ರಾಮನಗರ: ಡಿಕೆಶಿ ಆಪ್ತನಿಂದ ಭೂ ಒತ್ತುವರಿ; ಕಬಳಿಸಿದ ಜಮೀನಿಗೆ ನರೇಗಾ ಅಡಿಯಲ್ಲಿ ಕಾಂಪೌಂಡ್ ನಿರ್ಮಾಣ
ರಾಮನಗರ, ಮಾರ್ಚ್ 29: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತನೊಬ್ಬ ಸರ್ಕಾರಿ ಗೋಮಾಳ ಹಾಗೂ ಅರಣ್ಯ ಇಲಾಖೆ ಜಾಗವನ್ನು ಒತ್ತುವರಿ ಮಾಡಿದ್ದು, ಪಿಡಿಒ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸಿ ತನ್ನ ಜಾಗಕ್ಕೆ ನರೇಗಾ ಯೋಜನೆ ಹಣದಲ್ಲಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾನೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮದ ಡಿಕೆ ಸಹೋದರರ ಕಟ್ಟ ಬೆಂಬಲಿಗ ಕೃಷ್ಣಪ್ಪ ಲಕ್ಷ ಲಕ್ಷ ನರೇಗಾ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿರುವ ಆರ್‌ಟಿಐ ಕಾರ್ಯಕರ್ತ ದಾಖಲೆ ಸಮೇತ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗೆ ದೂರು ನೀಡಿದ್ದಾನೆ.

ಸರ್ವೆ ನಂಬರ್ 174ರ ಗೋಮಾಳದಲ್ಲಿ 15 ಎಕರೆ ಒತ್ತುವರಿ
ಡಿಕೆ ಸಹೋದರರ ಬೆಂಬಲಿಗ ಕೃಷ್ಣಪ್ಪ ವಿರುದ್ಧ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಗಂಭೀರ ಆರೋಪ ಮಾಡಿದ್ದಾರೆ. ಅಂದಹಾಗೆ ಈತ ದೊಡ್ಡಾಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೂಡ ಆಗಿದ್ದು, ದೊಡ್ಡಾಲಹಳ್ಳಿಯಲ್ಲಿ 12.10 ಎಕರೆ ಜಮೀನು ಹೊಂದಿದ್ದಾನೆ. ಈ ಜಮೀನಿಗೆ ಹೊಂದಿಕೊಂಡಂತೆ ಸರ್ವೆ ನಂಬರ್ 174ರ ಗೋಮಾಳದಲ್ಲಿ 15 ಎಕರೆ ಹಾಗೂ ಚೀಲಂದವಾಡಿ ಅರಣ್ಯ ಪ್ರದೇಶ ಸರ್ವೆ ನಂ 1ರಲ್ಲಿ 4 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿದ್ದಾನೆ ಎಂದು ತಮ್ಮ ದೂರಿನಲ್ಲಿ ರವಿಕುಮಾರ್ ಆರೋಪಿಸಿದ್ದಾರೆ.

ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಅಕ್ರಮ
ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು, ಸಮತಟ್ಟು ಮಾಡಿ ತನ್ನ ಜಮೀನಿನಲ್ಲಿ 12.10 ಎಕರೆ ಸೇರಿ ಒಟ್ಟು 31.10 ಎಕರೆ ವಿಸ್ತೀರ್ಣ ಮಾಡಿಕೊಂಡಿದ್ದ. ತದನಂತರ ನರೇಗಾ ಯೋಜನೆಯನ್ನು ಬಳಸಿಕೊಂಡು 31.10 ಎಕರೆ ತನ್ನದೇ ಜಮೀನಿಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾನೆ.
ದೊಡ್ಡಾಲಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಶಾಮೀಲಾಗಿ ನರೇಗಾ ಯೋಜನೆಯ 'ಪ್ರವಾಹ ನಿಯಂತ್ರಣ ಹಾಗೂ ಮಣ್ಣಿನ ಸವಕಳಿ ತಡೆ' ಕಾಮಗಾರಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ 80 ಲಕ್ಷ ರೂಪಾಯಿ ಹಣ ದುರುಪಯೋಗ ಪಡಿಸಿಕೊಂಡು, ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಗ್ರಾ.ಪಂ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಭೂ ಅಕ್ರಮ ಎಸಗಿರುವ ಕೃಷ್ಣಪ್ಪ ವಿರುದ್ಧ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಹಾಗೂ ಜಿ.ಪಂ ಸಿಇಒ ಇಕ್ರಾಂ ಹಾಗೂ ಕೊಳ್ಳೇಗಾಲ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ರವಿಕುಮಾರ್ ದೂರು ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಕೃಷ್ಣಪ್ಪ, ಅವರ ಮಗ ದೇವರಾಜು ಮತ್ತು ಪತ್ನಿ ಶಾಂತಮ್ಮ, ಗ್ರಾ.ಪಂ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಕಂಚನಹಳ್ಳಿ ರವಿಕುಮಾರ್ ಒತ್ತಾಯಿಸಿದ್ದಾರೆ.
ಅಧಿಕಾರ ಹಾಗೂ ರಾಜಕೀಯ ಪ್ರಭಾವ ಬಳಸಿಕೊಂಡು ಸರ್ಕಾರಿ ಜಮೀನು ಮತ್ತು ಅರಣ್ಯ ಭೂಮಿ ಒತ್ತುವರಿ ಹಾಗೂ ನರೇಗಾ ಯೋಜನೆಯ ಲಕ್ಷ ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿರುವ ಕೃಷ್ಣಪ್ಪ ವಿರುದ್ಧ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕಿದೆ. ಆದರೆ ಸಾಮಾಜಿಕ ಕಾರ್ಯಕರ್ತರು ನರೇಗಾ ಹಣ ದುರ್ಬಳಕೆ ವಿರುದ್ಧ ದೂರು ಸಲ್ಲಿಕೆ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಇಕ್ರಾಂ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆಶಿ ಆಪ್ತರಿಂದ ನರೇಗಾ ಯೋಜನೆಯಲ್ಲಿ ಬಾರಿ ಅಕ್ರಮ
2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತಿ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ವಿಭಾಗದಲ್ಲಿ ಇಡೀ ದೇಶದಲ್ಲಿ ಕನಕಪುರ ಮೊದಲ ಸ್ಥಾನ ಪಡೆದಿತ್ತು.
ಕನಕಪುರ ತಾಲ್ಲೂಕು ನರೇಗಾ ಯೋಜನೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಬೆನ್ನಲೇ ತಾಲ್ಲೂಕಿನಲ್ಲಿ ನರೇಗಾ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿತ್ತು. ಅಲ್ಲದೇ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಜಿಲ್ಲಾ ಪಂಚಾಯತ್ ಸಿಇಒ ಇಕ್ರಾಂ ರವರಿಗೆ ನೀಡಿರುವ ದೂರಿನಲ್ಲಿ ದೊಡ್ಡಾಲಹಳ್ಳಿ ಗ್ರಾಮ ಪಂಚಾಯತಿ ಒಂದರಲ್ಲೇ ಡಿಕೆ ಸಹೋದರರ ಆಪ್ತರು ಇನ್ನೂ ಹಲವಾರು ನರೇಗಾ ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications