Government Employee; ಶಿವಮೊಗ್ಗ, ಸರ್ಕಾರಿ ನೌಕರ ಆತ್ಮಹತ್ಯೆಗೆ ಶರಣು
ಶಿವಮೊಗ್ಗ, ಮೇ 27: ಸರ್ಕಾರಿ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧೀಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ನಗರದ ವಿನೋಬ ನಗರದ ನಿವಾಸದಲ್ಲಿ ಚಂದ್ರಶೇಖರನ್ (50) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಅವರು 6 ಪುಟದ ಡೆತ್ ನೋಟ್ ಬರೆದಿಟ್ಟಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ವ್ಯಾಪ್ತಿಗೆ ಬರುವ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೆಂಗಳೂರಿನಲ್ಲಿ ಚಂದ್ರಶೇಖರನ್ ಅಧೀಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಮೇಲೆ ಆರೋಪ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹಣ ವರ್ಗಾವಣೆ ಒತ್ತಡ ಆರೋಪ ಮಾಡಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿ ಶವ ಪತ್ತೆಯಾಗಿದೆ. ನಿಗಮದಲ್ಲಿ 187 ಕೋಟಿ ರೂ. ಹಗರಣದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಡೆತ್ ನೋಟ್‌ನಲ್ಲಿ ಮೂವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.
187 ಕೋಟಿ ರೂ. ಹಗರಣ?; ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧೀಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರನ್ ನಿಮಮದಲ್ಲಿ 187 ಕೋಟಿ ರೂ. ಮೊತ್ತದ ಹಗರಣ ನಡೆದಿದೆ ಎಂದು ಡೆತ್ ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. 85 ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಯಾರದ್ದೋ ತಪ್ಪು ತನ್ನ ಮೇಲೆ ಹಾಕುತ್ತಿದ್ದಾರೆ ಎಂಬ ಭಯದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಗರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಆದರೆ ಕೆಲಸದ ಒತ್ತಡದಲ್ಲಿ ಸದರಿ ಖಾತೆಯ ಚೆಕ್ ಪುಸ್ತಕವನ್ನು ವಾಪಸ್ ಪಡೆದಿಲ್ಲ. ಹಗರಣಕ್ಕೆ ನಾನು ಕಾರಣನಲ್ಲ. ಆದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡೆತ್ ನೋಟ್‌ನಲ್ಲಿ ಹೇಳಿದ್ದಾರೆ.
ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಪಕ್ಷ ನಾಯಕ ಆರ್. ಅಶೋಕ ಪ್ರತಿಕ್ರಿಯೆ ನೀಡಿದ್ದಾರೆ. "ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಮೌಲ್ಯದ ಬೃಹತ್ ಭ್ರಷ್ಟಾಚಾರವನ್ನ ಅಧಿಕಾರಿಯ ತಲೆಗೆ ಕಟ್ಟಲು ಹೋಗಿ ಕಿರುಕುಳ ನೀಡಿ ಆತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ ಈ ಕೊಲೆಗಡುಕ ಕಾಂಗ್ರೆಸ್ ಸರ್ಕಾರ' ಎಂದು ಟೀಕಿಸಿದ್ದಾರೆ.
"ಸಿಎಂ ಸಿದ್ದರಾಮಯ್ಯ ನವರೇ ಇದು ಆತ್ಮಹತ್ಯೆ ಅಲ್ಲ. ಇದು ಕೊಲೆ. ಈ ಕೊಲೆಗೆ ಹೊಣೆ ಯಾರು?. ನಿಮ್ಮ ಸರ್ಕಾರದ ಕಮಿಷನ್ ದಾಹಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ 11,000 ಕೋಟಿ ರೂಪಾಯಿ ಎಸ್ ಸಿಎಸ್ ಪಿ/ ಟಿಎಸ್ ಪಿ ಹಣವನ್ನ ಗ್ಯಾರೆಂಟಿ ಹೆಸರಿನಲ್ಲಿ ಲಪಟಾಯಿಸಿ ಈಗಾಗಲೇ ದಲಿತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡಿದ್ದೀರಿ. ಈಗ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿ ಒಬ್ಬ ಅಧಿಕಾರಿಯ ಸಾವಿಗೆ ಕಾರಣರಾಗಿದ್ದೀರಿ' ಎಂದು ದೂರಿದ್ದಾರೆ.












Click it and Unblock the Notifications