ಭಾರಿ ಅನಾಹುತದಿಂದ ಪಾರಾದ ಡಿಕೆ ಸುರೇಶ್, ಸಿಪಿ ಯೋಗೇಶ್ವರ್
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಚನ್ನಪಟ್ಟಣದ ಪ್ರಸಿದ್ಧ ಪ್ರವಾಸಿ ತಾಣವಾದ ಕಣ್ವ ಜಲಾಶಯಕ್ಕೆ ಭೇಟಿ ನೀಡಿದ್ದ ವೇಳೆ ಕಾಂಗ್ರೆಸ್ ನಾಯಕರಿಬ್ಬರೂ ದೊಡ್ಡ ದುರಂತದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಕಣ್ವ ಜಲಾಶಯಕ್ಕೆ ಭೇಟಿ ನೀಡಿದ್ದ ನಾಯಕರು ಈ ವೇಳೆ ಬೋಟ್ ಬೈಕ್ ರೈಡ್ ಮಾಡಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ ಮತ್ತೊಂದು ಬೋಟ್‌ನಲ್ಲಿ ತೆರಳಿದ್ದರು. ಮತ್ತೊಂದು ವಾಟರ್ ಬೈಕ್‌ನಲ್ಲಿ ಪ್ರತ್ಯೇಕವಾಗಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಡಿ.ಕೆ.ಸುರೇಶ್ ಹೊರಟಿದ್ದರು. ಈ ವೇಳೆ ಬೈಕ್ ಚಾಲನೆ ಮಾಡುತ್ತಿದ್ದ ಡಿ.ಕೆ.ಸುರೇಶ್ ಅವರನ್ನು ಯೋಗೇಶ್ವರ್ ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದರು.

ಆದರೂ ಆಯತಪ್ಪಿ ಇಬ್ಬರೂ ನೀರಿಗೆ ಜಾರಿ ಬಿದ್ದರು. ಕಣ್ವ ಜಲಾಶಯದಲ್ಲಿ ಬೋಟಿಂಗ್ ಮಾಡ್ತಿದ್ದ ವೇಳೆ ಆಯತಪ್ಪಿ ಇಬ್ಬರು ನೀರಿಗೆ ಬಿದ್ದರು. ಆದರೆ ಇಬ್ಬರೂ ರಕ್ಷಣೆಗೆ ಲೈಫ್ ಜಾಕೆಟ್ ಧರಿಸಿದ್ದರಿಂದ ನೀರಿನಲ್ಲಿ ಬಿದ್ದರೂ ಯಾವುದೇ ಅನಾಹುತ ಸಂಭವಿಸಲಿಲ್ಲ. ಕೊನೆಗೆ ಅವರು ನೀರಿನಿಂದ ಹೊರಬಂದಿರುವ ಘಟನೆ ನಡೆದಿದೆ. ಈ ದೃಶ್ಯಗಳನ್ನ ಅಲ್ಲಿದ್ದವರು ರೆಕಾರ್ಡ್ ಮಾಡಿಕೊಂಡಿದ್ದು, ವೈರಲ್ ಆಗಿದೆ.
ಬಳಿಕ ಮಾತನಾಡಿರುವ ಡಿ.ಕೆ.ಸುರೇಶ್ ಅವರು, ಕಣ್ಣು ಹಾಯಿಸಿಷ್ಟು ದೂರ ಸ್ಫಟಿಕದಂತೆ ಹೊಳೆಯುತ್ತಿರುವ ನೀರು, ಪ್ರಕೃತಿಯ ಹೊದಿಕೆಯಲ್ಲಿ, ಪ್ರಶಾಂತ ವಾತಾವರಣದಲ್ಲಿರುವ ನಮ್ಮ ರಾಮನಗರ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ ಕಣ್ವ ಜಲಾಶಯ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈ ಜಲಾಶಯದಲ್ಲಿ ಜಲಸಾಹಸ ಕ್ರೀಡೆ ಆರಂಭಿಸಲಾಗುತ್ತಿದ್ದು, ಕಣ್ವ ಡ್ಯಾಂ ಸಾಹಸ ಪ್ರಿಯರ ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.

ಸಹೋದರ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಚನ್ನಪಟ್ಟಣ ತಾಲ್ಲೂಕಿನ ಶಾಸಕರಾದ ಸಿಪಿ ಯೋಗೇಶ್ವರ್ ಅವರೊಂದಿಗೆ ಬೋಟಿಂಗ್ ವಿಹಾರ ಕೈಗೊಂಡಿದ್ದು ಒಂದು ವಿಶಿಷ್ಟ ಅನುಭೂತಿಯಾಗಿತ್ತು. ಇಂತಹ ಅನುಭವವನ್ನು ಹುಡುಕಿಕೊಂಡು ವಿದೇಶಕ್ಕೆ ಹೋಗಬೇಕಾಗಿಲ್ಲ. ನಮ್ಮ ಜಿಲ್ಲೆಯ ಸ್ಥಳೀಯ ಪ್ರವಾಸೋದ್ಯಮವನ್ನು, ಜಲಕ್ರೀಡೆಗಳನ್ನು ಉತ್ತೇಜಿಸಲು ನಾವೆಲ್ಲರೂ ಕೈಜೋಡಿಸುತ್ತಿದ್ದೇವೆ. ನೀವೂ ಜೊತೆಯಾಗಿ. ನಮ್ಮ ನಾಡು, ನಮ್ಮ ಹೆಮ್ಮೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಚನ್ನಪಟ್ಟಣದ ಪ್ರಸಿದ್ಧ ಪ್ರವಾಸಿ ತಾಣವಾದ ಕಣ್ವ ಜಲಾಶಯಕ್ಕೆ ಭೇಟಿ ನೀಡಿ, ಬೋಟ್ ರೈಡ್ ಮೂಲಕ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈ ಜಲಾಶಯದಲ್ಲಿ ಜಲಸಾಹಸ ಕ್ರೀಡೆ ಆರಂಭಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಣ್ವ ಜಲಾಶಯವು ಸಾಹಸ ಪ್ರಿಯರ ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಅವರು ರಾಮನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾತನೂರು ರಸ್ತೆಯ ಶ್ರೀಮಹದೇಶ್ವರ ದೇವಸ್ಥಾನದ ಹತ್ತಿರ ಆಯೋಜಿಸಿದ್ದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಡಿಸಿಎಂ ಡಿಕೆಶಿ ಭಾಗವಹಿಸಿದ್ದರು. ನಮ್ಮ ಒಗ್ಗಟ್ಟು ಹಾಗೂ ನಿಮ್ಮ ಸಹಕಾರದಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ಸಾಧಿಸಿದ್ದು, ನಮ್ಮ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಇಂದು ಶಾಸಕರಾಗಿದ್ದಾರೆ. ಈ ಮೂಲಕ ಚನ್ನಪಟ್ಟಣದ ಜನತೆ ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ರವಾನಿಸಿದ್ದಾರೆ. ಈ ಕ್ಷೇತ್ರದ ಜನರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದ ಎಂದಿದ್ದರು.












Click it and Unblock the Notifications