ರಾಮನಗರದಲ್ಲಿ ಅಸ್ತಿತ್ವಕ್ಕಾಗಿ ಜೋಡೆತ್ತುಗಳ ರಾಜಕೀಯ ಕಾದಾಟ!

ರಾಮನಗರ, ಫೆಬ್ರವರಿ 7: ಮೈತ್ರಿ ಸರ್ಕಾರದ ಅವಧಿಯಲ್ಲಿ ಜೋಡೆತ್ತುಗಳಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇದೀಗ ಬದ್ಧ ವೈರಿಗಳಾಗಿದ್ದು, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ರಾಮನಗರದಲ್ಲಿ ಹೋರಾಟ ಆರಂಭಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರತೆಯನ್ನು ಪಡೆದುಕೊಳ್ಳಲಿದೆ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಮನಗರ ಘಟಾನುಘಟಿ ನಾಯಕರ ಜಿದ್ದಾಜಿದ್ದಿನ ಕಣವಾಗಿ ಗೋಚರಿಸುತ್ತಿದ್ದು, ಡಿಕೆಶಿ ಬ್ರದರ್ಸ್ ಮತ್ತು ಎಚ್‌ಡಿಕೆ ಕುಟುಂಬ ಹೆಚ್ಚು ಹೆಚ್ಚಾಗಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಬ್ಬರ ಮೇಲೆ ಒಬ್ಬರು ಹರಿಹಾಯುತ್ತಿರುವುದು ಸದ್ಯದ ಬೆಳವಣಿಗೆಯಾಗಿದೆ.

 ರಾಮನಗರ ಎಚ್‌ಡಿಕೆ ಕಾರ್ಯಕ್ಷೇತ್ರ

ರಾಮನಗರ ಎಚ್‌ಡಿಕೆ ಕಾರ್ಯಕ್ಷೇತ್ರ

ರಾಮನಗರಕ್ಕೂ ದೇವೇಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಅದಕ್ಕಿಂತ ಹೆಚ್ಚಾಗಿ ಎಚ್.ಡಿ. ಕುಮಾರಸ್ವಾಮಿ ಮತ್ತು ಕುಟುಂಬಕ್ಕೆ ರಾಜಕೀಯ ಭವಿಷ್ಯ ನೀಡಿದ ಜಿಲ್ಲೆಯಾಗಿದೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದು, ಅದು ಕುಮಾರಸ್ವಾಮಿ ಅವರತ್ತ ತುಸು ಹೆಚ್ಚಿನ ಒಲವು ತೋರುತ್ತಿದೆ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಕುಮಾರಸ್ವಾಮಿ ಅವರು ರಾಮನಗರವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಮಾಜಿ ಶಾಸಕ ಬಾಲಕೃಷ್ಣ ಸೇರಿದಂತೆ ಒಂದಷ್ಟು ನಾಯಕರು ಪಕ್ಷವನ್ನು ಬಿಟ್ಟು ಹೋದರೂ ಧೈರ್ಯಗುಂದದ ಕುಮಾರಸ್ವಾಮಿ, ರಾಮನಗರ ಜಿಲ್ಲೆಯಲ್ಲಿ ಹೊಸ ನಾಯಕರ ಮತ್ತು ಕಾರ್ಯಕರ್ತರನ್ನು ತಳಮಟ್ಟದಿಂದ ಹುಟ್ಟು ಹಾಕುವಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಜೆಡಿಎಸ್ ರಾಮನಗರ ಮಟ್ಟಿಗೆ ಪ್ರಬಲ ಎದುರಾಳಿಯಾಗಿದೆ. ಆದ್ದರಿಂದಲೇ ಎರಡು ಪಕ್ಷಗಳ ನಡುವೆ ತೀವ್ರ ಪೈಪೋಟಿಯಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವೇ ಜಿಲ್ಲೆಯಲ್ಲಿ ಬಾವುಟ ಹಾರಿಸಬೇಕೆಂಬ ಹಠಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಬಿದ್ದಿವೆ.

