ಪಂಚಾಯಿತಿ ಚುನಾವಣೆ; ರಾಮನಗರದಲ್ಲಿ ದಾಖಲೆಯ ಮತದಾನ
ರಾಮನಗರ, ಡಿಸೆಂಬರ್ 23: ರಾಮನಗರ ಜಿಲ್ಲೆಯಲ್ಲಿ ನಡೆದ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ 90.03ರಷ್ಟು ಮತದಾನವಾಗಿದೆ. ರಾಮನಗರ ತಾಲೂಕಿನ 20 ಗ್ರಾಮ ಪಂಚಾಯತಿಗಳಲ್ಲಿ ಶೇ 91.56 ರಷ್ಟು, ಕನಕಪುರ ತಾಲೂಕಿನ 36 ಗ್ರಾಮ ಪಂಚಾಯತಿಗಳಲ್ಲಿ ಶೇ 89.07ರಷ್ಟು ಮತದಾನವಾಗಿದೆ.
ರಾಮನಗರ ತಾಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 359 ಸ್ಥಾನಗಳಲ್ಲಿ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೇ ಖಾಲಿ ಉಳಿದಿತ್ತು. 26 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.331 ಸ್ಥಾನಗಳಿಗೆ 830 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು ಅವರ ಭವಿಷ್ಯ ಮತಪತ್ರಗಳಲ್ಲಿ ದಾಖಲಾಗಿದೆ.
ಮತಪತ್ರಗಳಿರುವ ಬಾಕ್ಸ್‌ಗಳನ್ನು ಜೂನಿಯರ್ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಡಿಸೆಂಬರ್ 27ರಂದು ರಾಜ್ಯದಲ್ಲಿ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.

ಕನಕಪುರ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 612 ಸ್ಥಾನಗಳಲ್ಲಿ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದೇ ಖಾಲಿ ಉಳಿದಿದೆ. 121 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. 490 ಸ್ಥಾನಗಳಿಗೆ ಚುನಾವಣೆ ನಡೆದಿದೆ, 1157 ಅಭ್ಯರ್ಥಿಗಳು ಸ್ಪರ್ಧೆಮಾಡಿದ್ದರು.
ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ದ್ಯಾವಸಂದ್ರ, ಹಾರೋಹಳ್ಳಿ, ಕೊಳ್ಳಿಗಾನಹಳ್ಳಿ, ಟಿ. ಹೊಸಹಳ್ಳಿ ಹಾಗೂ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಗಳನ್ನು ತಾತ್ಕಾಲಿಕವಾಗಿ ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.












Click it and Unblock the Notifications