ಸಣ್ಣ ಗಿಫ್ಟ್, ದೊಡ್ಡ ಮೆಚ್ಚುಗೆ: ದಿವ್ಯಾಂಗ ಜೊಮಾಟೊ ಡೆಲಿವರಿ ಏಜೆಂಟ್ ಜೊತೆಗಿನ ಯುವಕನ ಮಾತುಕತೆ Viral
ಬೆಂಗಳೂರು: ದೈನಂದಿನ ಜಂಜಾಟದ ಬದುಕಿನಲ್ಲಿ ನಾವು ಕಾಣುವ ಕೆಲವು ಸಣ್ಣ ಘಟನೆಗಳು ನಮ್ಮ ಮನಸ್ಸಿನ ಮೇಲೆ ಒಳ್ಳೆಯ ಪ್ರಭಾವ ಬೀರುತ್ತವೆ. ಅಂಥದ್ದೇ ಒಂದು ಹೃದಯಸ್ಪರ್ಶಿ ಘಟನೆ ಐಟಿ ನಗರಿ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಜೊಮಾಟೊದಲ್ಲಿ ಡೆಲಿವರಿ ಪಾರ್ಟ್‌ನರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಚೇತನ ಡೆಲಿವರಿ ಏಜೆಂಟ್ ಜೊತೆಗಿನ ಯುವಕನೊಬ್ಬನ ಮಾತುಕತೆ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪರಸ್ಪರ ಗೌರವ, ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಈ ಸುಂದರ ಕ್ಷಣವು ಮನುಷ್ಯತ್ವದ ಮೌಲ್ಯವನ್ನು ಮತ್ತೊಮ್ಮೆ ನೆನಪಿಸಿದೆ.

ಈ ಘಟನೆಯನ್ನು ಸಾಯಿ ಹರ್ಷ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಕೇವಲ ಒಂದು ಫುಡ್ ಡೆಲಿವರಿ ಪ್ರಕ್ರಿಯೆ ಹೇಗೆ ಸ್ಫೂರ್ತಿದಾಯಕವಾಗಿ ಬದಲಾಯಿತು ಎಂಬುದನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ.
ಡೆಲಿವರಿ ಏಜೆಂಟ್ ಪರಿಶ್ರಮಕ್ಕೆ ಮೆಚ್ಚುಗೆ
ಸಾಯಿ ಹರ್ಷ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಅವರು ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಆಹಾರವನ್ನು ತಲುಪಿಸಲು ಬಂದ ಡೆಲಿವರಿ ಏಜೆಂಟ್ ಜೊತೆಗಿನ ಸಂಭಾಷಣೆಯನ್ನು ಸೆರೆಹಿಡಿಯಲಾಗಿದೆ. ಈ ಡೆಲಿವರಿ ಪಾರ್ಟ್‌ನರ್ ದೈಹಿಕ ಸವಾಲುಗಳನ್ನು ಹೊಂದಿದ್ದು, ಅವರ ಅನುಕೂಲಕ್ಕಾಗಿ ಕೆಲವು ವಿಶೇಷ ವ್ಯವಸ್ಥೆಗಳನ್ನು ಅಳವಡಿಸಿರುವ ಬೈಕ್‌ನಲ್ಲಿ ಕೆಲಸ ಮಾಡುತ್ತಿರುವುದನ್ನ ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.
ಆಹಾರ ಪಡೆಯುವಾಗ ಡೆಲಿವರಿ ಏಜೆಂಟ್ ಬಳಿ ಹೋಗುವ ಹರ್ಷ, ಅವರ ಶ್ರಮ ಮತ್ತು ಕೆಲಸದ ಮೇಲಿನ ಶಿಸ್ತನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. "ನೀವು ಮಾಡುತ್ತಿರುವ ಕೆಲಸ ನಿಜಕ್ಕೂ ಅದ್ಭುತವಾಗಿದೆ," ಎಂದು ಹೇಳುವ ಹರ್ಷ, "ಆಹಾರ ಡೆಲಿವರಿ ಮಾಡುವಾಗ ಜನರು ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ? ಅವರು ಬೆಂಬಲ ನೀಡುತ್ತಾರೆಯೇ?" ಎಂದು ಕಾಳಜಿಯಿಂದ ಪ್ರಶ್ನಿಸುತ್ತಾರೆ. ಇದಕ್ಕೆ ನಗುಮುಖದಿಂದ ಉತ್ತರಿಸುವ ಆ ಡೆಲಿವರಿ ಏಜೆಂಟ್, "ಹೆಚ್ಚಿನ ಗ್ರಾಹಕರು ತುಂಬಾ ಉತ್ತಮವಾಗಿ ಸ್ಪಂದಿಸುತ್ತಾರೆ," ಎಂದು ಪ್ರತಿಕ್ರಿಯಿಸಿದ್ದಾರೆ.
