ಇನ್ಮುಂದೆ ದೆಹಲಿ–ಋಷಿಕೇಶ್ ಪ್ರಯಾಣ ಕೇವಲ 3 ಗಂಟೆ: ನಮೋ ಭಾರತ್ ರೈಲು ವಿಸ್ತರಣೆಗೆ ಗ್ರೀನ್ ಸಿಗ್ನಲ್
ದೆಹಲಿಯಿಂದ ಋಷಿಕೇಶ್‌ಗೆ ಹೊಗಬೇಕೆಂದರೆ ರಸ್ತೆ ಮಾರ್ಗದಲ್ಲಿ ಕನಿಷ್ಟ ಐದರಿಂದ ಆರು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತಿತ್ತು. ಆದರೆ ಇದೀಗ ಆ ಪ್ರಯಾಣದ ಸಮಯ ಕೇವಲ ಮೂರು ಗಂಟೆಗಳಿಗೆ ಇಳಿಯುವ ಸಾಧ್ಯತೆ ಇದೆ. ಕಾರಣ ಇಷ್ಟೆ, ಮೀರತ್್ನಿಂದ ಋಷಿಕೇಶಕ್ಕೆ ನಮೋ ಭಾರತ್ ರೈಲು ವಿಸ್ತರಣೆ ಯೋಜನೆಗೆ ಅನುಮೋದನೆ ಸಿಕ್ಕಿದೆ.
ಈ ಯೋಜನೆಯಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ ಸರ್ಕಾರ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ನಡುವೆ ಒಪ್ಪಂದವಾಗಿದ್ದು, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಮಹತ್ವದ ಬೆಳವಣಿಗೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಿಂದ ಯಾತ್ರಾರ್ಥಿಗಳು, ಪ್ರವಾಸಿಗರು ಹಾಗೂ ಸ್ಥಳೀಯ ಪ್ರದೇಶದ ನಿವಾಸಿಗಳಿಗೆ ವೇಗವಾದ, ಸುರಕ್ಷಿತ ಮತ್ತು ಆಧುನಿಕ ಸಾರಿಗೆ ಸೌಲಭ್ಯ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಯೋಜನೆಯ ವಿಶೇಷತೆ?
ಪ್ರಸ್ತುತ ದೆಹಲಿಯ ಸರಾಯಿ ಕಾಳೆ ಖಾನ್‌ನಿಂದ ನಿಲ್ದಾಣದಿಂದ ಮೀರತ್‌ನ ಮೋದಿಪುರಂ ನಿಲ್ದಾಣದವರೆಗೆ ಸುಮಾರು 82 ಕಿಲೋಮೀಟರ್ ಉದ್ದದ ನಮೋ ಭಾರತ್ ಕಾರಿಡಾರ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಇದನ್ನು ಹೆಚ್ಚುವರಿಯಾಗಿ 150 ಕಿಲೋಮೀಟರ್ ವಿಸ್ತರಿಸಿ ಋಷಿಕೇಶ್‌ನ ಲಕ್ಷ್ಮಣ ಝೂಲಾವರೆಗೆ ಸಂಪರ್ಕಿಸಲು ಯೋಜಿಸಲಾಗಿದೆ.
ಒಂದು ಗಂಟೆಗೆ ಬರೋಬ್ಬರಿ 160 ಕಿಲೋಮೀಟರ್ ವೇಗದಲ್ಲಿ ಸಂಚರಿಸಬಲ್ಲ ಈ ಸೆಮಿ-ಹೈ ಸ್ಪೀಡ್ ರೈಲು, ದೆಹಲಿಯಿಂದ ಋಷಿಕೇಶ್‌ವರೆಗೆ ಸುಮಾರು 230 ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗೆ ಕ್ರಮಿಸಿ ಋಷಿಕೇಶ್ ತಲುಪುತ್ತದೆ.
ಯಾವೆಲ್ಲಾ ಪ್ರದೇಶಗಳ ಮೂಲಕ ರೈಲು ಸಂಚರಿಸಲಿದೆ?
