Bengaluru Mysuru Expressway: NHAIನ ಆದೇಶವಿದ್ದರೂ ಟೋಲ್ ದರ ಕಡಿಮೆ ಮಾಡದ ಕಣಮಿಣಕಿ, ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ
ರಾಮನಗರ, ಏಪ್ರಿಲ್, 03: ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ಇತ್ತೀಚೆಗಷ್ಟೇ ಟೋಲ್ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಈ ಸಂಬಂಧ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನ ಟೋಲ್ ಸಿಬ್ಬಂದಿ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತ ಪ್ರಾಧಿಕಾರ ಟೋಲ್ ಹೆಚ್ಚಳ ದರದ ಆದೇಶವನ್ನು ವಾಪಾಸ್ ಪಡೆದಿತ್ತು. ಇಷ್ಟಾದರೂ ಕೂಡ ಕಣಮಿಣಿಕೆ ಹಾಗೂ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದ ಸಿಬ್ಬಂದಿ ಮಾತ್ರ ಟೋಲ್ ದರವನ್ನು ಕಡಿಮೆ ಮಾಡದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಟೋಲ್ ದರ ಕಡಿಮೆ ಮಾಡದ ಸಿಬ್ಬಂದಿ
ವಾಹನ ಸವಾರರ ಆಕ್ರೋಶದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಹೆಚ್ಚಳ ಆದೇಶವನ್ನು ಹಿಂಪಡೆದಿತ್ತು. ಆದರೂ ಕಣಮಿಣಿಕೆ ಹಾಗೂ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ಮಾತ್ರ ಟೋಲ್ ದರವನ್ನು ಕಡಿಮೆ ಮಾಡುತ್ತಿಲ್ಲ ಎಂದು ವಾಹನ ಸವಾರರು ಆಕ್ರೋಶ ಕೆಂಡಕಾರುತ್ತಿದ್ದಾರೆ.

ಯಾವುದೇ ಆದೇಶ ಬಂದಿಲ್ಲ-ಟೋಲ್ ಸಿಬ್ಬಂದಿ
ಈ ಬಗ್ಗೆ ಟೋಲ್ ಸಿಬ್ಬಂದಿಗೆ ಕೇಳಿದರೆ ನಮಗೆ ಇನ್ನೂ ಆದೇಶವೇ ಬಂದಿಲ್ಲ ಎಂದು ಹೇಳುವ ಮೂಲಕ ಬೇಕಾಬಿಟ್ಟಿಯಾಗಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ಕೂಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಿದೆ.
ಜನಾಕ್ರೋಶದ ಬಳಿಕ ಎಚ್ಚೆತ್ತ ಪ್ರಾಧಿಕಾರ
ಲೋಕಾರ್ಪಣೆಗೊಂಡ ದಿನದಿಂದಲೂ ಟೋಲ್ ವಿಚಾರವಾಗಿ ವಿವಾದದಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಏಪ್ರಿಲ್1ರಿಂದ ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿತ್ತು. ಆದರೆ ವಾಹನ ಸವಾರರಿಂದ ತೀವ್ರ ವಿರೋಧದ ಬಳಿಕ ಟೋಲ್ ದರ ಹೆಚ್ಚಳವನ್ನು ಹೆದ್ದಾರಿ ಪ್ರಾಧಿಕಾರ ಕೈಬಿಟ್ಟಿತ್ತು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಹೆಚ್ಚಳ ಖಂಡಿಸಿ ತೀವ್ರ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಡಕ್ಕೆ ಮಣಿದು ಹೆದ್ದಾರಿ ಪ್ರಾಧಿಕಾರ ಹಳೆಯ ಟೋಲ್ ದರವನ್ನೇ ಮುಂದುವರೆಸಲು ನಿರ್ಧಾರ ಮಾಡಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿತ್ತು.
ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾರ್ಚ್ 14 ರಿಂದ ಟೋಲ್ ಸಂಗ್ರಹ ಆರಂಭ ಆಗಿತ್ತು. ಸರ್ವೀಸ್ ರಸ್ತೆ ಹಾಗೂ ಮೂಲಭೂತ ಸೌಕರ್ಯ ನೀಡದೇ ಟೋಲ್ ವಸೂಲಿ ವಿರುದ್ಧ ಸಾಕಷ್ಟು ಹೋರಾಟ ನಡೆದಿದ್ದವು. ಟೋಲ್ ಸಂಗ್ರಹ ಪ್ರಾರಂಭವಾದ ದಿನದಿಂದಲೂ ದುಬಾರಿ ಶುಲ್ಕ ಎಂದು ಎಕ್ಸ್‌ಪ್ರೆಸ್ ವೇ ಟೋಲ್ ಬಳಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.

