ಮನೆಯಿಂದಲೇ ಮತದಾನ ಬೇಡ, ಮತಗಟ್ಟೆಯಲ್ಲೇ ಮತದಾನ ಮಾಡುತ್ತೇವೆ ಎಂದ ರಾಯಚೂರು ಮಂದಿ
ರಾಯಚೂರು, ಏಪ್ರಿಲ್ 30: ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಈ ಬಾರಿ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಆದರೆ, ಜಿಲ್ಲೆಯಲ್ಲಿ ವಿಕಲಚೇತನ ಹಾಗೂ 80 ವಯಸ್ಸು ದಾಟಿದ ವಯೋವೃದ್ಧರು ಮನೆಯಿಂದಲೇ ಮತದಾನ ಮಾಡುವುದಕ್ಕೆ ನಿರಾಸಕ್ತಿ ತೋರಿಸುತ್ತಿದ್ದು, ಮತಗಟ್ಟೆಗೆ ಬಂದು ಮತದಾನ ಮಾಡುತ್ತೇವೆ ಎನ್ನುತ್ತಿದ್ದಾರೆ.
ಪ್ರಸ್ತುತ ಮಾನ್ವಿ ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ 80 ವರ್ಷ ದಾಟಿದ ವಯೋವೃದ್ಧ ಮತದಾರರು 3,726 ಇದ್ದಾರೆ. 2,625 ವಿಕಲಚೇತನ ಮತದಾರರು ಸೇರಿ 6,351 ಜನ ಇದ್ದಾರೆ. ಅಧಿಕಾರಿಗಳು ಇವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಕೇವಲ 264 ಜನರು ಮಾತ್ರ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಇವರಲ್ಲಿ 220 ಜನ 80 ವರ್ಷ ದಾಟಿದವರು ಹಾಗೂ 44 ವಿಕಲಚೇತನರಿದ್ದಾರೆ.

