ವಂಡರ್ ಲಾದಲ್ಲಿ ರೋಲರ್ ಕೋಸ್ಟರ್ ಮಗುಚಿ ಐವರಿಗೆ ಗಾಯ
ರಾಮನಗರ, ಜೂನ್ 21: ಪ್ರತಿಷ್ಠಿತ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ ಲಾದಲ್ಲಿ ರೋಲರ್ ಕೋಸ್ಟರ್ ಮುಗುಚಿ ಐವರು ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು - ಮೈಸೂರು ರಸ್ತೆಯಲ್ಲಿ ಹಾದು ಹೋಗುವ ರಾಮನಗರ ಜಿಲ್ಲೆಯ ಬಿಡದಿ ಬಳಿಯ ವಂಡರ್ ಲಾನಲ್ಲಿ ಈ ಘಟನೆ ನಡೆದಿದೆ. ಥ್ರಿಲ್ಲಿಂಗ್ ಗೇಮ್ ಎಂದೇ ಹೆಸರಾದ ರೋಲರ್ ಕೋಸ್ಟರ್ ನಲ್ಲಿ 10ಕ್ಕೂ ಹೆಚ್ಚು ಮಂದಿ ಕುಳಿತಿದ್ದಾರೆ. ಆ ಯಂತ್ರ ತಿರುಗುವ ಸಂದರ್ಭ ಇದಕ್ಕಿದ್ದ ಹಾಗೆ ಜನರಿದ್ದ ರೋಲರ್ ಕಾಸ್ಟರ್ ಮಗುಚಿ ಬಿದ್ದಿದೆ. ಈ ವೇಳೆ ಐವರು ಯುವಕರು ನಾಲ್ಕೈದು ನಿಮಿಷಗಳ ಕಾಲ ಮುಗುಚಿದ ಯಂತ್ರದಡಿ ಸಿಲುಕಿ ನರಳಾಡಿದ್ದಾರೆ. ಯುವಕರ ಕಾಲುಗಳಿಗೆ ಗಾಯವಾಗಿದ್ದು, ನೋವಿನಿಂದ ಕೂಗಿಕೊಂಡಿದ್ದಾರೆ. ತಕ್ಷಣ ಸಿಬ್ಬಂದಿ ಬಂದು ಅವರಿದ್ದ ರೋಲರ್ ಕೋಸ್ಟರ್ ಸರಿ ಮಾಡಿದ್ದಾರೆ.

ಘಟನೆಯ ದೃಶ್ಯಾವಳಿಯನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದು, ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಂಡರ್ ಲಾ ಆಡಳಿತ ಮಂಡಳಿ ಗಾಯಾಳುಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಿ ರಾಜಿ ಸಂಧಾನ ಮಾಡಿಕೊಂಡಿದ್ದು, ಪ್ರಕರಣ ಹೊರಬಾರದಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ವಿಡಿಯೋ ಸುದ್ದಿ ಮಾಡುತ್ತಿದೆ.












Click it and Unblock the Notifications