ಮಾತುಕತೆಯ ಕೊನೆಯಲ್ಲಿ, ಆ ಡೆಲಿವರಿ ಏಜೆಂಟ್ ಅವರ ಕೆಲಸಕ್ಕಾಗಿ ಹರ್ಷ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಅವರನ್ನು "ಸ್ಫೂರ್ತಿದಾಯಕ" ವ್ಯಕ್ತಿ ಎಂದು ಬಣ್ಣಿಸಿ, ಪ್ರೀತಿ ಮತ್ತು ಮೆಚ್ಚುಗೆಯ ಸಂಕೇತವಾಗಿ 100 ರೂಪಾಯಿಗಳ ಟಿಪ್ಸ್ ನೀಡಿದ್ದಾರೆ. ಈ ಸಣ್ಣ ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿದ ಡೆಲಿವರಿ ಏಜೆಂಟ್, ಮುಖದಲ್ಲಿ ಮಂದಹಾಸ ಬೀರುತ್ತಾ ಅಲ್ಲಿಂದ ತೆರಳುವುದರೊಂದಿಗೆ ವಿಡಿಯೋ ಮುಕ್ತಾಯವಾಗುತ್ತದೆ.
ಹರ್ಷ ಅವರು ಈ ಪೋಸ್ಟ್‌ಗೆ, "ಕೆಲವು ಡೆಲಿವರಿಗಳು ನಾವು ತರಿಸುವ ಆಹಾರಕ್ಕಿಂತ ಹೆಚ್ಚು ಕಾಲ ನಮ್ಮ ನೆನಪಿನಲ್ಲಿ ಉಳಿಯುತ್ತವೆ," ಎಂಬ ಅರ್ಥಗರ್ಭಿತ ಕ್ಯಾಪ್ಶನ್ ನೀಡಿದ್ದಾರೆ. ಈ ಮಾತು ಪ್ರತಿಯೊಬ್ಬ ವೀಕ್ಷಕನ ಮನಸ್ಸನ್ನ ಮುಟ್ಟಿದ್ದು, ವಿಡಿಯೋಗೆ ಲಕ್ಷಾಂತರ ಲೈಕ್ಸ್ ಮತ್ತು ಸಾವಿರಾರು ಕಮೆಂಟ್‌ಗಳು ಹರಿದುಬರುತ್ತಿವೆ. ದೈನಂದಿನ ಜೀವನದಲ್ಲಿ ನಾವು ಮಾಡುವ ಸಣ್ಣ ಸಹಾಯ, ದೊಡ್ಡ ಉಡುಗೊರೆಗಳಿಗಿಂತ ಹೆಚ್ಚು ಅರ್ಥಪೂರ್ಣವಾಗಿರುತ್ತವೆ ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆ ಎಂದು ಅನೇಕರು ಬಣ್ಣಿಸಿದ್ದಾರೆ.
ನೆಟ್ಟಗರಿಂದ ಪ್ರತಿಕ್ರಿಯೆ
ಈ ವಿಡಿಯೋ ನೋಡಿದ ಬಳಿಕ ಅನೇಕ ಬಳಕೆದಾರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನವರು ಈ ಮಾತುಕತೆಯಲ್ಲಿ ವ್ಯಕ್ತವಾದ ಘನತೆ ಮತ್ತು ಪರಸ್ಪರ ಗೌರವದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋದಲ್ಲಿ ಹಣ ನೀಡಿರುವುದಕ್ಕಿಂತ ಹೆಚ್ಚಾಗಿ, ಆ ವ್ಯಕ್ತಿಯನ್ನು ನಡೆಸಿಕೊಂಡ ರೀತಿ ಮತ್ತು ಅವರ ಶ್ರಮಕ್ಕೆ ನೀಡಿದ ಗೌರವ ಎಲ್ಲರ ಗಮನ ಸೆಳೆದಿದೆ.
ಸೇವಾ ವಲಯದಲ್ಲಿ ದುಡಿಯುವ ಇಂತಹ ಕಾರ್ಮಿಕರನ್ನು "ಸರ್" ಎಂದು ಕರೆಯುವುದು, ಅವರ ಕೆಲಸವನ್ನು ಗುರುತಿಸಿ, ಪ್ರೀತಿಯಿಂದ ಮಾತನಾಡುವುದು ಅವರಲ್ಲಿ ಎಷ್ಟೊಂದು ಆತ್ಮವಿಶ್ವಾಸ ತುಂಬುತ್ತದೆ ಎಂಬುದನ್ನು ಹಲವರು ಎತ್ತಿ ತೋರಿಸಿದ್ದಾರೆ.
ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಇಂತಹ ಡೆಲಿವರಿ ಸೇವೆಗಳಂತಹ ಕಠಿಣ ವಲಯಗಳಲ್ಲಿಯೂ ಸಮರ್ಥವಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂತಹ ದೃಶ್ಯಗಳು ಕೆಲಸದ ವಾತಾವರಣದಲ್ಲಿ ವಿಕಲಚೇತನರನ್ನೂ ಸಾಮಾನ್ಯರಂತೆ ಸಮಾನವಾಗಿ ಕಾಣಲು ಮತ್ತು ಅವರ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತವೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.














Click it and Unblock the Notifications