 ಜೆಡಿಎಸ್- ಕಾಂಗ್ರೆಸ್‌ನಿಂದ ತಂತ್ರ-ಪ್ರತಿತಂತ್ರ

ಜೆಡಿಎಸ್- ಕಾಂಗ್ರೆಸ್‌ನಿಂದ ತಂತ್ರ-ಪ್ರತಿತಂತ್ರ

ರಾಮನಗರದಲ್ಲಿ ಇವೆರಡು ಪಕ್ಷಗಳ ಕಾದಾಟದ ಮುಂದೆ ಬಿಜೆಪಿ ಮಂಕಾಗಿದೆ. ಜತೆಗೆ ಬಿಜೆಪಿಯನ್ನು ಜಿಲ್ಲೆಯಲ್ಲಿ ಸಂಘಟನೆ ಮಾಡುವುದು ಕೂಡ ಅಷ್ಟು ಸುಲಭವಲ್ಲ. ಆದರೂ ಸಚಿವ ಅಶ್ವಥ್ ನಾರಾಯಣ ಅವರಿಗೆ ರಾಮನಗರದ ಉಸ್ತುವಾರಿ ನೀಡುವ ಮೂಲಕ ಬಿಜೆಪಿ ಕೆಲವೊಂದು ತಂತ್ರಗಳನ್ನು ಪ್ರಯೋಗಿಸಲು ಮುಂದಾಗಿದೆ.

ಆದರೆ ಇದರ ಹೊರತಾಗಿ ಬಿಎಸ್ಪಿ ಕೂಡ ಇಲ್ಲಿ ಒಂದಷ್ಟು ಕಾರ್ಯ ಚಟುವಟಿಕೆ ನಡೆಸುತ್ತಿದೆ. ಬಿಎಸ್‍ಪಿ ಪ್ರಬಲವಾದಷ್ಟು ಅದರ ನೇರ ಪರಿಣಾಮ ಕಾಂಗ್ರೆಸ್‍ ಮೇಲಾಗುತ್ತದೆ ಎಂಬುದು ರಾಜಕೀಯ ತಿಳಿದವರಿಗೆಲ್ಲ ಗೊತ್ತಿರುವ ವಿಚಾರವೇ.

 ಪಾದಯಾತ್ರೆ ವಿರೋಧಿಸುತ್ತಿರುವ ಜೆಡಿಎಸ್

ಪಾದಯಾತ್ರೆ ವಿರೋಧಿಸುತ್ತಿರುವ ಜೆಡಿಎಸ್

ಹಾಗೆ ನೋಡಿದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಸರ್ಕಾರಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿತೋ? ಅದನ್ನು ಬದಿಗಿಟ್ಟು ರಾಜಕೀಯವಾಗಿ ನೋಡಿದರೆ. ಅದು ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಎನ್ನುವುದಕ್ಕಿಂತಲೂ ಡಿ.ಕೆ. ಶಿವಕುಮಾರ್ ಅವರ ಪಾದಯಾತ್ರೆ ಎಂಬಂತೆ ಗೋಚರಿಸಿತು. ಪಾದಯಾತ್ರೆಯುದ್ದಕ್ಕೂ ಬೇರೆ ಯಾವ ನಾಯಕರು ಹೆಚ್ಚಾಗಿ ಫೋಕಸ್ ಆಗಲೇ ಇಲ್ಲ.

ಇದೇ ವೇಳೆಗೆ ಕಾಂಗ್ರೆಸ್ ಪಾದಯಾತ್ರೆಯನ್ನು ಸರ್ಕಾರಕ್ಕಿಂತ ಹೆಚ್ಚಾಗಿ ವಿರೋಧಿಸುತ್ತಾ ಬಂದಿದ್ದು, ಎಚ್.ಡಿ. ಕುಮಾರಸ್ವಾಮಿ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಪಾದಯಾತ್ರೆ ಜನಹಿತದಲ್ಲ ರಾಜಕೀಯ ಪ್ರೇರಿತ ಎಂಬುದಾಗಿ ಜನರ ಮನಪಟಲದಲ್ಲಿ ತುಂಬಿಸುವ ಪ್ರಯತ್ನವನ್ನು ಅವರು ಮಾಡಿದರು. ಅದರಲ್ಲಿ ಒಂದಷ್ಟು ಮಟ್ಟಿಗೆ ಯಶಸ್ಸು ಕಂಡರು ಎಂದರೆ ತಪ್ಪಾಗಲಾರದು.

