'ಬೆಂಗಳೂರು ಡೇಸ್'ನಿಂದ ಹಸೆಮಣೆ ಏರಿದ ನಟ ಫಹಾದ್-ನಜ್ರಿಯಾ ದಾಂಪತ್ಯದಲ್ಲಿ ಬಿರುಕು? ಅನುಮಾನ ಹುಟ್ಟಿಸಿದ ಪೋಸ್ಟ್
ಮಲಯಾಳಂ ಚಿತ್ರರಂಗದ ಖ್ಯಾತ ನಟಿ ನಜ್ರಿಯಾ ನಜೀಮ್ (Nazriya Nazim) ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಹಸ್ಯ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಮತ್ತು ವದಂತಿಗಳು ಶುರುವಾಗಿವೆ. ನಜ್ರಿಯಾ ಇತ್ತೀಚೆಗೆ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿದ್ದು, ಅವರ ಪತಿ ನಟ ಫಹಾದ್ ಫಾಸಿಲ್ (Fahadh Faasil) ವೈವಾಹಿಕ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ನಾನಾ ರೀತಿಯ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಆ ಪೋಸ್ಟ್‌ನಲ್ಲಿ ಏನಿದೆ?
ನಜ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಕೋಟ್ ಹಂಚಿಕೊಂಡಿದ್ದಾರೆ. "ಕೆಂಪು ಬಾವುಟಗಳನ್ನು (Red Flags-ಅಪಾಯದ ಮುನ್ಸೂಚನೆ) ಬೆನ್ನಟ್ಟುವ ಗೂಳಿಗಳಿಗೆ ಹುಚ್ಚು ಹಿಡಿದಿದೆ ಎಂದು ನಾನು ಭಾವಿಸಿದ್ದೆ, ಆದರೆ ಈಗ ನಾನೂ ಅದೇ ಪರಿಸ್ಥಿತಿಯಲ್ಲಿದ್ದೇನೆ" ಎಂದಿದ್ದೆ. ಆದರೆ ಯಾವುದೇ ಸಂದರ್ಭ ಅಥವಾ ಹಿನ್ನೆಲೆಯ ವಿವರಣೆ ನೀಡದೆ ಹಂಚಿಕೊಂಡಿರುವ ಈ ನಿಗೂಢ ಪೋಸ್ಟ್, ಸದ್ಯ ನೆಟ್ಟಿಗರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ವೈವಾಹಿಕ ಜೀವನದಲ್ಲಿ ಬಿರುಕು?
2014ರಲ್ಲಿ ಮದುವೆಯಾದ ನಜ್ರಿಯಾ ಮತ್ತು ಫಹಾದ್ ಫಾಸಿಲ್ ಜೋಡಿ ಮಲಯಾಳಂ ಚಿತ್ರರಂಗದ ಅತ್ಯಂತ ಸುಂದರ ಹಾಗೂ ನೆಚ್ಚಿನ ದಂಪತಿಗಳಲ್ಲಿ ಒಬ್ಬರು. 'ಬೆಂಗಳೂರು ಡೇಸ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ತಮ್ಮ ವೈಯಕ್ತಿಕ ಜೀವನವನ್ನು ಸದಾ ಮಾಧ್ಯಮ ಮತ್ತು ಲೈಮ್‌ಲೈಟ್‌ನಿಂದ ದೂರವಿಡುತ್ತಾ ಬಂದಿದ್ದಾರೆ. ಆದರೆ ಈ ಪೋಸ್ಟ್ ಬೆನ್ನಲ್ಲೇ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲವೇ ಎಂಬ ಆತಂಕವೂ ಅಭಿಮಾನಿಗಳಲ್ಲಿ ಮೂಡಿದೆ.
ಆನ್‌ಲೈನ್ ವೇದಿಕೆಗಳಲ್ಲಿ ಅಭಿಮಾನಿಗಳು ನಟಿಯ ಪೋಸ್ಟ್ ಬಗ್ಗೆ ಚರ್ಚಿಸುತ್ತಿದ್ದಾರೆ. ಕೆಲವರು ದಂಪತಿ ನಡುವಿನ ಬಿರುಕಿನ ಬಗ್ಗೆ ಹರಡಿದ್ದ ಹಳೆಯ ಗಾಳಿಸುದ್ದಿಗಳನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದರೆ, ಇನ್ನು ಕೆಲವರು ನಜ್ರಿಯಾ ಈ ಹಿಂದೆಯೂ ಇಂತಹ ಸಾಮಾನ್ಯ ಕೋಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.
