A and B Khata: ಪುರಸಭೆ ವ್ಯಾಪ್ತಿಯಲ್ಲಿ ಎ & ಬಿ ಖಾತೆ ಪಡೆಯಲು ಬೇಕಾದ ದಾಖಲೆಗಳು
ಶಿವಮೊಗ್ಗ, ಮಾರ್ಚ್ 01: ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾತ್ರವಲ್ಲ ಪಟ್ಟಣ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿಯೂ ಎ & ಬಿ ಖಾತೆ ಪಡೆಯಲು ಅವಕಾಶವನ್ನು ಕಲ್ಪಿಸಿದೆ. ದಿನಾಂಕ 10/09/2024ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನ/ ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಆಸ್ತಿ ಮಾಲೀಕರು ಪುರಸಭೆ ಕಚೇರಿಯನ್ನು ಸಂಪರ್ಕಿಸಬಹುದು. ಈ ಖಾತೆಗಳನ್ನು ಪಡೆಯಲು ಯಾವ-ಯಾವ ದಾಖಲೆಗಳು ಬೇಕು? ಎಂದು ಮಾಹಿತಿ ನೀಡಲಾಗಿದೆ.
ಎ-ಖಾತೆ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ನೋಂದಾಯಿತ ಮಾರಾಟ ಪತ್ರಗಳು/ ದಾನ ಪತ್ರ/ ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು/ ಮಂಜೂರಾತಿ ಪತ್ರಗಳು, ಕಂದಾಯ ಇಲಾಖೆಯಿಂದ 94 ಸಿ.ಸಿ. ಅಡಿ ನೀಡಲಾದ ಹಕ್ಕುಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರಗಳು ಬೇಕು.

ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. ಮಾಲೀಕರ ಗುರುತಿನ ದಾಖಲೆ ಪ್ರತಿ ಮತ್ತು ಕಟ್ಟಡವಿದ್ದಲ್ಲಿ ವಿದ್ಯುಚ್ಛಕ್ತಿ ಬಿಲ್ ಪ್ರತಿಗಳನ್ನು ಸಲ್ಲಿಸಬೇಕಿದೆ.
ಬಿ-ಖಾತೆ ಪಡೆಯುವುದು ಹೇಗೆ?; ಬಿ-ಖಾತೆ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ದಿನಾಂಕ 10/09/2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನ ಪತ್ರ/ ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು ಅಗತ್ಯವಾಗಿದೆ.
ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. ಮಾಲೀಕರ ಗುರುತಿನ ದಾಖಲೆ ಪ್ರತಿಗಳನ್ನು ಸಲ್ಲಿಸಬೇಕು.
ಆಸ್ತಿಗಳ ಮಾಲೀಕರು ಮೂರು ತಿಂಗಳೊಳಗೆ ಈ ದಾಖಲೆಗಳನ್ನು ಸಲ್ಲಿಸಿ ಎ ಮತ್ತು ಬಿ-ಖಾತೆಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನಗಳು/ ಕಟ್ಟಡಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025ರಲ್ಲಿ ಅವಕಾಶ ಕಲ್ಪಿಸಲಾಗಿದೆ.
2024ರ ಸೆಪ್ಟೆಂಬರ್ 10ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನಗಳು/ ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಯನ್ನು ಪಡೆಯಬಹುದಾಗಿದೆ.
ಬೆಂಗಳೂರು ನಗರ ಮಾತ್ರವಲ್ಲ ರಾಜ್ಯದ ಉಳಿದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಬಿ-ಖಾತೆಗಳನ್ನು ಪಡೆಯಬಹುದಾಗಿದೆ. ದಿನಾಂಕ 10/09/2024ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನ/ ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಆಸ್ತಿ ಮಾಲೀಕರು ಪಾಲಿಕೆ ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications