ಶಿವಮೊಗ್ಗ; 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕೆ
ಶಿವಮೊಗ್ಗ, ಜೂನ್ 28; " ಶಿವಮೊಗ್ಗ ನಗರ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ಪಟ್ಟಣಗಳ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ 18 ವರ್ಷ ಮೇಲ್ಪಟ್ಟ ವಯೋಮಿತಿಯ ಸುಮಾರು 16,000 ವಿದ್ಯಾರ್ಥಿಗಳಿಗೆ ಗುರುವಾರದಿಂದ ಉಚಿತ ಲಸಿಕೆಯನ್ನು ಹಾಕಲು ಉದ್ದೇಶಿಸಲಾಗಿದೆ" ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಂಸದರು, "ಎಂ.ಪಿ.ಎಲ್. ಸ್ಪೋಟ್ರ್ಸ್ ಫೌಂಡೇಶನ್, ಸೇವಾಭಾರತಿ, ಪೆಸಿಟ್ ವಿದ್ಯಾಸಂಸ್ಥೆ, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ" ಎಂದರು.
"ಜಿಲ್ಲೆಯ ಅರ್ಹ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳನ್ನು ಕರೆತರಲು ಮನವಿ ಮಾಡಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳ ಆರಂಭಗೊಳ್ಳುವ ಪೂರ್ವದಲ್ಲಿ ಸರ್ಕಾರದ ನಿರೀಕ್ಷೆಯಂತೆ ಅರ್ಹರಾದ ಎಲ್ಲಾ ವಿದ್ಯಾರ್ಥಿಗಳಿಗೆ ಕನಿಷ್ಟ ಮೊದಲ ಹಂತದ ಲಸಿಕೆಯನ್ನು ಹಾಕಿಸುವ ಮಹತ್ವದ ಕಾರ್ಯಕ್ಕೆ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡುತ್ತಿವೆ" ಎಂದು ಸಂಸದರು ಸಂತಸ ವ್ಯಕ್ತಪಡಿಸಿದರು.

"ಈಗಾಗಲೇ ಜಿಲ್ಲೆಯಲ್ಲಿ 4.48 ಲಕ್ಷ ಮಂದಿಗೆ ಮೊದಲ ಹಂತದ ಹಾಗೂ 88,000 ಮಂದಿಗೆ ಎರಡನೇ ಲಸಿಕೆ ಹಾಕಲಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಪ್ರಥಮ ದರ್ಜೆ , ಬಿ. ಎಡ್., ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುವುದು. ಈ ಆಂದೋಲನ ಗುರುವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ" ಎಂದು ಮಾಹಿತಿ ನೀಡಿದರು.
"ಲಸಿಕೆ ಹಾಕುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಗಿರುವಂತೆಯೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಪ್ರಯೋಜನ ಪಡೆದುಕೊಳ್ಳಬೇಕು" ಎಂದು ಸಂಸದರು ಮನವಿ ಮಾಡಿದರು.












Click it and Unblock the Notifications