ಚಿತ್ರದ ಪ್ರಚಾರದ ತಂತ್ರವೇ?
ಮತ್ತೊಂದೆಡೆ, ಈ ಪೋಸ್ಟ್‌ಗೆ ವೈಯಕ್ತಿಕ ಕಾರಣಗಳಿಗಿಂತ ಚಿತ್ರರಂಗದ ಲಿಂಕ್ ಇರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನಜ್ರಿಯಾ ಅವರು ನಟ ಟೊವಿನೋ ಥಾಮಸ್ ಜೊತೆ ನಟಿಸುತ್ತಿರುವ ಮುಂಬರುವ ಚಿತ್ರ 'ಗ್ರಾಸಿಯಾಸ್ ಎಲ್ ಕ್ಲಾಸಿಕೋ' (Gracias El Clásico) ಇದರ ಪ್ರಚಾರಕ್ಕಾಗಿ ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ.

ಈ ಸಿನಿಮಾದ ಕಥೆಯು ಸ್ಪೇನ್ ದೇಶದ ಹಿನ್ನೆಲೆ ಹಾಗೂ ಅಲ್ಲಿನ ಪ್ರಸಿದ್ಧ 'ಗೂಳಿ ಕಾಳಗ'ದ ಕಲ್ಪನೆಯನ್ನು ಹೊಂದಿದೆ ಎನ್ನಲಾಗಿದೆ. ಪೋಸ್ಟ್‌ನಲ್ಲಿ 'ಗೂಳಿ' ಮತ್ತು 'ರೆಡ್ ಫ್ಲಾಗ್ಸ್' ಉಲ್ಲೇಖವಿರುವುದರಿಂದ, ಇದು ಸಿನಿಮಾದ ಪ್ರಚಾರಕ್ಕಾಗಿ ಸೃಷ್ಟಿಸಿರಬಹುದು ಎಂದು ಹೇಳುತ್ತಿದ್ದಾರೆ. ಪ್ರಸ್ತುತ ನಜ್ರಿಯಾ ಆಗಲಿ ಅಥವಾ ಫಹಾದ್ ಆಗಲಿ ಈ ವದಂತಿಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ 'ಸೂಕ್ಷ್ಮದರ್ಶಿನಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ, ಪ್ರಸ್ತುತ 'ಗ್ರಾಸಿಯಾಸ್ ಎಲ್ ಕ್ಲಾಸಿಕೋ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಜಿತು ಮಾಧವನ್ ನಿರ್ದೇಶನದ, ಸೂರ್ಯ ನಟನೆಯ 'ಸೂರ್ಯ 47' ಚಿತ್ರದ ಮೂಲಕ ಸುದೀರ್ಘ 12 ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಇನ್ನು 'ಪೇಟ್ರಿಯಾಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಫಹಾದ್, ತೆಲುಗಿನಲ್ಲಿ 'ಡೋಂಟ್ ಟ್ರಬಲ್ ದಿ ಟ್ರಬಲ್' ಮತ್ತು ಮಲಯಾಳಂನಲ್ಲಿ 'ಕರಾಟೆ ಚಂದ್ರನ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಫಹಾದ್ ಮೋಡಿ ಮಾಡಿದ್ದರು. ಇದಾದ ಬಳಿಕ ಫಹಾದ್ ಕ್ರೇಜ್ ಜೋರಾಗಿದ್ದು, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಯಾವುದೇ ಗಟ್ಟಿಯಾದ ಆಧಾರಗಳಿಲ್ಲದ ಕಾರಣ, ಇದು ಕೇವಲ ಸಿನಿಮಾದ ಪ್ರಚಾರಕ್ಕಾಗಿ ಅಥವಾ ಸಾಮಾಜಿಕ ಜಾಲತಾಣದ ಸಾಮಾನ್ಯ ಪೋಸ್ಟ್ ಆಗಿರಬಹುದು ಎಂದೇ ಹೇಳಲಾಗುತ್ತಿದೆ.













Click it and Unblock the Notifications