RCB: ಒಂದೊಂದು ನಿಮಿಷವೂ ಮುಖ್ಯ; ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಸಹ ಆಟಗಾರರಿಗೆ ಕೊಹ್ಲಿ ಖಡಕ್ ವಾರ್ನ್
RCB Virat Kohli: ಐಪಿಎಲ್ 19ನೇ ಆವೃತ್ತಿ ಮಾರ್ಚ್ 28ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಸೀಸನ್‌ನ ಮೊದಲ ಪಂದ್ಯಕ್ಕೂ ಮುನ್ನವೇ ವಿರಾಟ್ ಕೊಹ್ಲಿ ತಮ್ಮ ಸಿದ್ಧತೆಗಳನ್ನು ಆರಂಭಿಸಿದ್ದು, ಈ ವೇಳೆ ಸಹ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅವರ ಈ ನಡೆ ಇದೀಗ ಭಾರೀ ಸಂಚಲನ ಮೂಡಿಸಿದೆ.
ಸತತ ಮೂರು ಸೀಸನ್‌ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿರುವ ವಿರಾಟ್ ಕೊಹ್ಲಿ, ಈ ಬಾರಿಯೂ ಆರ್‌ಸಿಬಿ ಪರ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಲು ಉತ್ಸುಕರಾಗಿದ್ದಾರೆ. ಈ ಸೀಸನ್‌ನಲ್ಲಿ ಅವರು ಇನ್ನಷ್ಟು ಹೊಸ ದಾಖಲೆಗಳನ್ನು ಬರೆಯಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಅಲ್ಲದೆ, ಅಭ್ಯಾಸದ ವೇಳೆ ಸಹ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿರುವ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಸಹ ಆಟಗಾರರಿಗೆ ಕೊಹ್ಲಿ ಕಿವಿಮಾತು
"ಕಳೆದ ವರ್ಷ ನಾವು ಏನನ್ನು ಸಾಧಿಸಿದ್ದೇವೆಯೋ, ಅದನ್ನು ಪಡೆಯಲು ಹಿಂದಿನ ಎರಡು-ಮೂರು ಸೀಸನ್‌ಗಳಿಂದ ನಾವು ತುಂಬಾ ಶ್ರಮಪಟ್ಟಿದ್ದೇವೆ. ಆದರೆ, ಈ ಬಾರಿ ಹಾದಿ ಅಷ್ಟು ಸುಲಭವಿಲ್ಲ, ಸ್ಪರ್ಧೆ ಇನ್ನು ಕಠಿಣವಾಗಲಿದೆ. ಯಾಕೆಂದರೆ ಉಳಿದ ತಂಡಗಳು ನಮಗೆ ಕಠಿಣ ಪೈಪೋಟಿ ನೀಡಲು ಸಜ್ಜಾಗಿ ಬರುತ್ತವೆ," ಎಂದು ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.
ಸಹ ಆಟಗಾರರಿಗೆ ವಿರಾಟ್ ಸಮಯ ಪಾಲನೆ ಪಾಠ
"ನಾವು ಸಮಯ ವ್ಯರ್ಥ ಮಾಡಬಾರದು. ನಾವು ಎಲ್ಲರಿಗಿಂತ ಮುಂದಿರಬೇಕು, ಈಗಲೇ ಸಿದ್ಧರಾಗಿ. ನಾವು ಭಾಗವಹಿಸುವ ಪ್ರತಿಯೊಂದು ತರಬೇತಿ ಶಿಬಿರದ ಒಂದು ನಿಮಿಷವನ್ನೂ ವ್ಯರ್ಥ ಮಾಡುವುದು ಬೇಡ. ಈ ಮುಂದಿನ ಎರಡೂವರೆ ತಿಂಗಳುಗಳ ಕಾಲ ನಾವೆಲ್ಲರೂ ನಮ್ಮ ಶೇಕಡಾ 120ರಷ್ಟು ಶ್ರಮವನ್ನು ಹಾಕಲೇಬೇಕು. ನಾವೆಲ್ಲರೂ ಮತ್ತೆ ಸವಾಲು ಎದುರಿಸಲು ಸಿದ್ಧರಾಗಿದ್ದೇವೆ ಎಂಬುದು ನಿಮ್ಮೆಲ್ಲರ ಮುಖ ನೋಡಿದರೆ ತಿಳಿಯುತ್ತಿದೆ," ಎಂದು ಹೇಳಿದರು.
