Bengaluru-Mysuru Toll: ಬೆಂಗಳೂರು–ಮೈಸೂರು ಟೋಲ್ ದರ ಮತ್ತೆ ಹೆಚ್ಚಳ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು-ಮೈಸೂರು ನಡುವೆ ಸಂಚರಿಸುವವರಿಗೆ ದೊಡ್ಡ ಶಾಕ್ ನೀಡಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಮತ್ತೆ ಹೆಚ್ಚಳ ಮಾಡಿದೆ. ಶೇ 5ರಿಂದ ಶೇ 10ರವರೆಗೆ ದರ ಏರಿಕೆ ಮಾಡಲಾಗಿದ್ದು, ಈ ಪರಿಷ್ಕೃತ ದರವು ಏಪ್ರಿಲ್ 1ರ ಮಂಗಳವಾರದಿಂದಲೇ ಜಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008ರ ಅಡಿಯಲ್ಲಿ ವಾರ್ಷಿಕ ಪರಿಷ್ಕರಣೆಯ ಭಾಗವಾಗಿ ಗಣಂಗೂರು, ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿಯ ಟೋಲ್ ಪ್ಲಾಜಾಗಳ ದರ ಏರಿಕೆ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ, ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿಯಲ್ಲಿ ಬರುವ ಟೋಲ್ ಪ್ಲಾಜಾದಿಂದ ನಿಡಘಟ್ಟವರೆಗೆ ಶೇ 9ರಷ್ಟು ಟೋಲ್ ದರ ಏರಿಕೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ನಿಡಘಟ್ಟದಿಂದ ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಪ್ಲಾಜಾವರೆಗೆ ಶೇ 5ರಷ್ಟು ದರ ಹೆಚ್ಚಿಸಲಾಗಿದೆ.

ಸದ್ಯ ಈಗ ಎರಡು ಕಡೆ ಮಾತ್ರ ಟೋಲ್‌ಗಳನ್ನು ಸಂಗ್ರಹಿಸಲಾಗುತ್ತಿದೆ. ಕಾರ್, ಜೀಪು, ಲಘು ವಾಹನ, ಮಿನಿ ಬಸ್, ಟ್ರಕ್, ಬಸ್, 2 ಆ್ಯಕ್ಸಲ್ ವಾಹನ, ಮೂರು ಆ್ಯಕ್ಸಲ್ ವಾಣಿಜ್ಯ ವಾಹನ, ಕಟ್ಟಡ ನಿರ್ಮಾಣ ಭಾರಿ ವಾಹನ ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸಲ್ ವಾಹನದ ಟೋಲ್ ದರಗಳು ಕೂಡ ಪರಿಷ್ಕರಣೆಯಾಗಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಹೆದ್ದಾರಿಯ ಎಂಟ್ರಿ ಹಾಗೂ ಎಕ್ಸಿಟ್ ಸ್ಥಳಗಳಲ್ಲಿ ಇನ್ನೂ ಹಲವು ಟೋಲ್ ಬೂತ್‌ಗಳನ್ನು ನಿರ್ಮಿಸಲು ಮುಂದಾಗಿದೆ. ವಾಹನಗಳು ಪ್ರಯಾಣಿಸಿದ ದೂರವನ್ನು ಆಧರಿಸಿ ಪಾವತಿಸಲು ಈ ಬೂತ್‌ಗಳು ಅನುಕೂಲ ಮಾಡಿಕೊಡಲಿವೆ. ಈ ಮಾರ್ಗದಲ್ಲಿ ಪ್ರತಿದಿನವೂ 80,000ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಈ ಹಿನ್ನೆಲೆ ಈ ಹೊಸ ದರಗಳು ಖಾಸಗಿ ಮತ್ತು ವಾಣಿಜ್ಯ ವಾಹನ ಮಾಲೀಕರಿಗೆ ಶಾಕ್ ನೀಡಿದೆ.

