ಮನು ಹೆತ್ತವರು ವಿಷ ಕುಡಿದಿರಲಿಲ್ಲ, ಬಲವಂತವಾಗಿ ಯಾರೋ ಉಣಿಸಿದ್ದರು
ರಾಮನಗರ, ಡಿಸೆಂಬರ್ 15: ಮಗ ಗೃಹಿಣಿಯೊಂದಿಗೆ ಓಡಿ ಹೋಗಿದ್ದಕ್ಕಾಗಿ ಮನನೊಂದು ಹೆತ್ತವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಹೊಸ ತಿರುವು ದೊರೆತಿದೆ.
ದಂಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ತಮ್ಮ ಸೊಸೆಯನ್ನು ಕರೆದೊಯ್ದಿದ್ದಾನ ಎಂದು ಗೃಹಿಣಿ ಗಂಡನ ಮನೆಯವರು ಈ ದಂಪತಿಗೆ ವಿಷ ಉಣಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನಕಪುರ ತಾಲೂಕಿನ ಕಲ್ಲೀಗೌಡನದೊಡ್ಡಿ ಗ್ರಾಮ ಸಿದ್ದರಾಜು, ಸಾಕಮ್ಮ ಮೃತ ದಂಪತಿ. ಈ ದಂಪತಿಯ ಮಗ ಮನು ಜವರಾಯಿಗೌಡ ಎಂಬುವವರ ಸೊಸೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾನೆ ಎಂದು ಹೇಳಿ ವಿಷಉಣಿಸಿದ್ದಾರೆ ಎನ್ನಲಾಗಿದೆ.

ಜವರೇಗೌಡ ಕುಟುಂಬದ ಗುಂಪು ಬುಧವಾರ ಮಧ್ಯರಾತ್ರಿ 12 ಗಂಟೆಗೆ ಮನೆಗೆ ನುಗ್ಗಿ ಸಿದ್ದರಾಜು, ಸಾಕಮ್ಮ ದಂಪತಿಯ ಮೇಲೆ ಹಲ್ಲೆ ನಡೆಸಿ ಅವರಿಗೆ ವಿಷ ಪ್ರಾಶನ ಮಾಡಿದ್ದಾರೆ. ಬಿಡಿಸಲು ಬಂದ ನೆರೆಹೊರೆಯವರನ್ನು ಹೊರಕ್ಕೆ ತಳ್ಳಿ ಹೊರಗಿನಿಂದ ಚಿಲಕ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಸಂಬಂಧಿಕರು ನೀಡಿದ ಮಾಹಿತಿಯಿಂದ ಸ್ಥಳಕ್ಕೆ ಬಂದ ಅಂಬ್ಯುಲೆನ್ಸ್ ಅನ್ನು ತಡೆದು ಅವರು ಅಲ್ಲಿಯೇ ಸಾಯಲಿ ಎಂದು ದುರ್ವರ್ತನೆ ತೋರಿದ್ದಾರೆ. ಅಂಬ್ಯುಲೆನ್ಸ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದಾಗ ಒಂದು ಗಂಟೆ ಬಳಿಕ ಅವಕಾಶ ಮಾಡಿಕೊಟ್ಟಿದ್ದಾರೆ, ಆದರೆ ತೀವ್ರ ಅಸ್ವಸ್ಥರಾಗಿದ್ದ ಸಿದ್ದರಾಜು ಹಾಗೂ ಸಾಕಮ್ಮ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.












Click it and Unblock the Notifications