ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ: 15 ಜನರ ಮೇಲೆ ಎಫ್ ಐಆರ್
Recommended Video
ರಾಮನಗರ, ಸೆಪ್ಟೆಂಬರ್ 4: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿದ 15 ಮಂದಿ ವಿರುದ್ಧ ಕನಕಪುರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಕನಕಪುರದಲ್ಲಿ ಡಿಕೆಶಿ ಪರ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 15ಕ್ಕೂ ಹೆಚ್ಚು ಬೆಂಬಲಿಗರ ಮೇಲೆ ಎಫ್‍ಐಆರ್ ಹಾಕಲಾಗಿದೆ. ಪ್ರತಿಭಟನೆ ವೇಳೆ ಬಸ್ ಗೆ ಬೆಂಕಿ ಹಚ್ಚಿದ್ದು ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಇನ್ನು ಕನಕಪುರದ ಚನ್ನಬಸಪ್ಪ ಸರ್ಕಲ್ ನಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನಡೆಸುವ ಮೂಲಕ ಡಿಕೆಶಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಿನ್ನೆ ಡಿ.ಕೆ.ಶಿವಕುಮಾರ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ರಾಮನಗರದ ಐಜೂರು ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದಾಗಿ ಮೈಸೂರು- ಬೆಂಗಳೂರು ರಸ್ತೆ ಸಂಚಾರದಲ್ಲಿ ವ್ಯತ್ಯಯವಾಯಿತು.
ಡಿಕೆಶಿ ತವರುಜಿಲ್ಲೆ ಕನಕಪುರದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಪಕ್ಷದ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕನಕಪುರದ ಚುಂಚಿ ಫಾಲ್ಸ್ ಬಳಿಯ ಕಾಲೋನಿಯಲ್ಲಿ ಎರಡು ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ರಾಮನಗರ ಜಿಲ್ಲೆಯಾದ್ಯಂತ ಬಂದ್ ವಾತಾವರಣ ಉಂಟಾಗಿದ್ದು, ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಅರ್ಚನಾ ಆದೇಶ ಹೊರಡಿಸಿದ್ದಾರೆ. ಕನಕಪುರದಲ್ಲೂ ಸ್ವಯಂ ಪ್ರೇರಿತರಾಗಿ ವರ್ತಕರು ಅಂಗಡಿಗಳ ಬಾಗಿಲು ಮುಚ್ಚಿದ್ದಾರೆ. ಕನಕಪುರದ ಬಹುತೇಕ ಗ್ರಾಮಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ.
ರಸ್ತೆಗೆ ಬಂದ ಗಣಪ: ಡಿಕೆಶಿ ಬಂಧನ ಖಂಡಿಸಿ ರಾಮನಗರದ ಚೌಟಳ್ಳಿ ಗ್ರಾಮದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಕನಕಪುರದ ಚೌಟಳ್ಳಿ ಗ್ರಾಮಸ್ಥರು ಗಣೇಶ ಮೂರ್ತಿಯನ್ನು ರಸ್ತೆಗೆ ತಂದು ರಸ್ತೆ ತಡೆ ನಡೆಸಿದರು.











Click it and Unblock the Notifications