ಬೊಮ್ಮಾಯಿಯವರೇ ರಾಯಚೂರಿಗೆ ಹೋದರೆ ಅಧಿಕಾರ ಹೋಗುತ್ತೆ ಎಂಬ ಭಯವೇ? ಜನರ ಪ್ರಶ್ನೆ
ರಾಯಚೂರು, ಜುಲೈ, 27; ಸಿಎಂ ಬೊಮ್ಮಾಯಿ ಅವರಿಗೆ ರಾಯಚೂರು ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬಹುದು ಎನ್ನುವ ಭವಿಷ್ಯವನ್ನು ಹೇಳಲಾಗಿದೆಯೆ? ರಾಜ್ಯದ ಈಶಾನ್ಯ ದಿಕ್ಕಿನಲ್ಲಿರುವ ಕಲ್ಯಾಣ ಕರ್ನಾಟಕದ ಹಿಂದುಳಿದ ಮತ್ತು ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ಭೇಟಿ ನೀಡಿದರೆ, ಅಧಿಕಾರ ಕಳೆದುಕೊಳ್ಳಬಹುದು ಎಂಬ ಜ್ಯೋತಿಷ್ಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತಂಕಗೊಂಡಿದ್ದಾರೆಯೇ ಎನ್ನುವ ಪ್ರಶ್ನೆಗಳು ಸಾರ್ವಜನಿಕರ ಮಧ್ಯೆ ಭಾರೀ ಸದ್ದು ಮಾಡುತ್ತಿವೆ.
ಜುಲೈ 28ಕ್ಕೆ ರಾಜ್ಯದ 23ನೇ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ, ಒಂದು ವರ್ಷ ಪೂರ್ಣಗೊಳ್ಳುತ್ತಿದ್ದರೂ ಜಿಲ್ಲೆಯತ್ತ ಒಮ್ಮೆಯೂ ಮುಖ ಮಾಡದಿಲ್ಲ. ಈ ಜಿಲ್ಲೆಯೊಂದಿಗೆ ಮುಖ್ಯಮಂತ್ರಿಗಳಿಗೆ ಏಕೆ ಅಂತರ ಎನ್ನುವ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿದ ಅವರು ರಾಯಚೂರು ಜಿಲ್ಲೆಗೆ ಬಾರದಿರುವುದು ಜನ ಲೆಕ್ಕ ಹಾಕುವಂತೆ ಮಾಡಿದೆ.
ಜಿಲ್ಲೆಗೆ ಬಾರದ ಸಿಎಂ:
ಬರೀ ಮುಖ್ಯಮಂತ್ರಿಗಳು ಮಾತ್ರವಲ್ಲದೆ, ರಾಜ್ಯದ ಸಂಪುಟದ ಅರ್ಧದಷ್ಟು ಸಚಿವರು ಜಿಲ್ಲೆಗೆ ಒಂದು ಬಾರಿಯೂ ಬರದಿರುವುದಕ್ಕೆ ಕಾರಣ ಇದೆಯೆ? ಎನ್ನುವ ಪ್ರಶ್ನೆಗಳು ಎದ್ದಿವೆ. ಇಲ್ಲಿನವರಿಗೆ ರಾಜಕೀಯ ಪ್ರಾತಿನಿಧ್ಯದ ಭಾಗವಾಗಿ ಸಚಿವ ಸ್ಥಾನ ನೀಡದೆ ವಂಚಿಸಲಾಗಿದೆ. ತಿಂಗಳಿಗೊಮ್ಮೆ ಭೇಟಿ ನೀಡುವ ಸಚಿವರಿಗೆ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಸಿಎಂ ವರ್ಷ ಕಳೆದರೂ ಅಲ್ಲಿಗೆ ಹೋಗದೇ ದೂರ ಉಳಿದಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಗಳು ಅನುಷ್ಠಾನ ಆಗಿಲ್ಲ. ಜಿಲ್ಲೆ ಕೇಂದ್ರ ನೀತಿ ಆಯೋಗದಲ್ಲಿ ಮಹತ್ವಕಾಂಕ್ಷಿ ಜಿಲ್ಲೆಯಾಗಿದ್ದರೂ, ರಾಜ್ಯ ಮತ್ತು ಅಭಿವೃದ್ಧಿ ಪಾಲಿಗೆ ಲೆಕ್ಕಕ್ಕೆ ಇಲ್ಲದಾಂತಾಗಿದೆ.

ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ:
ಇಲ್ಲಿನ ಜನಪ್ರತಿನಿಧಿಗಳಿಗೆ 365 ದಿನಗಳಲ್ಲಿ ಒಮ್ಮೆಯಾದರೂ ಮುಖ್ಯಮಂತ್ರಿಗಳನ್ನು ಇಲ್ಲಿಗೆ ಕರೆತರುವ ಕೆಲಸವನ್ನು ಮಾಡಿಲ್ಲ. ಇದರ ಪರಿಣಾಮ ಜಿಲ್ಲೆಯ ನೂರಾರು ಸಮಸ್ಯೆಗಳು ಹಾಗೆಯೇ ಉಳಿಯುವಂತಾಗಿದೆ. ಏಮ್ಸ್ ಮಂಜೂರಾತಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರುವಂತೆ ಕಳೆದ 72 ದಿನಗಳಿಂದ ಹೋರಾಟ ನಡೆಯುತ್ತಿದೆ. ನೀರಾವರಿ ಯೋಜನೆಗಳು ಮತ್ತು ಆಧುನೀಕರಣದ ಹೆಸರಲ್ಲಿ ಹಣ ಲೂಟಿ ಬಿಟ್ಟರೆ, ಕೊನೆ ಭಾಗದವರೆಗೂ ನೀರು ತಲುಪಿಸುವ ಪ್ರಕ್ರಿಯೆಗಳು ನಡೆಯುತ್ತಿಲ್ಲ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿ ಪ್ರಶ್ನೆಗಳು ಉದ್ಭವವಾಗುತ್ತಿವೆ. ಟೆಕ್ಸ್‌ಟೈಲ್ ಪಾರ್ಕ್ ಸೇರಿದಂತೆ ಮಿರ್ಚಿ ಬಜಾರ್ ನಿರ್ಮಾಣ ಹಾಗೂ ಇನ್ನಿತರ ಉದ್ಯೋಗ ಸೌಲಭ್ಯಗಳ ಕೈಗಾರಿಕೆಗಳನ್ನು ಸ್ಥಾಪಿಸುವ ವಿಷಯವೂ ಪ್ರಸ್ತಾಪವಾಗುತ್ತಿಲ್ಲ ಎಂದು ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.
ಅಭಿವೃದ್ಧಿ ಕಾರ್ಯಗಳು ಮೊಟಕು:
ವಿಮಾನ ನಿಲ್ದಾಣ ನಿರ್ಮಾಣದ ಹಂತದಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ರಿಂಗ್ ರಸ್ತೆ ನಿರ್ಮಾಣ ಅನುದಾನ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಇಂತಹ ಹತ್ತಾರು ನಿರೀಕ್ಷೆ ಸಕಾರಗೊಳ್ಳಲು ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಸಿಎಂ ಜಿಲ್ಲೆಗೆ ಭೇಟಿ ನೀಡದೆ, ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರು ಹಾಗೂ ಇಲ್ಲಿಯ ಜಿಲ್ಲೆಯ ಸಮಸ್ಯೆಗಳು ಪರಿಹಾರಗೊಳ್ಳದೆ, ಜಿಲ್ಲೆ ಹಿಂದುಳಿದ ಹಣೆಪಟ್ಟಿಯಿಂದ ಕೊನೆ ಸ್ಥಾನದಲ್ಲಿ ಉಳಿಯುವಂತಾಗಿದೆ.

ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಒಮ್ಮೆಯೂ ರಾಯಚೂರು ಜಿಲ್ಲೆಗೆ ಭೇಟಿ ನೀಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಅಲ್ಲಿನ ಜನಪ್ರತಿನಿಧಿಗಳು ಕೂಡ ಸಿಎಂ ಅವರನ್ನು ಒಂದು ಬಾರಿಯೂ ಆಹ್ವಾನಿಸಿಲ್ಲ ಎಂದು ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳೆಲ್ಲ ಅತಂತ್ರವಾಗಿದ್ದು, ನೆನೆಗುದಿಗೆ ಬಿದ್ದಂತಾಗಿವೆ. ಈ ಜಿಲ್ಲೆಗೆ ಸಿಎಂ ಸೇರಿದಂತೆ ಸಂಪುಟದ ಅರ್ಧದಷ್ಟು ಸಚಿವರು ಬೇಟಿ ನೀಡದೇ ಇರುವುದರ ಹಿಂದಿನ ಗುಟ್ಟೇನು ಎನ್ನುವ ಪ್ರಶ್ನೆಗಳಿಗೆ ಇನ್ನು ಉತ್ತರ ಸಿಗದಂತಾಗಿದೆ. ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿಯುತ್ತಲೇ ಇದ್ದು, ಇಲ್ಲಿನ ಜನರ ಆಕ್ರೊಶಕ್ಕೆ ಕಾರಣವಾಗಿದೆ.












Click it and Unblock the Notifications