ರಾಮನಗರ; ಮಾಸ್ಕ್ ಧರಿಸದ್ದಕ್ಕೆ ಒಂದೇ ಗಂಟೆಯಲ್ಲಿ ವಸೂಲಾಯ್ತು ಭಾರೀ ದಂಡ
ರಾಮನಗರ, ಜೂನ್ 14: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಫೀಲ್ಡಿಗಿಳಿದ ನಗರ ಸಭೆ ಸಿಬ್ಬಂದಿ ಮಾಸ್ಕ್ ಧರಿಸದ ವಾಹನ ಸವಾರರಿಂದ ಸುಮಾರು 25 ಸಾವಿರ ರೂಪಾಯಿಗೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.
ಕೊವಿಡ್-19 ಕಟ್ಟುನಿಟ್ಟಿನ ನಿಯಮಗಳನ್ವಯ ಕಾರ್ಯಾಚರಣೆಗೆ ಇಳಿದಿರುವ ನಗರಸಭೆ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿ ಓಡಾಡುತ್ತಿರುವವರನ್ನು ತಡೆದು ತಲಾ 100 ರೂ. ದಂಡ ವಿಧಿಸುವ ಮೂಲಕ ಮಾಸ್ಕ್ ಧರಿಸದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಹಲವು ತಂಡ ರಚಿಸಿಕೊಂಡು ರಸ್ತೆಗಿಳಿದಿರುವ ನಗರಸಭೆ ಸಿಬ್ಬಂದಿ ನಗರದ ವಿವಿಧ ರಸ್ತೆಗಳಲ್ಲಿ ಮಾಸ್ಕ್ ಇಲ್ಲದೆ ಓಡಾಡುತ್ತಿರುವವರಿಗೆ ದಂಡ ವಿಧಿಸುತ್ತಿದ್ದಾರೆ.

ಒಂದೆರಡು ಗಂಟೆಗಳ ಕಾರ್ಯಚರಣೆಯಲ್ಲಿ 230 ಪ್ರಕರಣಗಳ ಮೂಲಕ ಸುಮಾರು 25 ಸಾವಿರಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ಇದೇ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಿ ಎಂದು ಜನರಲ್ಲಿ ಅರಿವು ಮೂಡಿಸಿದರು. ಕಾರ್ಯಾಚರಣೆಯಲ್ಲಿ ಪರಿಸರ ಅಭಿಯಂತರ ರಾಜಶ್ರೀ, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ವಿರೂಪಾಕ್ಷ ಮತ್ತಿತರರು ಭಾಗಿಯಾಗಿದ್ದರು.












Click it and Unblock the Notifications