ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಈ ಪ್ರದೇಶದ ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದೇನೆ. ಇವು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವುದಲ್ಲದೆ ಜಾಗತಿಕ ಸರಕು ಸರಪಳಿಗೂ ಅಡ್ಡಿಪಡಿಸುತ್ತವೆ" ಎಂದು ಹೇಳಿದ್ದಾರೆ. ಜೊತೆಗೆ ಸಮುದ್ರ ಮಾರ್ಗಗಳ ಸ್ವಾತಂತ್ರ್ಯ ಕಾಪಾಡುವುದು ಮತ್ತು ಸಾಗಣೆ ಮಾರ್ಗಗಳು ಸುರಕ್ಷಿತವಾಗಿರಬೇಕು ಎಂಬ ಮಹತ್ವವನ್ನೂ ಅವರು ಪುನರುಚ್ಚರಿಸಿದ್ದಾರೆ.

ಇರಾನ್ ಸರ್ಕಾರಕ್ಕೆ ಧನ್ಯವಾದ
ಇದಲ್ಲದೆ ಇರಾನ್ ಅಧ್ಯಕ್ಷರಿಗೆ ಈದ್ ಅಲ್-ಫಿತರ್ ಹಾಗೂ ನವ್ರೋಜ್ ಹಬ್ಬದ ಶುಭಾಶಯಗಳನ್ನು ಕೂಡ ಪ್ರಧಾನಿ ಮೋದಿ ತಿಳಿಸಿದ್ದು, ಈ ಹಬ್ಬದ ಕಾಲದಲ್ಲಿ ಮಧ್ಯಪ್ರಾಚ್ಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ನೆಲೆಸಲಿ ಎಂದು ಆಶಿಸಿದ್ದಾರೆ. ಇರಾನ್‌ನಲ್ಲಿರುವ ಭಾರತೀಯರ ಸುರಕ್ಷತೆಗೆ ನೀಡುತ್ತಿರುವ ಸಹಕಾರಕ್ಕಾಗಿ ಅವರು ಇರಾನ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇರಾನ್‌ನ ನಟಾನ್ಜ್ ಪರಮಾಣು ಕೇಂದ್ರದ ಮೇಲೆ ನಡೆದ ಜಂಟಿ ದಾಳಿಯ ಬೆನ್ನಲ್ಲೇ ಮೋದಿ ಅವರು ನಾಗರಿಕ ಮೂಲಸೌಕರ್ಯಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇರಾನ್‌ನಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಗಾಗಿ ಇರಾನ್ ಸರ್ಕಾರ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದ್ದಾರೆ. ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಜಾಗತಿಕ ಆರ್ಥಿಕತೆಗೆ ಅನಿವಾರ್ಯ ಎಂದು ಹೇಳಿದ್ದಾರೆ.
ಈ ಸಂಘರ್ಷದಿಂದಾಗಿ ಭಾರತಕ್ಕೆ ಬರುವ ಎಲ್‌ಪಿಜಿ (LPG) ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿ ಎದುರಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ಉಂಟಾಗಿರುವುದರಿಂದ 28 ಭಾರತೀಯ ಹಡಗುಗಳು ಪರ್ಷಿಯನ್ ಗಲ್ಫ್‌ನಲ್ಲಿ ಸಿಲುಕಿಕೊಂಡಿದ್ದವು. ಈ ಪೈಕಿ ಮೂರು ಹಡಗುಗಳು ಸಂಚಾರ ಆರಂಭಿಸಿದ್ದು, ಉಳಿದವುಗಳ ಸುರಕ್ಷಿತ ವಾಪಸಾತಿಗಾಗಿ ಭಾರತ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಮುಂದುವರಿಸಿದೆ. ಯುದ್ಧದ ಈ ಕಾರ್ಮೋಡದ ನಡುವೆಯೂ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷರಿಗೆ 'ಈದ್ ಅಲ್-ಫಿತರ್' ಮತ್ತು 'ನೌರೂಜ್' ಹಬ್ಬದ ಶುಭಾಶಯ ಕೋರಿದ್ದು, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲಿ ಎಂದು ಆಶಿಸಿದ್ದಾರೆ.

ಇಂಧನ ಬಿಕ್ಕಟ್ಟು ಭೀತಿ ನಡುವೆಯೇ ಭಾರತ ಸರ್ಕಾರ ಇರಾನ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮೂಲಕ ಎಲ್‌ಪಿಜಿ ಹಾಗೂ ಇಂಧನ ಸರಕು ಸಾಗಣೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಒತ್ತು ನೀಡುತ್ತಿದೆ. ಈ ಮಾರ್ಗ ತಾತ್ಕಾಲಿಕವಾಗಿ ಬಂದ್ ಆಗಿದ್ದರಿಂದ ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿದ್ದ 28 ಭಾರತೀಯ ಹಡಗುಗಳಲ್ಲಿ ಕೆಲವು ಈಗಾಗಲೇ ಸುರಕ್ಷಿತವಾಗಿ ಸಾಗಿವೆ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ನಡುವೆ ಭಾರತ ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದು, ಇಂಧನ ಸರಬರಾಜು ಮತ್ತು ಭಾರತೀಯರ ಸುರಕ್ಷತೆ ಮೇಲೆ ಹೆಚ್ಚಿನ ಗಮನ ಹರಿಸಿದೆ.












Click it and Unblock the Notifications