ಆರ್‌ಸಿಬಿ ಮುಖ್ಯ ತರಬೇತುದಾರ ಹೇಳಿದ್ದೇನು?
"ನಮಗೆ ಈ ಬಾರಿಯ ಹರಾಜು ತುಂಬಾ ಆಸಕ್ತಿದಾಯಕವಾಗಿತ್ತು. ನಿಜ ಹೇಳಬೇಕೆಂದರೆ, ನಾವು ನಮ್ಮ ತಂಡವನ್ನು ಮೊದಲಿಗಿಂತಲೂ ಉತ್ತಮಪಡಿಸಿಕೊಂಡಿದ್ದೇವೆ ಎಂದು ನನಗನ್ನಿಸುತ್ತದೆ. ನಾವು ಕೆಲವು ಅತ್ಯುತ್ತಮ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ. ವಿರಾಟ್ ಮತ್ತು ರಜತ್ ಅವರಂತಹ ಅನುಭವಿ ಆಟಗಾರರ ಜೊತೆಗೆ ಈ ಹೊಸ ಆಟಗಾರರನ್ನು ಆರ್‌ಸಿಬಿ ತಂಡಕ್ಕೆ ಒಗ್ಗಿಸುವುದು ಮತ್ತು ಎಲ್ಲರೂ ಸೇರಿ ಒಂದು ಹೊಸ ತಂಡವನ್ನು ಕಟ್ಟುವುದು ಒಂದು ರೋಚಕ ಪ್ರಕ್ರಿಯೆಯಾಗಿದೆ," ಎಂದು ಮುಖ್ಯ ತರಬೇತುದಾರ ಆಂಡಿ ಫ್ಲವರ್ ಹೇಳಿದ್ದಾರೆ.
ಮತ್ತೊಮ್ಮ ಟ್ರೋಫಿ ಗೆಲ್ಲುವ ಭರವಸೆಯಲ್ಲಿ ಆರ್‌ಸಿಬಿ
ವಿಶ್ವದರ್ಜೆಯ ಆಟಗಾರರಿದ್ದರೂ ಸಹ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಗಾಗಿ 17 ವರ್ಷಗಳ ಕಾಯಬೇಕಾಯಿತು. ಆದರೆ, ಮುಖ್ಯ ತರಬೇತುದಾರ ಆಂಡಿ ಫ್ಲವರ್ ಮತ್ತು ಕ್ರಿಕೆಟ್ ನಿರ್ದೇಶಕ ಮೋ ಬೋಬಟ್ ಅವರ ನೇತೃತ್ವದಲ್ಲಿ ತಂಡದ ದೃಷ್ಟಿಕೋನ ಬದಲಾಯಿತು. ಅವರು ತಂಡದ ಸಮತೋಲನ ಮತ್ತು ಕ್ರಮಬದ್ಧವಾದ ಟಿ20 ತಂತ್ರಗಾರಿಕೆಗೆ ಹೆಚ್ಚಿನ ಒತ್ತು ನೀಡಿದರು. ಈ ಬದಲಾವಣೆಯು ಫಲ ನೀಡಿತು. 2025ರ ಅಹಮದಾಬಾದ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಇನ್ನೂ ಆರ್‌ಸಿಬಿ ಈ ಬಾರಿಯೂ ಬಲಿಷ್ಠ ತಂಡವನ್ನು ಹೊಂದಿದ್ದು, ಮತ್ತೊಮ್ಮೆ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದೆ.












Click it and Unblock the Notifications