ಇವರಿಂದ ಆಧಾರ್, ಐಡಿ ಕಾರ್ಡ್ ಪಡೆದುಕೊಂಡು 12ಡಿ ನಮೂನೆ ಫಾಮ್‌ರ್ ತುಂಬಿಸಿಕೊಳ್ಳಲಾಗಿದೆ. ಉಳಿದವರು ಮತಗಟ್ಟೆಗೆ ಬಂದು ಮತದಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ಮನೆಯಿಂದಲೇ ಮತದಾನಕ್ಕಾಗಿ ಕಣದಲ್ಲಿರುವ ಅಭ್ಯರ್ಥಿಗಳಾದ ಬಿ.ವಿ.ನಾಯಕ (ಬಿಜೆಪಿ-ಕಮಲ), ಹಂಪಯ್ಯ ನಾಯಕ (ಕಾಂಗ್ರೆಸ್-ಕೈ), ರಾಜಾವೆಂಕಟಪ್ಪ ನಾಯಕ (ಜೆಡಿಎಸ್-ತೆನೆಹೊತ್ತ ಮಹಿಳೆ), ರಾಜಾಶ್ಯಾಂಸುಂದರ್ ನಾಯಕ (ಆಪ್-ಪೊರಕೆ), ಮುದುಕಪ್ಪ ನಾಯಕ (ಬಿಎಸ್‌ಪಿ-ಆನೆ), ಬಸವಪ್ರಭು (ಕೆಆರ್‌ಎಸ್- ಬ್ಯಾಟರಿ) ಹೆಸರು ಮತ್ತು ಚಿಹ್ನೆ ಇರುವ ಬ್ಯಾಲೆಟ್ ಪೇಪರ್ ಸಿದ್ಧವಾಗಿವೆ.
ಜಿಲ್ಲೆಯಲ್ಲಿ 80 ವರ್ಷ ದಾಟಿದ ವಯೋವೃದ್ಧರ 20,414 ಮತಗಳು, 18,071 ವಿಕಲಚೇತನರು ಸೇರಿ ಒಟ್ಟು 38,485 ಮತಗಳಿವೆ. ಮತಗಟ್ಟೆಗೆ ಬರಲು ಆಗದ ವಿಕಲಚೇತನರು ಹಾಗೂ ವಯೋವೃದ್ಧರರ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಅಧಿಕಾರಿಗೆ ಪಟ್ಟಿ ನೀಡಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಮತದಾರು ಎಲ್ಲಿ ಮತದಾನ ಮಾಡುತ್ತಾರೆ ಎಂದು ಕೇಳಿ ತಿಳಿದಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಮತದಾರರ ಮನೆಗಳಿಗೆ ತೆರಳಿ ಗುಪ್ತ ಮತದಾನ ಮಾಡಿಸಲಿದ್ದಾರೆ.
ಕ್ಷೇತ್ರವಾರು ಮತದಾರರ ವಿವರ
ರಾಯಚೂರು ನಗರ ಕ್ಷೇತ್ರದಲ್ಲಿ 3,601 80 ವರ್ಷ ದಾಟಿದ ಮತದಾರರಿದ್ದು, 1,455 ವಿಕಲಚೇತನ ಮತದಾರರಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 3,049 80 ವರ್ಷ ದಾಟಿದ ಮತದಾರರಿದ್ದು, 3,012 ವಿಕಲಚೇತನ ಮತದಾರರಿದ್ದಾರೆ. ಮಾನ್ವಿ ಕ್ಷೇತ್ರದಲ್ಲಿ 3,726 80 ವರ್ಷ ದಾಟಿದ ಮತದಾರರಿದ್ದು, 2,625 ವಿಕಲಚೇತನ ಮತದಾರರಿದ್ದಾರೆ. ದೇವದುರ್ಗ ಕ್ಷೇತ್ರದಲ್ಲಿ 3,246 80 ವರ್ಷ ದಾಟಿದ ಮತದಾರರಿದ್ದು, 2,288 ವಿಕಲಚೇತನ ಮತದಾರರಿದ್ದಾರೆ. ಲಿಂಗಸುಗೂರು ಕ್ಷೇತ್ರದಲ್ಲಿ 4,717 80 ವರ್ಷ ದಾಟಿದ ಮತದಾರರಿದ್ದು, 2,785 ವಿಕಲಚೇತನ ಮತದಾರರಿದ್ದಾರೆ. ಸಿಂಧನೂರು ಕ್ಷೇತ್ರದಲ್ಲಿ 2,858 80 ವರ್ಷ ದಾಟಿದ ಮತದಾರರಿದ್ದು, 2,920 ವಿಕಲಚೇತನ ಮತದಾರರಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ 3,543 80 ವರ್ಷ ದಾಟಿದ ಮತದಾರರಿದ್ದು, 2,986 ವಿಕಲಚೇತನ ಮತದಾರರಿದ್ದಾರೆ.

ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಭ್ಯರ್ಥಿಗಳ ಹೆಸರು, ಚಿಹ್ನೆ ಇರುವ ಬ್ಯಾಲೆಟ್ ಪೇಪರ್ ಸಿದ್ಧವಾಗಿದ್ದು, ಮೇ 3ರ ನಂತರ 12 ತಂಡ ರಚನೆ ಮಾಡಿ ಮತದಾನ ಮಾಡಿಸಲಾಗುವುದು. ಬಿಎಸ್‌ಒ, ಸೆಕ್ಟರ್ ಅಧಿಕಾರಿ, ವಿಡಿಯೊಗ್ರಾಫರ್ ಸೇರಿ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಗುಪ್ತ ಮತದಾನ ಮಾಡಿಸಲಾಗುವುದು ಎಂದು ಮಾನ್ವಿ ಚುನಾವಣಾಧಿಕಾರಿ ಪ್ರಕಾಶ್ ವಿವರಿಸಿದ್ದಾರೆ.












Click it and Unblock the Notifications