Shivamogga Airport: ಶಿವಮೊಗ್ಗದಿಂದ ರಾಷ್ಟ್ರ ರಾಜಧಾನಿಗೂ ಶೀಘ್ರವೇ ವಿಮಾನ ಸೇವೆ
ಶಿವಮೊಗ್ಗ, ಸೆಪ್ಟೆಂಬರ್ 25: ಮಲೆನಾಡ ಜನರಿಗೆ ಸಿಹಿಸುದ್ದಿಯೊಂದಿದೆ. ಸೊಗಾನೆ ಗ್ರಾಮದಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿಗೆ ಶೀಘ್ರವೇ ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ಬೆಂಗಳೂರು, ಹೈದರಾಬಾದ್, ಗೋವಾ ಸೇರಿದಂತೆ ವಿವಿಧ ನಗರಗಳಿಗೆ ಶಿವಮೊಗ್ಗದಿಂದ ವಿಮಾನ ಸಂಪರ್ಕವಿದೆ. ಹಲವು ನಗರಗಳಿಗೆ ಹೊಸದಾಗಿ ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಇದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. ಶಿವಮೊಗ್ಗ-ನವದೆಹಲಿ ಮತ್ತು ಶಿವಮೊಗ್ಗ-ಮುಂಬೈ ನಡುವೆ ವಿಮಾನ ಸೇವೆ ಆರಂಭಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಕುರಿತ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅಧಿಕೃತವಾಗಿ ಸಂಚಾರದ ಮಾಹಿತಿ ಇನ್ನೂ ಹೊರಬರಬೇಕಿದೆ.

ಬಿ. ವೈ. ರಾಘವೇಂದ್ರ ಮಾತನಾಡಿ, "ಉಡಾನ್ ಯೋಜನೆಯಡಿ ದೆಹಲಿಗೆ ವಿಮಾನಯಾನಕ್ಕೆ ನಿರ್ಧಾರವಾಗಿದೆ. ಇದಕ್ಕೆ ಟೆಂಡರ್ ಆಗಿದೆ. ಸದ್ಯದಲ್ಲೇ ಈ ಮಾರ್ಗದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ" ಎಂದು ಹೇಳಿದ್ದಾರೆ.
"ಶಿವಮೊಗ್ಗ-ಮುಂಬೈಗೆ ಸಂಪರ್ಕ ಕಲ್ಪಿಸುವ ಪ್ರಯತ್ನವಾಗುತ್ತಿದೆ. ಆದರೆ ಮುಂಬೈನಲ್ಲಿ ನಿತ್ಯ ಸಾವಿರ ವಿಮಾನಗಳು ಹಾರಾಟ ನಡೆಸುತ್ತಿವೆ. ಟ್ರಾಫಿಕ್ ಕ್ಲಿಯರೆನ್ಸ್ ಸಿಗುತ್ತಿಲ್ಲ. ಆದರೆ ಪ್ರಯತ್ನವನ್ನು ಮಾಡಲಾಗುತ್ತಿದೆ" ಎಂದು ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ತಾಲೂಕಿನ ಸೋಗಾನೆ ಗ್ರಾಮದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ 27.02.2023ರಂದು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದಾರೆ. ಮೊದಲು ಇಂಡಿಗೋ ಏರ್‌ಲೈನ್ಸ್ 31.08.2023ರಿಂದ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಿಮಾನ ಸೇವೆಯನ್ನು ಆರಂಭಿಸಿತು.
ಈಗ ಶಿವಮೊಗ್ಗದಿಂದ ಇಂಡಿಗೋ, ಸ್ಟಾರ್ ಏರ್ ವಿಮಾನಯಾನ ಸಂಸ್ಥೆಗಳು ಸೇವೆಯನ್ನು ನೀಡುತ್ತಿವೆ. ಸ್ಪೈಸ್ ಜೆಟ್ ಅಕ್ಟೋಬರ್ 10ರಂದು ಶಿವಮೊಗ್ಗದಿಂದ ಕಾರ್ಯಾಚರಣೆ ಆರಂಭಿಸಲಿದೆ. ಶಿವಮೊಗ್ಗ-ಚೆನ್ನೈ ಮತ್ತು ಶಿವಮೊಗ್ಗ-ಹೈದರಾಬಾದ್ ಮಾರ್ಗದಲ್ಲಿ ವಿಮಾನಗಳ ಹಾರಾಟವನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಪ್ರಸ್ತುತ ಶಿವಮೊಗ್ಗ ನಗರದಿಂದ ಬೆಂಗಳೂರು, ಹೈದರಾಬಾದ್, ತಿರುಪತಿ, ಗೋವಾಕ್ಕೆ ವಿಮಾನಗಳು ಹಾರಾಟ ನಡೆಸುತ್ತಿವೆ. ಅಕ್ಟೋಬರ್‌ನಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಮತ್ತೊಂದು ವಿಮಾನದ ಹಾರಾಟ ಆರಂಭವಾಗುತ್ತಿದೆ. ದೇಶದ ವಿವಿಧ ಮೆಟ್ರೋ ನಗರಗಳಿಗೆ ಮಲೆನಾಡನ್ನು ಸಂಪರ್ಕಿಸಲು ಪ್ರಯತ್ನವನ್ನು ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ರಾಜ್ಯದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗದ್ದು. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಲ್ದಾಣ ನಿರ್ವಹಣೆಯಾಗುತ್ತಿದೆ. ಅಲ್ಲದೇ ರಾತ್ರಿ ಲ್ಯಾಡಿಂಗ್‌ಗೆ ಬೇಕಾದ ವ್ಯವಸ್ಥೆಗಳನ್ನು ಮಾಡುವ ಕಾಮಗಾರಿಯೂ ಅಂತಿಮ ಹಂತದಲ್ಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೋಗಾನೆ ಗ್ರಾಮದಲ್ಲಿ ಸುಮಾರು 662.38 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿಯೆ ಅತಿ ಉದ್ದದ ರನ್ ವೇ ಹೊಂದಿರುವ 3ನೇ ವಿಮಾನ ನಿಲ್ದಾಣವಿದು. ಏರ್‌ಬಸ್-320 ಮಾದರಿಯ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆಯೂ ರನ್ ವೇ ನಿರ್ಮಿಸಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿಯೇ 10 ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಬೇಕು ಎಂದು ಕೇಂದ್ರ ವಿಮಾನಯಾನ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈಗ ಕೇವಲ ಹಗಲು ಹೊತ್ತಿನಲ್ಲಿ ವಿಮಾನಗಳು ಹಾರಾಟ ನಡೆಸುತ್ತಿರುವ ಕಾರಣ ಹೆಚ್ಚು ಮಾರ್ಗದಲ್ಲಿ ವಿಮಾನ ಸೇವೆ ಇಲ್ಲ. ರಾತ್ರಿ ಲ್ಯಾಡಿಂಗ್ ಆರಂಭವಾದರೆ ಶಿಮಮೊಗ್ಗದಿಂದ ಇನ್ನಷ್ಟು ನಗರಕ್ಕೆ ವಿಮಾನ ಹಾರಾಟ ಆರಂಭವಾಗಲಿದೆ.












Click it and Unblock the Notifications