ಈ ಹೊಸ ಮಾರ್ಗವು ಮೀರತ್‌ನ ಮೋದಿಪುರಂನಿಂದ ಆರಂಭವಾಗಿ ಮುಜಫ್ಫರ್‌ನಗರ, ಉತ್ತರಾಖಂಡದ ರೂರ್ಕಿ, ಹರಿದ್ವಾರದ ಹರ ಕಿ ಪೌರಿ ಮೂಲಕ ಸಾಗಲಿದೆ. ಅಂತಿಮವಾಗಿ ಋಷಿಕೇಶ್‌ನ ಪ್ರಸಿದ್ಧ ಲಕ್ಷ್ಮಣ ಝೂಲಾ ತಲುಪಿ ಇದರ ಪ್ರಯಾಣ ಇಲ್ಲಿಗೆ ಕೊನೆಗೊಳ್ಳಲಿದೆ. ಇದರ ಒಟ್ಟು 150 ಕಿಲೋಮೀಟರ್ ವಿಸ್ತರಣೆಯಲ್ಲಿ 72 ಕಿಲೋಮೀಟರ್ ಉತ್ತರ ಪ್ರದೇಶದಲ್ಲಿ ಹಾಗೂ 78 ಕಿಲೋಮೀಟರ್ ಉತ್ತರಾಖಂಡದಲ್ಲಿ ಇರಲಿದೆ.
ಅತಿ ಶೀಘ್ರದಲ್ಲೇ ಡಿಪಿಆರ್ ಸಮೀಕ್ಷೆ
ಯೋಜನೆಯ ನಿಖರ ಮಾರ್ಗ, ನಿಲ್ದಾಣಗಳ ಸ್ಥಳ ಸೇರಿದಂತೆ ಹಲವು ತಾಂತ್ರಿಕ ಅಂಶಗಳನ್ನು ಅಂತಿಮಗೊಳಿಸಲು ಶೀಘ್ರದಲ್ಲೇ ವಿವರವಾದ ಯೋಜನಾ ವರದಿ (DPR) ಸಮೀಕ್ಷೆ ಆರಂಭವಾಗಲಿದೆ.
ಈ ಹಿಂದಿನ ವರದಿಗಳ ಪ್ರಕಾರ ಗಮನಿಸಿದರೆ, ದೌರಾಲಾ, ಸಾಕೌತಿ, ಖತೌಲಿ ಮತ್ತು ಪುರಕಾಜಿ ಪ್ರದೇಶಗಳಲ್ಲೂ ನಿಲ್ದಾಣಗಳ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿತ್ತು. ಹರಿದ್ವಾರದ ಕುಂಭ ಪ್ರದೇಶ ಪರಿಸರ ಸೂಕ್ಷ್ಮ ವಲಯವಾಗಿರುವುದರಿಂದ, ಅಲ್ಲಿ ಹೈ-ಸ್ಪೀಡ್ ರೈಲು ಸಂಚಾರಕ್ಕೆ ಅಗತ್ಯವಾದ ಸ್ವಯಂಚಾಲಿತ ವಿದ್ಯುತ್ ವ್ಯವಸ್ಥೆ ಹಾಗೂ ಭೂಗತ ಕೇಬಲಿಂಗ್ ಕಾಮಗಾರಿಗಳಿಗಾಗಿ ಸುಮಾರು 750 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ತೀರ್ಥಯಾತ್ರೆ ಮಾಡುವವರಿಗೆ ಇದು ದೊಡ್ಡ ಅನುಕೂಲ
ಈ ವರ್ಷದ ಆರಂಭದಲ್ಲಿ ದೆಹಲಿ ಮತ್ತು ಮೀರತ್ ನಡುವೆ ನಮೋ ಭಾರತ್ ರೈಲು ಸೇವೆ ಆರಂಭಗೊಂಡಿತ್ತು. ಇದೀಗ ಅದನ್ನು ಋಷಿಕೇಶ್್ದವರೆಗೆ ವಿಸ್ತರಿಸುವ ಮೂಲಕ ಉತ್ತರ ಭಾರತದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ತಲುಪುವುದು ಇನ್ನಷ್ಟು ಸುಲಭವಾಗಲಿದೆ. ಹರ ಕಿ ಪೌರಿ ಮತ್ತು ಲಕ್ಷ್ಮಣ ಝೂಲಾ ಸಮೀಪ ನಿಲ್ದಾಣಗಳು ನಿರ್ಮಾಣವಾದರೆ, ದೆಹಲಿಯಿಂದ ಗಂಗಾ ತೀರದ ಆಧ್ಯಾತ್ಮಿಕ ನಗರಗಳಿಗೆ ನೇರ, ವೇಗದ ಮತ್ತು ಆರಾಮದಾಯಕ ಸಂಪರ್ಕ ಸಿಗಲಿದೆ. ಇದು ಪ್ರವಾಸೋದ್ಯಮ ಮತ್ತು ಯಾತ್ರಾ ಸಂಚಾರಕ್ಕೆ ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದೆ.














Click it and Unblock the Notifications