ಕೋವಿಡ್ -19 ನಿಯಮ ಉಲ್ಲಂಘನೆ; ರಾಮನಗರದಲ್ಲಿ ದಾಖಲಾದ ಪ್ರಕರಣವೆಷ್ಟು?
ರಾಮನಗರ, ನವೆಂಬರ್ 03: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ ಆತಂಕವಂತೂ ದೂರವಾಗಿಲ್ಲ. ಈ ನಡುವೆ ಜನರು ಕೊರೊನಾದೆಡೆಗೆ ನಿರ್ಲಕ್ಷ್ಯ ವಹಿಸಿ, ಸರ್ಕಾರ ವಿಧಿಸಿರುವ ಕೋವಿಡ್ 19 ನಿಯಮಗಳನ್ನು ಗಾಳಿಗೆ ತೂರಿ ಓಡಾಡುತ್ತಿರುವುದೂ ಕಂಡುಬರುತ್ತಿದೆ.
ಹೀಗಾಗೇ ಕೋವಿಡ್ -19 ನಿಯಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ಧ ರಾಮನಗರ ಪೊಲೀಸರು ಕಾನೂನು ಅಸ್ತ್ರ ಝಳಪಿಸಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೂ ಸುಮಾರು 9 ಸಾವಿರ ಪ್ರಕರಣಗಳನ್ನು ದಾಖಲಿಸಿ ಅವರಿಂದ ಸುಮಾರು 11 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇನ್ನಷ್ಟು ವಿವರ ಮುಂದಿದೆ...

ಕೋವಿಡ್ 19 ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಅಸ್ತ್ರ
ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದು ಜನರ ರಕ್ಷಣೆಗೆ ಮುಂದಾಗಿತ್ತು. ಅದರಲ್ಲಿ ಪ್ರಮುಖವಾಗಿ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಅದರೆ ಕೆಲ ಮಂದಿ ಆರೋಗ್ಯದ ಕಾಳಜಿ ಮರೆತು, ಸರ್ಕಾರದ ನಿಯಮಕ್ಕೂ ಕ್ಯಾರೆ ಎನ್ನದೇ ಓಡಾಡುತ್ತಿದ್ದರು. ಅಂಥವರ ವಿರುದ್ಧ ಪೊಲೀಸರು ಕಾನೂನಿನ ಅಸ್ತ್ರ ಪ್ರಯೋಗಿಸಿದ್ದಾರೆ.

ರಾಮನಗರದಲ್ಲಿ 9866 ಪ್ರಕರಣ ದಾಖಲು
ಕೋವಿಡ್-19 ನಿಯಮಗಳು ಜಾರಿಗೆ ಬಂದ ದಿನದಿಂದ ಇಂದಿನವರೆಗೆ ರಾಮನಗರ ಪೊಲೀಸರು ಜಿಲ್ಲಾ ವಾಪ್ತಿಯಲ್ಲಿ ಸುಮಾರು 9866 ಪ್ರಕರಣಗಳನ್ನು ದಾಖಲಿಸಿ ಅವರಿಂದ ಸುಮಾರು 11,36,650 ರೂಪಾಯಿ ದಂಡವನ್ನು ವಸೂಲಿ ಮಾಡಿದ್ದಾರೆ.

ಕಗ್ಗಲೀಪುರದಲ್ಲಿ ಅತಿ ಹೆಚ್ಚು ಉಲ್ಲಂಘನೆ ಪ್ರಕರಣ
ಜಿಲ್ಲೆಯ 11 ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಮಾಸ್ಕ್ ಧರಿಸದೇ ಇದ್ದವರ ಮೇಲೆ ಪ್ರಕರಣ ಅತಿ ಹೆಚ್ಚು ದಾಖಲಾಗಿರುವ ಪಟ್ಟಿಯಲ್ಲಿ ಪ್ರಥಮ ಸ್ಥಾನ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಬೆಂಗಳೂರು ಸೆರಗಿನಲ್ಲಿರುವ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1794 ಪ್ರಕರಣವನ್ನು ದಾಖಲಿಸಿ 1,79,400 ರೂಪಯಿ ದಂಡ ವಸೂಲಿ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಕಡಿಮೆ ಪ್ರಕರಣ ದಾಖಲು
ಕೇವಲ 85 ಪ್ರಕರಣಗಳನ್ನು ದಾಖಲಿಸುವ ಮೂಲಕ ಕೊನೆಯ ಸ್ಥಾನವನ್ನು ಚನ್ನಪಟ್ಟಣದ ಎಂಕೆ ಪೊಲೀಸ್ ಠಾಣೆ ಪಡೆದಿದ್ದು, ಆ ವ್ಯಾಪ್ತಿಯಲ್ಲಿ ಕೇವಲ 8500 ರೂಪಾಯಿ ದಂಡ ವಸೂಲಿ ಆಗಿದೆ. ರಾಮನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 743 ಪ್ರಕರಣ ದಾಖಲಿಸಿ 95,700 ರೂಪಾಯಿ ದಂಡ ವಸೂಲಿ ಮಾಡಿ ಎರಡನೇ ಸ್ಥಾನದಲ್ಲಿದೆ.












Click it and Unblock the Notifications