ಬೆಂಗಳೂರಿನ ಕುಂಬಳಗೋಡಿನಿಂದ ಪ್ರಾರಂಭವಾಗಿ ಸುಮಾರು 118 ಕಿ.ಮೀ. ಉದ್ದದ ಈ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ ಹಾಗೂ ಮಂಡ್ಯದಲ್ಲಿ 58 ಕಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಟೋಲ್ ಪ್ಲಾಜಾದಿಂದ 20 ಕಿ.ಮೀ. ಒಳಗಿನ ವಾಣಿಜ್ಯೇತರ ವಾಹನಗಳಿಗೆ ಈಗ ಮಾಸಿಕ ಪಾಸ್ ದರ ಕೂಡ ₹340ರಿಂದ ₹350ಗೆ ಏರಿಕೆ ಮಾಡಲಾಗಿದೆ.
ಪರಿಷ್ಕೃತ ದರ ಎಷ್ಟಿದೆ? (ಬೆಂಗಳೂರಿನಿಂದ ನಿಡಘಟ್ಟಕ್ಕೆ)
* ಕಾರುಗಳು, ವ್ಯಾನ್‌ಗಳು, ಜೀಪ್‌ಗಳು: ಸಿಂಗಲ್ ಟ್ರಿಪ್ ₹180, ರೌಂಡ್ ಟ್ರಿಪ್ ₹270
* ಲಘು ವಾಣಿಜ್ಯ ವಾಹನಗಳು, ಮಿನಿಬಸ್‌ಗಳು: ₹290 (ಒಂದು-ಮಾರ್ಗ), ₹430 (ರೌಂಡ್ ಟ್ರಿಪ್)
* ಟ್ರಕ್‌ಗಳು ಮತ್ತು ಬಸ್‌ಗಳು (ಎರಡು ಆಕ್ಸಲ್‌ಗಳು): ₹605 (ಒಂದು-ಮಾರ್ಗ), ₹905 (ರೌಂಡ್ ಟ್ರಿಪ್)
* ಮೂರು-ಆಕ್ಸಲ್ ವಾಣಿಜ್ಯ ವಾಹನಗಳು: ₹660 (ಒಂದು-ಮಾರ್ಗ), ₹990 (ರೌಂಡ್ ಟ್ರಿಪ್)
* ಭಾರೀ ನಿರ್ಮಾಣ ವಾಹನಗಳು (4-6 ಆಕ್ಸಲ್‌ಗಳು): ₹945 (ಒಂದು-ಮಾರ್ಗ), ₹1,420 (ರೌಂಡ್ ಟ್ರಿಪ್)
* ದೊಡ್ಡ ಗಾತ್ರದ ವಾಹನಗಳು (7+ ಆಕ್ಸಲ್‌ಗಳು): ₹1,155 (ಒಂದು-ಮಾರ್ಗ), ₹1,730 (ರೌಂಡ್ ಟ್ರಿಪ್)
ಮಾಸಿಕ ಪಾಸ್ ದರ ಪಟ್ಟಿ
* ಕಾರುಗಳು, ಜೀಪ್‌ಗಳು, ವ್ಯಾನ್‌ಗಳು: ₹5,945
* ಲಘು ವಾಣಿಜ್ಯ ವಾಹನಗಳು: ₹9,605
* ಟ್ರಕ್, ಬಸ್‌ಗಳು (ಎರಡು ಆಕ್ಸಲ್‌ಗಳು): ₹20,130
* ಮೂರು-ಆಕ್ಸಲ್ ವಾಣಿಜ್ಯ ವಾಹನಗಳು: ₹21,960
* ಭಾರೀ ನಿರ್ಮಾಣ ವಾಹನಗಳು (4-6 ಆಕ್ಸಲ್‌ಗಳು): ₹31,565
* ದೊಡ್ಡ ಗಾತ್ರದ ವಾಹನಗಳು: ₹38,430












Click it and Unblock the Notifications