Bengaluru-Mysuru Expressway: ಅಪೂರ್ಣ ಹೆದ್ದಾರಿ ಉದ್ಘಾಟನೆ, ಇದು ಚುನಾವಣೆ ಗಿಮಿಕ್: ಡಿ.ಕೆ.ಸುರೇಶ್ ವಾಗ್ದಾಳಿ
ಬಿಜೆಪಿ ನಾಯಕರು ಕಾಮಗಾರಿ ಪೂರ್ಣಗೊಳ್ಳದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅನ್ನು ಉದ್ಘಾಟನೆ ಮಾಡಿದ್ದಾರೆ. ಎಂದು ಅಪೂರ್ಣ ಹೆದ್ದಾರಿ ಉದ್ಘಾಟನೆ ಮಾಡಿದ ನಿಮ್ಮ ವಿಕೃತಿ ಪ್ರಯತ್ನಕ್ಕೆ ಶುಭಹಾರೈಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಮನಗರ, ಮಾರ್ಚ್, 13: ಪ್ರಧಾನಿ ನರೇಂದ್ರ ಮೋದಿಯರು ಭಾನುವಾರ (ಮಾರ್ಚ್ 12) ಮೈಸೂರು -ಬೆಂಗಳೂರು ಎಕ್ಸ್‌ಪ್ರೆಸ್ ವೇ ಅನ್ನು ಉದ್ಘಾಟನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಸಂಸದ ಡಿ.ಕೆ.ಸುರೇಶ್ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅಪೂರ್ಣ ಹೆದ್ದಾರಿ ಉದ್ಘಾಟನೆ ಮಾಡಿದ ನಿಮ್ಮ ವಿಕೃತಿ ಪ್ರಯತ್ನಕ್ಕೆ ಶುಭಹಾರೈಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ವಿರುದ್ಧ ಡಿ.ಕೆ. ಸುರೇಶ್ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ಕನಿಷ್ಟ ಸೌಜನ್ಯ ಇಲ್ಲ. ಈ ರಾಷ್ಟ್ರೀಯ ಹೆದ್ದಾರಿಯ ಬಹುಭಾಗವು ನಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾದುಹೋಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನತೆ ನನ್ನನ್ನು ತಮ್ಮ ಸಂಸದನಾಗಿ ಆಯ್ಕೆ ಮಾಡಿದ್ದಾರೆ.
ಆದರೆ ನಿಮ್ಮ ಕ್ಷುಲ್ಲಕ ರಾಜಕಾರಣವು ಸಂವಿಧಾನಾತ್ಮಕ ಶಿಷ್ಟಾಚಾರವನ್ನು ಮರೆಮಾಚಿದೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಅಪೂರ್ಣ ಯೋಜನೆಗಳನ್ನು ಉದ್ಘಾಟಿಸುತ್ತಿರುವುದು ಕರ್ನಾಟಕದ ಜನತೆಯನ್ನು ಹೇಗಾದರೂ ವಂಚಿಸಿ ಚುನಾವಣಾ ಗೆಲುವು ಸಾಧಿಸಬಹುದು ಎನ್ನುವ ನಿಮ್ಮ ಹತಾಶ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ. ನಿಮ್ಮ ಈ ವಿಕೃತ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.(8/9)
— DK Suresh (@DKSureshINC) March 12, 2023
ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿರುವ ರಾಷ್ಟ್ರೀಯ ಹೆದ್ದಾರಿಯ ಸುಮಾರು 30% ಕಾಮಗಾರಿಯು ಇನ್ನೂ ಬಾಕಿ ಇದೆ. ಆದರೂ ಈ ಅಪೂರ್ಣ ಯೋಜನೆಯನ್ನು ಕೇವಲ ಚುನಾವಣಾ ಗಿಮಿಕ್‌ಗಾಗಿ ಉದ್ಘಾಟಿಸಿದ್ದಾರೆ. ನಿಮ್ಮ ಈ ವಿಕೃತಿ ಪ್ರಯತ್ನಕ್ಕೆ ಶುಭಹಾರೈಕೆ ಎಂದು ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಜೆಡಿಎಸ್‌ಗೆ ಸಿಎಂ ತಿರುಗೇಟು
ರಾಜ್ಯದ ಎರಡು ಪ್ರಮುಖ ನಗರಗಳಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದು ನಾವೇ. ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದು ನಾವೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದರು. ಪ್ರಧಾನ ಮಂತ್ರಿಗಳ ಮಂಡ್ಯ ಭೇಟಿ ಹಾಗೂ ಎಕ್ಸಪ್ರೆಸ್‌ವೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಭಾನುವಾರ ನಡೆದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ 2015ರಲ್ಲಿ ಹೆದ್ದಾರಿಯ ಡಿಪಿಆರ್ ಸಿದ್ಧವಾಯಿತು. 2016ಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆಯಾಯಿತು. ಅಂದಾಜು ವೆಚ್ಚ ಹೆಚ್ಚಾಗಿದ್ದರಿಂದ ಅದು ಮತ್ತೆ ಮೋದಿ ಅವರ ಬಳಿಗೆ ಹೋಯಿತು. ತಡ ಮಾಡದೆ ಮಂಜೂರಾತಿ ನೀಡಿದರು. ಹೀಗಾಗಿ ಈ ದಶಪಥ ಹೆದ್ದಾರಿ ನಮ್ಮ ಕೊಡುಗೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.












Click it and Unblock the Notifications