ಡಿಸಿಎಂ ಡಿ. ಕೆ. ಶಿವಕುಮಾರ್ ಕನಸಿಗೆ ಕೆಂಪು ಬಾವುಟ ತೋರಿಸಿದ ಕೇಂದ್ರ ಸರ್ಕಾರ!

ಬೆಂಗಳೂರು, ಮಾರ್ಚ್‌ 19: ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕನಸಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಂಪು ಬಾವುಟ ತೋರಿಸಿದೆ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಸ್ತಾವನೆಯೊಂದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ. ಈ ಮೂಲಕ ತವರು ಜಿಲ್ಲೆಯ ಜನರಿಗೆ ಡಿ. ಕೆ. ಶಿವಕುಮಾರ್ ನೀಡಿದ್ದ ಭರವಸೆ ಸದ್ಯಕ್ಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ.

ರಾಮನಗರ ಜಿಲ್ಲೆಯ ಹೆಸರನ್ನು 'ಬೆಂಗಳೂರು ದಕ್ಷಿಣ' ಎಂದು ಬದಲಾವಣೆ ಮಾಡುವುದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕನಸು. ಈ ಕುರಿತು ಅವರು ಘೋಷಣೆಯನ್ನು ಮಾಡಿದ್ದರು. 2024ರ ಜುಲೈನಲ್ಲಿ ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆಯನ್ನು ನೀಡಿತ್ತು. ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.

Rename Of Ramanagara District Set Back For DK Shivakumar

'ರಾಮ'ನ ಹೆಸರಿನಲ್ಲಿರುವ ರಾಮನಗರ ಜಿಲ್ಲೆಯ ಹೆಸರನ್ನು ರಾಜಕೀಯ ಕಾರಣಕ್ಕಾಗಿ 'ಬೆಂಗಳೂರು ದಕ್ಷಿಣ' ಎಂದು ಬದಲಾವಣೆ ಮಾಡಲಾಗುತ್ತಿದೆ ಎಂದು ಬಿಜೆಪಿ, ಜೆಡಿಎಸ್ ಆರೋಪಿಸಿದ್ದವು. ರಾಮನಗರ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿಗೆ ಸಹ ತವರು ಜಿಲ್ಲೆ. ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ.

ಸರ್ಕಾರಕ್ಕೆ ಪತ್ರದ ಮೂಲಕ ಮಾಹಿತಿ: ಉನ್ನತ ಮೂಲಗಳ ಮಾಹಿತಿ ಪ್ರಕಾರ ಕೇಂದ್ರ ಗೃಹ ಸಚಿವಾಲಯ ರಾಮನಗರ ಜಿಲ್ಲೆಯ ಹೆಸರನ್ನು 'ಬೆಂಗಳೂರು ದಕ್ಷಿಣ' ಎಂದು ಬದಲಾವಣೆ ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಪತ್ರದ ಮೂಲಕ ಮಾಹಿತಿ ನೀಡಿದೆ. ಆದರೆ ಯಾವ ಆಧಾರದ ಮೇಲೆ 2024ರ ಜುಲೈನಲ್ಲಿ ಕರ್ನಾಟಕದ ಸಚಿವ ಸಂಪುಟ ಸಭೆ ಅನುಮೋದಿಸಿದ ತೀರ್ಮಾನವನ್ನು ತಿರಸ್ಕರಿಸಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

2014 ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ 12 ಜಿಲ್ಲೆಗಳ ಇಂಗ್ಲಿಶ್‌ ಭಾಷೆಯ ಹೆಸರನ್ನು ಬದಲಾವಣೆ ಮಾಡುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತ್ತು. ಮಂಗಳೂರು, ಚಿಕ್ಕಮಗಳೂರು, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಇಂಗ್ಲಿಶ್‌ ಭಾಷೆಯ ಹೆಸರುಗಳನ್ನು ಬದಲಾವಣೆ ಮಾಡಲಾಗಿತ್ತು. ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಕೇಂದ್ರ ಸರ್ಕಾರದ ಒಪ್ಪಿಗೆ ಅತ್ಯಗತ್ಯವಾಗಿದೆ.

Rename Of Ramanagara District Set Back For DK Shivakumar

ಚನ್ನಪಟ್ಟಣ ಉಪ ಚುನಾವಣೆಯನ್ನು ಮುಂದಿಟ್ಟುಕೊಂಡು ಡಿ. ಕೆ. ಶಿವಕುಮಾರ್ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಆರೋಪಿಸಿದ್ದವು. ಚನ್ನಪಟ್ಟಣ ಉಪ ಚುನಾವಣೆ ಮುಗಿದು ಕಾಂಗ್ರೆಸ್‌ ಅಭ್ಯರ್ಥಿ ಸಿ. ಪಿ. ಯೋಗೇಶ್ವರ ಗೆಲುವು ಸಾಧಿಸಿದ್ದಾರೆ.