 ರಾಜಕೀಯ ಚಟುವಟಿಕೆಗಳಿಗೆ ರೂಪುರೇಷೆ

ರಾಜಕೀಯ ಚಟುವಟಿಕೆಗಳಿಗೆ ರೂಪುರೇಷೆ

ಮೇಕೆದಾಟು ಪಾದಯಾತ್ರೆ ಬಳಿಕ ಕಾಂಗ್ರೆಸ್ ನಾಯಕರು ತಣ್ಣಗಾಗಿರುವಂತೆ ಕಂಡುಬಂದರೂ ಎಚ್.ಡಿ. ಕುಮಾರಸ್ವಾಮಿ ಮಾತ್ರ ಸಮಯ ಸಿಕ್ಕಾಗಲೆಲ್ಲ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಡುತ್ತಲೇ ಇದ್ದಾರೆ. ರಾಮನಗರ ತಾಲೂಕಿನ ಬಿಡದಿ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯನ್ನು ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿರುವ ಅವರು ಅಲ್ಲಿ ಕುಳಿತೇ ರಾಜಕೀಯ ಚಟುವಟಿಕೆಗಳಿಗೆ ರೂಪುರೇಷೆ ತಯಾರಿಸುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಶಾಸಕ ಬಾಲಕೃಷ್ಣ ಸೇರಿದಂತೆ ಹಲವು ನಾಯಕರನ್ನು ಟಾರ್ಗೆಟ್ ಮಾಡಿರುವ ಕುಮಾರಸ್ವಾಮಿ ಸಮಯ ಸಿಕ್ಕಾಗಲೆಲ್ಲ ಅವರಿಗೆ ಟಾಂಗ್ ನೀಡುತ್ತಿದ್ದಾರೆ. ಜತೆಗೆ ಸೋಷಿಯಲ್ ಮೀಡಿಯಾದಲ್ಲೂ ಕಾಂಗ್ರೆಸ್‍ ನಾಯಕರಿಗೆ ಕುಟುಕುತ್ತಿದ್ದಾರೆ. ಅದು ಭಾರೀ ಸುದ್ದಿಯಾಗುತ್ತಿದೆ.

 ಕಾಂಗ್ರೆಸ್ ನಾಯಕರಿಗೆ ಎಚ್‌ಡಿಕೆ ಟಾಂಗ್

ಕಾಂಗ್ರೆಸ್ ನಾಯಕರಿಗೆ ಎಚ್‌ಡಿಕೆ ಟಾಂಗ್

ಇದೆಲ್ಲದರ ನಡುವೆ ಎಚ್‌ಡಿಕೆ ನೀಡುತ್ತಿರುವ ಒಂದೊಂದು ಹೇಳಿಕೆಗಳು ಮಾರ್ಮಿಕವಾಗಿವೆ. ಅವು ಹೇಗಿವೆ ಎಂದರೆ ಸಂಸದ ಡಿ.ಕೆ. ಸುರೇಶ್ ಅವರು ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿಯಲ್ಲಿ ವಿದ್ಯುತ್ ಚಿತಾಗಾರದ ಮುಂದೆ ಫೋಟೋ ತೆಗೆಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಎಚ್‌ಡಿಕೆ ನೀಡಿದ ಹೇಳಿಕೆಯನ್ನು ಗಮನಿಸಿದರೆ ಅದು ಹೀಗಿತ್ತು. ನಿನ್ನನ್ನು(ಡಿ.ಕೆ. ಸುರೇಶ್) ಸಂಸದನನ್ನಾಗಿ ಮಾಡಿರುವುದು ಜನರ ಜೀವ ಉಳಿಸುವ ಕೆಲಸ ಮಾಡು ಅಂತಲೋ ಅಥವಾ ಜನರನ್ನು ಸಾಯಿಸಿ ಹೆಣ ಸುಡಲು ಚಿತಾಗಾರ ನಿರ್ಮಾಣ ಮಾಡು ಅಂತಲೋ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರಲ್ಲದೆ, ಜನರಿಗೆ ಒಳಿತಾಗುವ ಕೆಲಸಗಳನ್ನು ಮಾಡುವುದು ಬಿಟ್ಟು ಹೆಣಗಳನ್ನು ಸುಡಲು ಹೋದ ಕಡೆಗಳಲ್ಲಿ ವಿದ್ಯುತ್ ಚಿತಾಗಾರಗಳನ್ನು ನಿರ್ಮಿಸುತ್ತಿರುವ ಮಹಾನಾಯಕರ ಬಗ್ಗೆ ಜನರು ಎಚ್ಚರ ವಹಿಸಬೇಕು ಎಂದಿದ್ದರು.