ಟೋಲ್ ಆರಂಭವಾದ 17 ದಿನದಲ್ಲೇ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ಶೇಕಡಾ 22ರಷ್ಟು ದರವನ್ನು ಹೆಚ್ಚಳ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಇದರ ವಿರುದ್ಧ ವಾಹನ ಸವಾರರು ಕೆಂಡಕಾರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದರು. ಒಂದು ವೇಳೆ ಟೋಲ್ ದರ ಏರಿಕೆ ತಡೆಯದೇ ಇದ್ದರೆ, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
1. ಕಾರು, ವ್ಯಾನ್, ಜೀಪ್: 165 ರೂಪಾಯಿ, ದ್ವಿಮುಖ ಸಂಚಾರ 250 ರೂಪಾಯಿ ಮತ್ತು ಒಂದು ಬಾರಿ 30 ರೂಪಾಯಿ, ಮತ್ತೊಂದು ಬಾರಿ 45 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
2. ಟ್ರಕ್, ಬಸ್, ಟ್ಯಾಕ್ಸಿ: 565 ರೂಪಾಯಿ, ದ್ವಿಮುಖ ಸಂಚಾರಕ್ಕೆ 850 ರೂಪಾಯಿ. ಹಾಗೆಯೇ ಒಂದು ಬಾರಿ 165 ರೂಪಾಯಿ, ಮತ್ತೊಂದು ಬಾರಿ 160 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
3. ಲಘು ವಾಹನಗಳು, ಮಿನಿ ಬಸ್: 270 ರೂಪಾಯಿ, ದ್ವಿಮುಖ ಸಂಚಾರಕ್ಕೆ 405 ರೂಪಾಯಿ ಆಗಿದೆ. ಅಲ್ಲದೇ ಒಂದು ಬಾರಿ 50 ರೂಪಾಯಿ ಎರಡನೇ ಬಾರಿ 75 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
4. ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: 615 ರೂಪಾಯಿ, ದ್ವಿಮುಖ ಸಂಚಾರಕ್ಕೆ 925 ರೂಪಾಯಿ ಆಗಿದೆ. ಮೊದಲ ಬಾರಿ 115 ರೂಪಾಯಿ ಹೆಚ್ಚಳ ಮಾಡಿದ್ದು, ಎರಡನೇ ಬಾರಿ 225 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
5. ಭಾರಿ ವಾಹನಗಳು: 885 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,330 ರೂಪಾಯಿ ಆಗಿದೆ. ಹಾಗೆಯೇ ಮೊದಲ ಬಾರಿ 165 ರೂಪಾಯಿ ಎರಡನೇ ಬಾರಿ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.
6. 7 ಅಥವಾ ಎಕ್ಸೆಲ್ ವಾಹನಗಳಿಗೆ 1,080 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,620 ರೂಪಾಯಿ ಆಗಿದೆ. ಮೊದಲ ಬಾರಿ 200 ರೂಪಾಯಿ ಎರಡನೇ ಬಾರಿ 305 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದೀಗ ಈ ಟೋಲ್ ದರ ಹೆಚ್ಚಳ ಆದೇಶವನ್ನು ಹಿಂಪಡೆದರೂ ಸಹ ಟೋಲ್ ಸಿಬ್ಬಂದಿ ಮಾತ್ರ ದರವನ್ನು ಕಡಿಮೆ ಮಾಡುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.












Click it and Unblock the Notifications