ಚುನಾವಣೋತ್ತರ ಸಮೀಕ್ಷೆ ಬಳಿಕ ಬಿಗ್ ರಿಲೀಫ್ ಮೂಡ್‌ನಲ್ಲಿ ಡಿಕೆ ಶಿವಕುಮಾರ್
ಕನಕಪುರ ಮೇ 11: ಚುನಾವಣೋತ್ತರ ಸಮೀಕ್ಷೆ ಬಳಿಕ ಡಿಕೆ ಶಿವಕುಮಾರ್ ಬಿಗ್ ರಿಲೀಫ್ ಮೂಡ್‌ನಲ್ಲಿದ್ದಾರೆ. ರಾಮನಗರದ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಡ್ಲಿ ಸವಿದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನಗೆ ಆರೋಗ್ಯ ಸರಿ ಇಲ್ಲ. ಸ್ಪಲ್ಪ ಜ್ವರ ಸುಸ್ತು ಇದೆ. ರಿಲ್ಯಾಕ್ಸ ಮಾಡಬೇಕು ಅನ್ಸುತು. ತಿಂಡಿ ತಿನ್ಬೇಕು ಅನ್ಸುತು. ಹೀಗಾಗಿ ತಿಂಡಿ ತಿಂತಾಯಿದಿನಿ' ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇನ್ನೂ ಎಕ್ಸಿಟ್ ಪೋಲ್ ಸಮೀಕ್ಷೆಗಳ ಬಗ್ಗೆ ಮಾತನಾಡಿದ ಅವರು, 'ಬಿಜೆಪಿಗೆ ಬಹುಮತ ಎಂದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸುಳ್ಳಾಗುತ್ತವೆ. ಪಾಪ.. ಬಿಜೆಪಿಯವರು ಕಾಂಗ್ರೆಸ್‌ಗೆ ಬಹುಮತ ಎನ್ನುವ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಸುಳ್ಳು ಅನ್ನೋದು ಬಿಟ್ಟು ಬೇರೆ ದಾರಿ ಇಲ್ಲ' ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
'ನಾವು ಕೊಟ್ಟಂತ ಗ್ಯಾರೆಂಟಿಯನ್ನು ನಂಬಿ ರೈತರು, ಮಹಿಳೆಯರು, ಯುವಕರು ಎಲ್ಲಾ ವರ್ಗದ ಜನ ನಮ್ಮ ಕೈ ಹಿಡಿದಿದ್ದಾರೆ. ಅತಂತ್ರ ಪರಿಸ್ಥಿತಿ ನಮಗೆ ಬರುವುದಿಲ್ಲ. ಸರ್ಕಾರ ರಚನೆ ಬಗ್ಗೆ ಕೌಂಟಿಂಗ್ ಆದ ಮಧ್ಯಾಹ್ನ ಮಾಡುತ್ತೇನೆ' ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
141 ಸ್ಥಾನ ಪಕ್ಕ ಗೆಲ್ಲುತ್ತೇವೆ. ಬಿಜೆಪಿ ಅವರು ಏನೋ ಪ್ರಯತ್ನ ಮಾಡುತ್ತಾರೆ, ಅವರ ಬಗ್ಗೆ ನಮಗೆ ಬೇಕಿಲ್ಲ, 13ಕ್ಕೆ ಫಲಿತಾಂಶ ಬರುವವರೆಗೆ ಕಾಯಿರಿ. ಅಮಿತ್ ಶಾ ನನ್ನ ಬಗ್ಗೆ, ನನ್ನ ಕೇಸ್ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಉತ್ತರ ಸಿಗುತ್ತದೆ. ನಾನು ನಂಬಿದ ಜನ, ನಂಬಿದ ಅಜ್ಜ, ನಂಬಿದ ದೇವರು ಕೈ ಬಿಡುವುದಿಲ್ಲ' ಎಂದು ಹೇಳಿದ್ದಾರೆ.

