ಚನ್ನಪಟ್ಟಣ; ಗ್ರಾಮದಿಂದ ಹೋಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ತಡೆದ ಗ್ರಾಮಸ್ಥರು
ರಾಮನಗರ, ಅಕ್ಟೋಬರ್ 26: ಕಾಡು ಪ್ರಾಣಿಗಳ ನಿರಂತರ ಹಾವಳಿಗೆ ಹೈರಾಣಾಗಿರುವ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ರೈತರು ಗ್ರಾಮಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮದಿಂದ ಹೊರ ಹೋಗದಂತೆ ತಡೆದಿದ್ದಾರೆ.
ವನ್ಯಜೀವಿಗಳ ಹಾವಳಿಗೆ ಬೇಸತ್ತು ಅರಣ್ಯಾಧಿಕಾರಿಗಳನ್ನು ಗ್ರಾಮದಿಂದ ಹೊರ ಹೋಗದಂತೆ ತಡೆದಿರುವ ಮೂರನೇ ಪ್ರಕರಣ ಇದಾಗಿದೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಸಿಂಗರಾಜಿಪುರ, ಕೋಡಂಬಳ್ಳಿ ಹಾಗೂ ಅರಳಾಳುಸಂದ್ರ ಗ್ರಾಮಗಳಲ್ಲಿ ಇದೇ ರೀತಿ ಅರಣ್ಯಾಧಿಕಾರಿಗಳಿಗೆ ದಿಗ್ಭಂದನ ವಿಧಿಸಲಾಗಿತ್ತು.
ಅರಣ್ಯ ಸಿಬ್ಬಂದಿಯಿಂದಲೇ ಅಕ್ರಮ ಮರ ಸಾಗಾಟ, ಆದರೂ ಪ್ರಕರಣ ದಾಖಲಿಸಿಲ್ಲ
ಅರಣ್ಯ ಸಿಬ್ಬಂದಿಯನ್ನು ಗ್ರಾಮದ ದೇವಾಲಯದ ಆವರಣದಲ್ಲಿ ಕೂರಿಸಿರುವ ರೈತರು, ಎಷ್ಟೇ ದಿನವಾದರೂ ಸರಿ ಅರಣ್ಯ ಸಿಬ್ಬಂದಿಗೆ ಊಟ ತಿಂಡಿ ವ್ಯವಸ್ಥೆ ಮಾಡುತ್ತೇವೆ. ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ಶಾಶ್ವತ ಪರಿಹಾರದ ಭರವಸೆ ನೀಡುವವರೆಗೆ ಗ್ರಾಮದಿಂದ ಸಿಬ್ಬಂದಿ ಹೊರ ಹೋಗಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದ್ದಾರೆ.
ತಾಲ್ಲೂಕಿನ ವಿರೂಪಾಕ್ಷಪುರ, ಬಿವಿ ಹಳ್ಳಿ ಕೊಡಂಬಳ್ಳಿ, ಸಿಂಗರಾಜಿಪುರ, ಹನಿಯೂರು, ಕಬ್ಬಾಳು, ಸಾತನೂರು ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡಿ ನೂರಾರು ಬಾಳೆ ಗಿಡ, ಮಾವಿನ ಮರ, ತೆಂಗಿನ ಮರಗಳು ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಹೈರಾಣಾಗಿದ್ದಾರೆ.
ಕಾಡಾನೆಗಳ ಹಾವಳಿ ಮೀತಿ ಮೀರಿದ್ದರು ಕ್ರಮ ಕೈಗೊಳ್ಳುವಲ್ಲಿ ಅರಣ್ಯಾ ಇಲಾಖೆ ವಿಫಲವಾಗಿದೆ. ಪ್ರತಿ ಬಾರಿ ಆನೆ ದಾಳಿ ನಡೆದಾಗ ಸ್ಥಳಕ್ಕೆ ಬರುವ ಅರಣ್ಯಾಧಿಕಾರಿಗಳು ಬೆಳೆ ನಷ್ಟ ಪರಿಹಾರ ನೀಡುವ ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಮತ್ತೆ ಅರಣ್ಯಾಧಿಕಾರಿಗಳು ಬರುವುದು ಆನೆ ದಾಳಿ ನಡೆದಾಗಷ್ಟೆ. ಈಗ ವ್ಯವಸಾಯ ಮಾಡುವುದನ್ನೇ ನಿಲ್ಲಿಸಿದ್ದೇವೆ ಎನ್ನುತ್ತಾರೆ ರೈತರು.