 ಕನಕಪುರದಲ್ಲಿ ಬಂಡೆ ಒಡೆದುಕೊಂಡಿದ್ದರು

ಕನಕಪುರದಲ್ಲಿ ಬಂಡೆ ಒಡೆದುಕೊಂಡಿದ್ದರು

ಎಂಎಲ್‌ಸಿ ಆಗಿ ಜನರ ಕೆಲಸ ಮಾಡಬೇಕಾದವನು ಭೂಮಿ ನುಂಗುತ್ತಿದ್ದಾನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ವಿರುದ್ಧವೂ ಹರಿಹಾಯ್ದಿದ್ದರಲ್ಲದೆ, 1996ರಲ್ಲಿ ನಾನು ರಾಜಕೀಯಕ್ಕೆ ಬಂದಾಗ ಅವರೆಲ್ಲರೂ ಕನಕಪುರದಲ್ಲಿ ಬಂಡೆ ಒಡೆದುಕೊಂಡು ಕುಳಿತಿದ್ದರು. ಈಗ ಅಲ್ಲಿ ಕಲ್ಲು ಹುಡುಕಲು ಜಾಗ ಇಲ್ಲವೆಂದು ರಾಮನಗರಕ್ಕೆ ಬಂದು ಡ್ರಾಮಾ ಮಾಡುತ್ತಿದ್ದಾರೆ. ಹೋದ ಕಡೆಯಲೆಲ್ಲಾ ಮಾಜಿ ಶಾಸಕ ಮತ್ತು ಕನಕಪುರದಿಂದ ಕಲ್ಲು ಹೊಡೆಯುವನನ್ನು ಜತೆಯಲ್ಲಿ ಕರೆದೊಯ್ಯುತ್ತಿದ್ದಾರೆ ಎಂದು ಕುಟುಕಿದ್ದರು.

ಜತೆಗೆ ರಾಮನಗರದಲ್ಲಿ ಜೆಡಿಎಸ್ ಅಲುಗಾಡಿಸಲು ಮೇಕೆದಾಟು ಪಾದಯಾತ್ರೆಯಂತಹ ಹತ್ತು ಪಾದಯಾತ್ರೆಗಳನ್ನು ಮಾಡಿದರೂ ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ಕಾಂಗ್ರೆಸ್‌ಗೆ ಅರ್ಥಾತ್ ಡಿಕೆಶಿ ಬ್ರದರ್ಸ್‌ಗೆ ನೀಡಿದ್ದರು. ಇದೆಲ್ಲವನ್ನು ಗಮನಿಸಿದರೆ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಅನ್ನು ಬಗ್ಗು ಬಡಿದು ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಟೊಂಕ ಕಟ್ಟಿ ನಿಂತಿದ್ದಾರೆ ಎಂಬುದು ಗೊತ್ತಾಗಿ ಬಿಡುತ್ತದೆ.

 ಡಿಕೆಶಿ ಬ್ರದರ್ಸ್ ತಂತ್ರ ಹೇಗಿರಲಿವೆಯೋ?

ಡಿಕೆಶಿ ಬ್ರದರ್ಸ್ ತಂತ್ರ ಹೇಗಿರಲಿವೆಯೋ?

ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಇಡೀ ರಾಜ್ಯದ ಜವಾಬ್ದಾರಿ ಅವರ ಮೇಲಿದೆ. ರಾಮನಗರ ರಾಜಕೀಯಕ್ಕಷ್ಟೆ ಅವರು ಸೀಮಿತವಾಗಿಲ್ಲ. ಹೀಗಾಗಿ ಡಿ.ಕೆ. ಸುರೇಶ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಅವರ ತಂತ್ರಗಳು ಹೇಗಿರಲಿವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿವೆ.

Recommended Video

      ಕಷ್ಟದಲ್ಲಿದ್ದ ಟೀಂ ಇಂಡಿಯಾ ಕೈ ಹಿಡಿದು Lata Mangeshkar ಮಾಡಿದ ಸಹಾಯ ಎಂಥದ್ದು? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+