'ನಾನು ಹೆಲಿಕಾಪ್ಟರ್ ನಿಂದ ಬದುಕಿದ್ದೇನೆ ಅಂದರೆ ಗರುಡ ವಾಹನದಿಂದ, ದೇವರ ದಯದಿಂದ, ಜನರ ಆಶೀರ್ವಾದ ಮಾತ್ರ. ಗರುಡ ಹಕ್ಕಿ ವಿಧಾನಸೌಧಕ್ಕೆ ಕರೆದುಕೊಂಡು ನನ್ನನ್ನು ಬಿಡ್ತೀನಿ ಅಂತ ಹೇಳಿದೆ' ಎಂದು ಮುಂದೆ ತಮ್ಮ ಸರ್ಕಾರ ಪಕ್ಕ ಎಂದು ಸೂಚನೆ ನೀಡಿದ್ದಾರೆ.
ಇತ್ತ ಸಿಎಂ ಬಸವರಾಜ್ ಬೊಮ್ಮಾಯಿ ಬೆಳ್ಳಂಬೆಳಿಗ್ಗೆ ದೇವರ ಮೊರೆ ಹೋಗಿದ್ದಾರೆ. ಬೆಳಗಾವಿ ಸವದತ್ತಿಯಲ್ಲಿ ಕುಟುಂಬಸ್ಥರೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಟೆಂಪಲ್ ಭೇಟಿ ನೀಡಿದ್ದು ಕಂಡು ಬಂದಿದೆ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯ ಸುಳಿವು ನೀಡಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತೆರೆಮರೆಯಲ್ಲಿ ಕಸರತ್ತು ಆರಂಭಿಸಿವೆ.
ಸರ್ಕಾರ ರಚಿಸಲು ಬಹುಮತಕ್ಕೆ ಕೊರತೆಯಾದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಚುನಾಯಿತ ಶಾಸಕರನ್ನು ಕರೆತರಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ ನಾಯಕರು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಆದರೆ, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಐಎಎನ್‌ಎಸ್‌ಗೆ ಪ್ರತಿಕ್ರಿಯಿಸಿ, 'ಕಾಂಗ್ರೆಸ್ ಈಗ ಕರ್ನಾಟಕದ ಹಳೆಯ ಕಾಂಗ್ರೆಸ್ ಆಗಿ ಉಳಿದಿಲ್ಲ. ನಾವು ಈಗ ವಿಕಸನಗೊಂಡಿದ್ದೇವೆ ಮತ್ತು ನಮ್ಮ ಶಾಸಕರನ್ನು ಬೇಟೆಯಾಡುವುದು ಸಾಧ್ಯವಿಲ್ಲ' ಎಂದು ಹೇಳಿದರು.
ಪಕ್ಷಕ್ಕೆ ಬಹುಮತದ ಕೊರತೆಯಾದರೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಹಿರಿಯ ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಪ್ರಬಲ ಲಿಂಗಾಯತ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರುವುದರಿಂದ ಕರ್ನಾಟಕ ಕಾಂಗ್ರೆಸ್ ನಾಯಕರು ಉತ್ಸಾಹದಲ್ಲಿದ್ದಾರೆ.
ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಮಾತನಾಡಿ, ತಮ್ಮ ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳಲಾಗುತ್ತದೆ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೇರಲಿರುವುದಾಗಿ ಹೇಳಿದ್ದಾರೆ.
ಪಕ್ಷದೊಳಗೆ ಕೆಲವು ಆಂತರಿಕ ಸಮಸ್ಯೆಗಳು ಇಲ್ಲದಿದ್ದರೆ, ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆಯಬಹುದಿತ್ತು ಎಂದು ಜೆಡಿಎಸ್ ನಾಯಕತ್ವ ಅಭಿಪ್ರಾಯಪಟ್ಟಿದೆ.












Click it and Unblock the Notifications