗ್ಗ ವಿಮಾನ ನಿಲ್ದಾಣ ಹವಾಮಾನ ವೈಪರೀತ್ಯದ ಕಾರಣಕ್ಕೆ ಹಲವು ಬಾರಿ ಸುದ್ದಿಯಾಗಿತ್ತು. ಈಗ ಮತ್ತೆ ಅದೇ ಕಾರಣಕ್ಕೆ ಸುದ್ದಿಯಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಸಹ ಕಾರಣವಾಗಿದೆ. ಆಗಿದ್ದು ಏನೆಂದರೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೆಳಗಾವಿಗೆ ಹೋಗಿದ್ದು.

ಭಾನುವಾರ ನಡೆದ ಘಟನೆ: ತಿರುಪತಿ-ಶಿವಮೊಗ್ಗ ನಡುವಿನ ಸ್ಟಾರ್ ಏರ್ ಸಂಸ್ಥೆಯ ವಿಮಾನ ಹವಾಮಾನ ವೈಪರೀತ್ಯದ ಕಾರಣಕ್ಕೆ ಶಿವಮೊಗ್ಗ ಬದಲು ಬೆಳಗಾವಿಯಲ್ಲಿ ಲ್ಯಾಂಡ್ ಆಗಿದೆ. ವಿಮಾನದಲ್ಲಿ 60 ಪ್ರಯಾಣಿಕರಿದ್ದರು. ಭಾನುವಾರ ರಾತ್ರಿ 8.30ಕ್ಕೆ ವಿಮಾನ ಬೆಳಗಾವಿಯಲ್ಲಿ ಲ್ಯಾಂಡ್ ಆಗಿದೆ.

ಆದರೆ ಸರಿಯಾದ ಮಾಹಿತಿ ನೀಡದೆ, ಬೇರೆ ವ್ಯವಸ್ಥೆಯನ್ನು ಮಾಡದೇ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವನ್ನು ಬೆಳಗಾವಿಗೆ ತಂದು ಲ್ಯಾಂಡ್ ಮಾಡಲಾಗಿದೆ ಎಂದು ಸ್ಟಾರ್ ಏರ್ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದರು. ಹವಾಮಾನ ಚೆನ್ನಾಗಿದ್ದರೆ ವಿಮಾನ ನಿಗದಿಯಂತೆ ಶಿವಮೊಗ್ಗದಲ್ಲೇ ಲ್ಯಾಂಡ್ ಆಗಬೇಕಿತ್ತು.

ಆದರೆ ಪೂರ್ವ ಮುಂಗಾರು ಮಳೆಯ ಅಬ್ಬರ, ಗುಡುಗು, ಸಿಡಿಲಿನ ಕಾರಣಕ್ಕೆ ಶಿವಮೊಗ್ಗದಲ್ಲಿ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಿಲ್ಲ ಎಂಬ ಮಾಹಿತಿ ತಿಳಿಸಿದ ಕಾರಣಕ್ಕೆ, ವಿಮಾನವನ್ನು ಬೆಳಗಾವಿಗೆ ತೆಗೆದುಕೊಂಡು ಹೋಗಲಾಯಿತು. ಹವಾಮಾನ ವೈಪರೀತ್ಯದ ಕಾರಣಕ್ಕೆ ಮಾಡಿದ ಈ ಮಾರ್ಗ ಬದಲಾವಣೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.

ಹವಾಮಾನ ವೈಪರೀತ್ಯದ ಕಾರಣಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಬೇರೆ ಕಡೆ ಹೋಗಿದ್ದು ಇದೇ ಮೊದಲಲ್ಲ. ಈ ಹಿಂದೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಬೆಂಗಳೂರು-ಶಿವಮೊಗ್ಗ ನಡುವಿನ ವಿಮಾನದಲ್ಲಿದ್ದರು. ಆದರೆ ಶಿವಮೊಗ್ಗದಲ್ಲಿ ಹವಾಮಾನ ವೈಪರೀತ್ಯದ ಕಾರಣಕ್ಕೆ ವಿಮಾನ ಇಳಿಸಲು ಸಾಧ್ಯವಾಗದೇ ಅದನ್ನು ಬೆಂಗಳೂರಿಗೆ ವಾಪಸ್ ತೆಗೆದುಕೊಂಡು ಹೋಗಲಾಗಿತ್ತು.

ಜನದಟ್ಟಣೆಯ ವಿಮಾನ ನಿಲ್ದಾಣ: 2025ರ ಫೆಬ್ರವರಿ ವರದಿಯ ಅನ್ವಯ ಕರ್ನಾಟಕದ ಪ್ರಯಾಣಿಕ ದಟ್ಟಣೆಯ ದೇಶಿಯ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಹುಬ್ಬಳ್ಳಿ, 2ನೇ ಸ್ಥಾನದಲ್ಲಿ ಶಿವಮೊಗ್ಗವಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ವರ್ಷಕ್ಕೆ 1,30,587 ಜನರು ಸಂಚಾರವನ್ನು ನಡೆಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ ಮತ್ತು ಹವಾಮಾನ ವೈಪರೀತ್ಯದ ಸಂದರ್ಭದಲ್ಲಿಯೂ ವಿಮಾನ ಲ್ಯಾಂಡ್ ಮಾಡಲು ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿ ಮುಕ್ತಾಯವಾಗಿದ್ದು ಎಎಐ ಇದನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಬೇಕಿದೆ.

ಸ್ಟಾರ್‌ ಏರ್, ಇಂಡಿಗೋ, ಸ್ಪೈಸ್‌ ಜೆಟ್ ವಿಮಾನಗಳು ಶಿವಮೊಗ್ಗದಿಂದ ಹಾರಾಟವನ್ನು ನಡೆಸುತ್ತವೆ. ಶಿವಮೊಗ್ಗ-ಬೆಂಗಳೂರು, ಶಿವಮೊಗ್ಗ-ಹೈದರಾಬಾದ್‌ ಮಾರ್ಗಕ್ಕೆ ಹೆಚ್ಚು ಬೇಡಿಕೆ ಇದೆ ಎಂದು ಶಿವಮೊಗ್ಗ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+