ಎಚ್.ಡಿ.ಕುಮಾರಸ್ವಾಮಿಗೆ ಸೆಡ್ಡು ಹೊಡೆದ ಜಮೀರ್ ಅಹಮದ್
ರಾಮನಗರ, ಏಪ್ರಿಲ್ 29 : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಒಂದು ಕಾಲದ ಗೆಳೆಯ ಜಮೀರ್ ಅಹಮದ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಇದೀಗ ಚನ್ನಪಟ್ಟಣದ ಮುಸ್ಲಿಂ ಬಡಾವಣೆಗಳಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡುವ ಮೂಲಕ ಎಚ್ ಡಿಕೆಗೆ ಸೆಡ್ಡು ಹೊಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಜಮೀರ್ ಅಹಮದ್, ಮುಸ್ಲಿಂ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ನಗರದ ಪ್ರಮುಖ ಮುಸ್ಲಿಂ ವಾರ್ಡ್ ಗಳಲ್ಲಿ ತೆರೆದ ವಾಹನದಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಜಮೀರ್ ಗೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಸಾಥ್ ನೀಡಿದರು. ಇದೇ ವೇಳೆ ಜೆಡಿಎಸ್ ತೊರೆದು ಐದು ಜನ ಹಾಲಿ ನಗರಸಭಾ ಸದಸ್ಯರು ಜಮೀರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಕ್ಷೇತ್ರದ ಜನರಲ್ಲಿ ಆತಂಕವಿದ್ದು, ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಯಾಕೆ ಸ್ಪರ್ಧಿಸಬೇಕಿತ್ತು? ಚನ್ನಪಟ್ಟಣಕ್ಕೆ ಅವರ ಕೊಡುಗೆ ಏನು? ಅವರು ಗೆದ್ದರೂ ರಾಜೀನಾಮೆ ನೀಡ್ತಾರೆ. ಅವರನ್ನ ನೋಡಿ ನಮಗೆ ಸಾಕಾಗಿದೆ. ಚನ್ನಪಟ್ಟಣ ಜನತೆಗೆ ಬೈ ಎಲೆಕ್ಷನ್ ಗಳನ್ನ ನೋಡಿ ನೋಡಿ ಸಾಕಾಗಿದೆ ಎಂದು ಟಾಂಗ್ ಕೊಟ್ಟರು.
ಸಿ.ಪಿ.ಯೋಗೇಶ್ವರ್ ನನಗೆ ಯಾವತ್ತೂ ಸ್ನೇಹಿತರಲ್ಲ. ನಾನು ಅವರಿಗೆ ಯಾವತ್ತಿದ್ದರೂ ವಿರೋಧಿ ಎಂದು ಗುಡುಗಿದರು. ನಾನು ಚನ್ನಪಟ್ಟಣ ಕ್ಷೇತ್ರದ ಮುಸ್ಲಿಮರ ಮನೆ ಮಗ ಇದ್ದ ಹಾಗೆ, ಕ್ಷೇತ್ರದಲ್ಲಿ ನನ್ನನು ಪ್ರೀತಿಸುವ ಜನರಿದ್ದಾರೆ. ಅವರೆಲ್ಲ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications