ಶಿವಕುಮಾರ್, ಸುರೇಶ್ ಅನುಪಸ್ಥಿತಿಯಲ್ಲಿ ಮನೆ ಹಿರಿಯರ ಸಮಾಧಿಗಳಿಗೆ ಪೂಜೆ
ರಾಮನಗರ, ಸೆಪ್ಟೆಂಬರ್ 2: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮಗ ಆಕಾಶ್ ಕೆಂಪೇಗೌಡ, ಮಗಳು ಐಶ್ವರ್ಯಾ, ಹೆಂಡತಿ ಉಷಾ, ತಾಯಿ ಗೌರಮ್ಮ ಅವರು ಕನಕಪುರದ ದೊಡ್ಡ ಆಲಹಳ್ಳಿಯಲ್ಲಿ ಗಣೇಶ ಹಬ್ಬದ ದಿನವಾದ ಸೋಮವಾರ ಮಧ್ಯಾಹ್ನ 2 ಗಂಟೆಗೆ ಪೂರ್ವಿಕರ ಸಮಾಧಿಗಳಿಗೆ ಎಡೆ ಇಟ್ಟು, ಪೂಜೆ ಸಲ್ಲಿಸಿದರು.
ಜಾರಿ ನಿರ್ದೇಶನಾಲಯವು (ಇ.ಡಿ.) ಡಿ.ಕೆ. ಶಿವಕುಮಾರ್ ಅವರಿಗೆ ಸಮನ್ಸ್ ನೀಡಿ, ದೆಹಲಿಗೆ ಕರೆಸಿಕೊಂಡು ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದೆ. ಪ್ರತಿ ವರ್ಷದಂತೆ ನಡೆದು ಬಂದಿರುವ ಸಂಪ್ರದಾಯದ ಪ್ರಕಾರ ಗಣೇಶ ಹಬ್ಬದ ದಿನದಂದು ತಮ್ಮ ಪೂರ್ವಿಕರಿಗೆ ಎಡೆಯಿಟ್ಟು, ಅವರ ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಡಿ.ಕೆ. ಶಿವಕುಮಾರ್ ಅವರು ಮಾಡಿಕೊಂಡ ಮನವಿಯನ್ನು ಇ.ಡಿ. ತನಿಖಾಧಿಕಾರಿಗಳು ತಳ್ಳಿಹಾಕಿದ್ದರು.

ಆ ಕಾರಣಕ್ಕೆ ಶಿವಕುಮಾರ್, ಸೋದರ ಡಿ. ಕೆ. ಸುರೇಶ್ ಅನುಪಸ್ಥಿತಿಯಲ್ಲಿ ಕುಟುಂಬದ ಇತರ ಸದಸ್ಯರು ಎಡೆ ಇಟ್ಟು, ಪೂಜಾ ವಿಧಿ ನೆರವೇರಿಸಿದರು. ಡಿ.ಕೆ. ಶಿವಕುಮಾರ್ ಮತ್ತು ಅವರ ಸೋದರ ಸುರೇಶ್ ಇದೇ ಮೊದಲ ಬಾರಿಗೆ ತಮ್ಮ ಸಂಪ್ರದಾಯ ಪಾಲನೆಯಿಂದ ವಂಚಿತರಾಗಿದ್ದಾರೆ. ಹುಟ್ಟೂರಿನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಮನೆ ಹಿರಿಯರ ಸಮಾಧಿಗಳಿಗೆ ಪೂಜೆ ನಡೆಯುತ್ತಿದ್ದ ಸಮಯದಲ್ಲಿ ದೆಹಲಿಯಲ್ಲಿ ವಿಚಾರಣೆ ನಡೆಯುತ್ತಿತ್ತು.












Click it and Unblock the Notifications