ರಾಮನಗರ ಜಿಲ್ಲೆಯ ಶಾಸಕರು, ಕಾಂಗ್ರೆಸ್ ನಾಯಕರ ನಿಯೋಗ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಕೆ ಮಾಡಿತ್ತು. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಈಗ ಕೇಂದ್ರದ ಒಪ್ಪಿಗೆ ಸಿಕ್ಕಿಲ್ಲ.

ಬಿಜೆಪಿ ಮತ್ತು ಜೆಡಿಎಸ್‌ ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಡಿ. ಕೆ. ಶಿವಕುಮಾರ್ ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ರಾಮನಗರ ಹೆಸರಿನಲ್ಲಿ 'ರಾಮ' ಎಂದು ಇರುವುದರಿಂದ ಅದನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದವು.

ಡಿ. ಕೆ. ಶಿವಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ರಾಮನಗರ ಹೆಸರು ಬದಲಾವಣೆಗೆ ಮನವಿ ಮಾಡಿತ್ತು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ಡಿ. ಕೆ. ಸುರೇಶ್ ಹಾಗೂ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಮುಂತಾದವರು ಈ ನಿಯೋಗದಲ್ಲಿದ್ದರು.

ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿ ಸೇರಿಸಿ 'ಬೆಂಗಳೂರು ದಕ್ಷಿಣ' ಜಿಲ್ಲೆ ಮಾಡಬೇಕೆಂಬ ಮನವಿಯನ್ನು ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಬಳಿಕ ಸಚಿವ ಸಂಪುಟದ ಒಪ್ಪಿಗೆಯೂ ಸಿಕ್ಕಿತ್ತು.

Take a Poll

ಡಿ. ಕೆ. ಶಿವಕುಮಾರ್ ರಾಮನಗರವು ಮೊದಲು ಬೆಂಗಳೂರು ಜಿಲ್ಲೆಯಲ್ಲೇ ಇತ್ತು. ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ಕೋರಲಾಗಿದೆ. ಈಗಿರುವ ರಾಮನಗರವೇ ಕೇಂದ್ರ ಸ್ಥಾನವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದರು.

ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲೂಕುಗಳು ಬೆಂಗಳೂರು ದಕ್ಷಿಣದ ವ್ಯಾಪ್ತಿಗೆ ಸೇರಲಿವೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದರು. ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದರೆ ರಾಮನಗರದಲ್ಲಿ ರಿಯಲ್ ಎಸ್ಟೇಟ್‌ ವ್ಯವಹಾರ ಹೆಚ್ಚಾಗಲಿದೆ. ರಾಮನಗರಕ್ಕೆ ಕೈಗಾರಿಕೆಗಳ ಆಗಮನ ಹೆಚ್ಚಾಗಲಿದೆ. ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ, ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಎಚ್. ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು. "ಹೊಸ ಸರ್ಕಾರ ರಚನೆಯಾದ ಮೇಲೆ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ರಾಮನಗರ ಜಿಲ್ಲೆಯನ್ನು ಏಕೆ ಮಾಡಲಾಯಿತು? ಎಂಬ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ?" ಎಂದು ಪ್ರಶ್ನೆ ಮಾಡಿದ್ದರು.

"ರಾಮನ ಹೆಸರಿನಲ್ಲಿರುವ ರಾಮನಗರಕ್ಕೆ ಅದರದ್ದೇ ಆದ ಇತಿಹಾಸವಿದೆ. ಅಲ್ಲಿ ಯಾವ ಯಾವ ಬೆಲೆ ಏರಿಕೆ ಮಾಡಿದ್ದಾರೆ ನೋಡಿದ್ದೇವೆ. ಮೊದಲು ಅಭಿವೃದ್ಧಿ ಮಾಡುವುದನ್ನು ಕಲಿಯಲಿ. ಹೆಸರು ಬದಲಾವಣೆ ಮಾಡಿದರೆ ಎಲ್ಲಾ ಸರ್ಕಾರಿ ದಾಖಲೆಗೆ ತೊಂದರೆಯಾಗಲಿದೆ. ಈಗಾಗಲೇ ಬೆಂಗಳೂರು ದಕ್ಷಿಣ ಎಂದು ವಿಧಾನಸಭಾ ಕ್ಷೇತ್ರವೇ ಇದೆ" ಎಂದು ಕುಮಾರಸ್ವಾಮಿ ಹೇಳಿದ್ದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರತಿಕ್ರಿಯೆ ನೀಡಿ, "ರಾಮನಗರ ಜಿಲ್ಲೆಯನ್ನೂ ಏನೂ ಅಭಿವೃದ್ಧಿ ಮಾಡದವರು ಈಗ ರಾಜಕೀಯ ಕಾರಣಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ಸಂಚಿನ ಹಿಂದೆ ರಾಮ ದ್ವೇಷ, ರಿಯಲ್ ಎಸ್ಟೇಟ್ ಲಾಲಸೆ ಅಡಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ" ಎಂದು ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+