ಬಿಡದಿ: 15 ರೂ. ವಿದ್ಯುತ್ ಬಿಲ್ ಪಾವತಿಸಿ ಎಂದು ಖಾತೆಯಿಂದ 7 ಲಕ್ಷ ರೂ. ದೋಚಿದ ವಂಚಕರು
ರಾಮನಗರ, ಡಿಸೆಂಬರ್, 02: ಕೇವಲ 15 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ ಪಾವತಿ ಮಾಡಿ ಎಂದು ಮೊಬೈಲ್‌ಗೆ ಲಿಂಕ್ ಕಳಿಸಿ ಬರೋಬ್ಬರಿ 7 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಂಡು ಬಿಡದಿಯ ಮಂಜುನಾಥ್ ಎಂಬುವವರನ್ನು ವಂಚಿಸಿದ್ದಾರೆ.
ಬಿಡದಿ ಪಟ್ಟಣದ ರಾಘವೇಂದ್ರ ಲೇಔಟ್ ನಿವಾಸಿ ಮಂಜುನಾಥ್ ಎಂಬುವವರನ್ನು ಆನ್‌ಲೈನ್ ವಂಚಕರು ವಂಚಿಸಿ ಸುಮಾರು 7 ಲಕ್ಷ ಹಣವನ್ನು ದೋಚಿದ್ದಾರೆ. ನವೆಂಬರ್ 27ರಂದು ಮಂಜುನಾಥ್ ಅವರ ಮೊಬೈಲ್‌ಗೆ ಒಂದು ಎಸ್.ಎಂ.ಎಸ್ ಬಂದಿತ್ತು. ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ನಿಮ್ಮ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಆದ್ದರಿಂದ 15 ರೂಪಾಯಿಗಳನ್ನ ಪಾವತಿ ಮಾಡಿ ಎಂದು ಒಂದು ಲಿಂಕ್ ಕಳುಹಿಸಿ ಎಂದು ಹೇಳಿ ವಂಚಕರು ಬಲೆ ಬೀಸಿದ್ದಾರೆ. ವಂಚನೆ ಜಾಲವನ್ನು ಅರಿಯದ ಮಂಜುನಾಥ್ ತಮ್ಮ ಮೊಬೈಲ್‌ಗೆ ಬಂದ ಲಿಂಕ್ ಓಪನ್ ಮಾಡಿ ತಮ್ಮ ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್ ನಂಬರ್, ಪಾನ್ ನಂಬರ್ ನಮೂದಿಸಿ ಸಬ್‌ಮಿಟ್ ಮಾಡಿದ್ದಾರೆ. ಆಗ ತಕ್ಷಣ ಅವರ ಖಾತೆಯ 15 ರೂಪಾಯಿ ಕಡಿತವಾಗಿತ್ತು. ಇದಾದ ನಂತರ ಅವರ ಇ- ಮೇಲ್ ಗೆ ನಿಮ್ಮ ಖಾತೆಗೆ 24 ಲಕ್ಷ ಹಣ ಜಮೆಯಾಗಿರುವುದಾಗಿ ಮೇಲ್ ಬಂದಿದೆ.
7 ಲಕ್ಷ ರೂಪಾಯಿ ಹಣ ಮಾಯ
ಇದ್ದಕ್ಕಿದ್ದಂತೆ ತಮ್ಮ ಖಾತೆಗೆ ಹಣ ಜಮೆಯಾಗಿದ್ದನ್ನು ಕಂಡು ಮಂಜುನಾಥ್ ಕೆಲ ಕಾಲ ಗಾಬರಿಗೊಂಡಿದ್ದಾರೆ. ಇದಾದ ಕೆಲ ಸಮಯದಲ್ಲೆ 7 ಸಂದೇಶಗಳು ಮಂಜುನಾಥ್ ಅವರ ಮೇಲ್‌ಗೆ ಬಂದಿವೆ. ಮೇಲ್‌ಗೆ ಬಂದ ಸಂದೇಶಗಳನ್ನು ಓಪನ್ ಮಾಡಿದಾಗ 7 ಲಕ್ಷ ರೂಪಾಯಿ ಹಣ ಖಾತೆಯಿಂದ ವರ್ಗಾವಣೆ ಆಗಿತ್ತು. ಏಕಾಏಕಿ ಖಾತೆಯಲ್ಲಿದ್ದ ಹಣ ಮಾಯವಾಗಿರುದನ್ನು ಕಂಡು ಮಂಜುನಾಥ್ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ಹೆಚ್ಚೆತ್ತ ಮಂಜುನಾಥ್ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ತಮ್ಮ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಅಲ್ಲದೇ ಈ ಸಂಬಂಧ ರಾಮನಗರದ ಸೈಬರ್ ಪೋಲಿಸ್ ಠಾಣೆಯಲ್ಲಿ ತಮಗೆ ವಂಚಿಸಿದ ವಂಚಕರ ವಿರುದ್ಧ ದೂರು ದಾಖಲಿಸಿದ್ದಾರೆ.

ವಂಚನೆಗೆ ಬ್ಯಾಂಕ್‌ನವರೇ ನೇರ ಕಾರಣ
ತಮಗಾದ ವಂಚನೆ ಸಂಬಂಧ ಪ್ರತಿಕ್ರಿಯೆ ನೀಡಿದ ಮಂಜುನಾಥ್, ಪೂನಾದ ಐಸಿಐಸಿಐ ಬ್ಯಾಂಕ್‌ನಲ್ಲಿ 042401522811 ಸಂಖ್ಯೆಯ ಉಳಿತಾಯ ಖಾತೆಯನ್ನು ಹೊಂದಿದ್ದೇನೆ. ನವೆಂಬರ್ 27ರಂದು 9689942992 ಸಂಖ್ಯೆಯ ಮೊಬೈಲ್‌ಗೆ 6291349260 ನಂಬರ್‌ನಿಂದ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಲಿಂಕ್ ಬಂದಿತ್ತು. ನಂತರ ಲಿಂಕ್ ಓಪನ್ ಮಾಡಿ ಬಿಲ್ ಪೇ ಮಾಡಿದೆ. ಸಂಜೆ 8 ಗಂಟೆ ಸಮಯಕ್ಕೆ ನಿಮ್ಮ ಖಾತೆಗೆ 24 ಲಕ್ಷ ರೂಪಾಯಿ ಹಣ ಜಮೆ ಆಗಿದೆ. ನಂತರ ಪರಿಶೀಲಿಸಿದಾಗ ಹಣ ಇರುವುದು ಖಚಿತವಾಯಿತು. ಇದಾದ ಸ್ವಲ್ಪ ಸಮಯದ ಬಳಿಕ ಖಾತೆಯಿಂದ 7 ಬಾರಿ ತಲಾ ಒಂದು ಲಕ್ಷ ರೂಪಾಯಿನಂತೆ ಒಟ್ಟು 7 ಲಕ್ಷ ವಂಚನೆ ಎಗರಿಸಿದ್ದಾರೆ. ತಮಗಾದ 7 ಲಕ್ಷ ರೂಪಾಯಿ ವಂಚನೆಗೆ ಪೂನಾದ ಐಸಿಐಸಿಐ ಬ್ಯಾಂರ್‌ನವರೇ ನೇರ ಕಾರಣ ಎಂದು ಮಂಜುನಾಥ್ ಆರೋಪಿಸಿದ್ದಾರೆ.