ರಾಮನಗರ: ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ
ರಾಮನಗರ, ಜುಲೈ 18: ಸಪ್ತಗಿರಿಗಳ ನಗರಿ, ರೇಷ್ಮೆನಗರಿ ಖ್ಯಾತಿಯ ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕಳೆದು ಎರಡು ವರ್ಷಗಳು ಕೊರೊನಾ ಹಾವಳಿಯ ಸ್ಥಗಿತವಾಗಿದ್ದ ಚಾಮುಂಡೇಶ್ವರಿ ಹಬ್ಬ ಈ ಬಾರಿ ಕಳೆಗಟ್ಟಿದ್ದು ಹಬ್ಬದ ಸಂಭ್ರಮ ನಗರದಲ್ಲಿ ಇಮ್ಮಡಿಸಿದೆ.
ರೇಷ್ಮೆನಗರಿಯ ದಸರಾ ಎಂದೇ ಖ್ಯಾತಿ ಹೊಂದಿರುವ ಐತಿಹಾಸಿಕ ರಾಮನಗರ ಚಾಮುಂಡೇಶ್ವರಿ ಕರಗದ ಪ್ರಮುಖ ಆಕರ್ಷಣೆಯೆಂದರೆ ಸಂಗೀತ ರಸ ಸಂಜೆ ಕಾರ್ಯಕ್ರಮ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಕರಗ ಮಹೋತ್ಸವ ಮುಗಿದ ಬಳಿಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾರಥ್ಯದಲ್ಲಿ ರಾಜೇಶ್ ಕೃಷ್ಣ, ಅನುರಾಧ ಭಟ್ ಸೇರಿದಂತೆ ಸಂಗೀತ ದಿಗ್ಗಜರು ಗಾನಲಹರಿ ಹರಿಸಲಿದ್ದಾರೆ.
ಚಾಮುಂಡೇಶ್ವರಿ ಕರಗ ಸುಮಾರು 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ ಎನ್ನುವ ಐತಿಹ್ಯವಿದೆ, ಆಷಾಡ ಮಾಸದ ಎರಡನೇ ಮಂಗಳವಾರ ನಡೆಯುವ ಕರಗ ಉತ್ಸವಕ್ಕೆ ನಗರ ಸಕಲ ರೀತಿಯಲ್ಲಿ ಸಜ್ಜಾಗಿದೆ. ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೋಳಿಸುತ್ತಿರುವ ನಗರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.

ಇವೆಂಟ್ ಮ್ಯಾನೇಜರ್ ಪ್ರತಿಕ್ರಿಯೆ
ಕಾರ್ಯಕ್ರಮದ ಹೊಣೆ ಹೊತ್ತಿರುವ ಎಸ್.ಬಿ ಟಾಕೀಶ್ ಈವೆಂಟ್ ಮ್ಯಾನೇಜರ್ ಸುಷ್ಮಾ ಮಾತನಾಡಿ, "ಕೋವಿಡ್ ಸೋಂಕಿನ ಭೀತಿಯಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಕಣ್ಮನ ತಣಿಸುವ ಸಂಗೀತ ರಸ ಸಂಜೆ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆಯೂ ಸಿದ್ದಗೊಳ್ಳುತ್ತಿದೆ. ಇನ್ನು ಈ ಬಾರಿ ಎಸ್‌ಬಿ ಟಾಕೀಸ್ ಸಂಗೀತ ರಸಸಂಜೆಯ ವೇದಿಕೆ ಹೊಣೆ ಹೊತ್ತಿದ್ದು, ಅರ್ಜುನ್ ಜನ್ಯರ ಸಾರಥ್ಯದಲ್ಲಿ ಗಾನಲಹರಿ ಹರಿಯಲಿದೆ.
ರಸ ಸಂಜೆ ಕಾರ್ಯಕ್ರಮದಲ್ಲಿ ಹೆಸರಾಂತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣ, ಅನುರಾಧ ಭಟ್ ಸೇರಿದಂತೆ ಕಂಬದ ರಂಗಯ್ಯ, ಐಶ್ವರ್ಯ ರಂಗರಾಜನ್, ಶ್ರೀಹರ್ಷ ಮತ್ತಿತರ ಸರಿಗಮಪ ಸ್ಟಾರ್‌ಗಳು ಸಂಗೀತ ರಸದೌತಣವನ್ನ ಉಣಬಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಾಂಬೆ ಹಾಗೂ ರಾಜ್ಯದ ನೃತ್ಯಪಟ್ಟುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಪೋಲಿಸ್ ಸರ್ಪ ಕಾವಲು
ಎರಡು ವರ್ಷಗಳ ನಂತರ ನಡೆಯುತ್ತಿರುವ ಚಾಮುಂಡೇಶ್ವರಿ ಕೊಂಡಮೋಹತ್ಸವ ಹಾಗೂ ಅದ್ಧೂರಿ ರಸ ಸಂಜೆ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇರುವ ಹಿನ್ನಲೆಯಲ್ಲಿ ನಗರದ ತುಂಬೆಲ್ಲಾ ವ್ಯಾಪಕ ಬಿಗಿ ಪೋಲಿಸ್ ಭದ್ರತೆ ಎರ್ಪಡಿಸಿರುವ ರಾಮನಗರ ಜಿಲ್ಲಾ ಪೋಲಿಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದೆ.
ಇಗಾಗಲೇ ನಗರಕ್ಕೆ ಆಗಮಿಸಿರುವ ಪೋಲಿಸ ತುಕಡಿಗಳು ಅಯಕಟ್ಟಿನ ಸ್ಥಳಗಳಲ್ಲಿ ಬೀಡುಬಿಟ್ಟಿವೆ. ನಗರದ ಭದ್ರತೆಗಾಗಿ 20 ಕ್ಕೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 2 ಕೆಎಸ್‌ಆರ್‌ಪಿ ತುಕಡಿ 300 ಮಂದಿ ಹೋಮ್‌ಗಾರ್ಡ್ಸ್ ಜಿಲ್ಲಾ, ಹೊರ ಜಿಲ್ಲೆಯ 250 ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.












Click it and Unblock the Notifications