ನೋಟಿಸ್ ಪಿರಿಯಡ್‌ನಲ್ಲಿ ನರಕಯಾತನೆ ಅನುಭವಿಸಿದ ಜೆನ್ ಝೀ ಉದ್ಯೋಗಿಯ ಪೋಸ್ಟ್ Viral
ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ಎದುರಿಸುತ್ತಿರುವ ಕೆಲಸದ ಒತ್ತಡದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಜೆನ್ ಝೀ ವೃತ್ತಿಪರರೊಬ್ಬರು ತಾವು ಕೆಲಸ ಬಿಡುವ ಮುನ್ನ ನೀಡುವ 'ನೋಟಿಸ್ ಪಿರಿಯಡ್' ಸಮಯದಲ್ಲಿ ಎದುರಿಸಿದ ಅತಿಯಾದ ಕೆಲಸದ ಹೊರೆಯ ಬಗ್ಗೆ ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಉದ್ಯೋಗಿಯು ತಿಂಗಳಾಂತ್ಯದಲ್ಲಿ ಅತ್ಯಂತ ಮುಖ್ಯವಾ ಕೆಲಸಗಳನ್ನು ಯಾರ ಸಹಾಯವಿಲ್ಲದೇ ಏಕಾಂಗಿಯಾಗಿ ನಿರ್ವಹಿಸಿದ ಕಷ್ಟವನ್ನು ವಿವರಿಸಿದ್ದಾರೆ. ಕೆಲಸದ ಒತ್ತಡದ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮ್ಯಾನೇಜ್‌ಮೆಂಟ್‌ಗೆ ಈ 'ಕೀಮ್ಯಾನ್ ರಿಸ್ಕ್' ಅಂದರೆ ಒಬ್ಬನೇ ವ್ಯಕ್ತಿಯ ಮೇಲೆ ಅವಲಂಬಿತವಾಗಿರುವ ಅಪಾಯದ ಬಗ್ಗೆ ಅರಿವಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಕಂಪನಿಯಿಂದ ಹೊರಹೋಗುವ ಕೊನೆಯ ದಿನದವರೆಗೂ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಇದಲ್ಲದೆ, ಹೆಚ್ಚುವರಿ ಕೆಲಸದ ಸಮಯಕ್ಕೆ ಯಾವುದೇ ಭತ್ಯೆ ಕೂಡ ನೀಡಿಲ್ಲ. "ನಾವು ನಿಮ್ಮನ್ನು ತಡವಾಗಿ ಕೆಲಸ ಮಾಡಲು ಕೇಳಿಲ್ಲ" ಎಂದು ಕಂಪನಿ ಹೇಳಿದೆ. "ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಕೆಲಸವನ್ನು ನನಗೆ ನೀಡಿದವರು ಯಾರು?" ಎಂದು ಅವರು ಪ್ರಶ್ನಿಸಿದ್ದಾರೆ. ಈ ಘಟನೆಯಿಂದ ತಾವು ಕಲಿತ ಪಾಠಗಳನ್ನು ಹಂಚಿಕೊಂಡಿರುವ ಅವರು, "ಕೆಲಸದ ಸ್ಥಳದಲ್ಲಿ ಎಂದಿಗೂ ಅತಿಯಾದ ಪ್ರಾಮುಖ್ಯತೆ ಪಡೆಯಬೇಡಿ - ಇದು ನಾನು ಕಲಿತ ಪಾಠ" ಮತ್ತು "ನಿಮ್ಮ ಕೆಲಸವನ್ನು ಎಂದಿಗೂ ಪ್ರೀತಿಸಬೇಡಿ " ಎಂದು ಬರೆದುಕೊಂಡಿದ್ದಾರೆ.
ಇಷ್ಟೆಲ್ಲಾ ಸವಾಲುಗಳ ನಡುವೆಯೂ, ಉದ್ಯೋಗಿಯು ತಮ್ಮ ಕೆಲಸ ಮತ್ತು ವೃತ್ತಿಪರ ಬೆಳವಣಿಗೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತಮ್ಮ ಆರಂಭಿಕ ದಿನಗಳಲ್ಲಿ ಮಾರ್ಗದರ್ಶನ ನೀಡಿದ ಹಿಂದಿನ ಮೆಂಟರ್ ಅವರನ್ನು ಸ್ಮರಿಸಿರುವ ಅವರು, ಇಂತಹ ಅಮೂಲ್ಯವಾದ ಅನುಭವ ಪಡೆಯಲು ತಾನು "ತುಂಬಾ ಅದೃಷ್ಟಶಾಲಿ" ಎಂದಿದ್ದಾರೆ. ಆದಾಗ್ಯೂ, ಹೊರಗಿನ ಕಂಪನಿಗಳು ಮತ್ತು ನೇಮಕಾತಿದಾರರು ತಮ್ಮ ಅನುಭವಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದರೆ, ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ತಮ್ಮ ಕೊಡುಗೆಗೆ ಸರಿಯಾದ ಬೆಲೆ ಸಿಕ್ಕಿಲ್ಲ ಎಂಬ ಬೇಸರವನ್ನು ಹೊರಹಾಕಿದ್ದಾರೆ.
ಕಂಪನಿಯನ್ನು ತೊರೆಯಲು ಸಿದ್ಧರಾಗುತ್ತಿರುವ ಈ ಉದ್ಯೋಗಿಗೆ, ತಮ್ಮ ಸಂಪೂರ್ಣ ಕೆಲಸದ ಪ್ರಕ್ರಿಯೆಯನ್ನು ದಾಖಲಿಸುವಂತೆ ಸೂಚಿಸಲಾಗಿದೆ. ಆದರೆ, ಸಹೋದ್ಯೋಗಿಗಳಿಗೆ ಈ ಕೆಲಸದ ಬಗ್ಗೆ ಯಾವುದೇ ಅರಿವಿಲ್ಲದಿರುವುದು ವಿಪರ್ಯಾಸ. ತನ್ನ ಸ್ಥಾನಕ್ಕೆ ಹೊರಗಿನಿಂದ ಹೊಸಬರನ್ನು ನೇಮಿಸಿಕೊಳ್ಳುವ ಸಾಧ್ಯತೆಯಿದ್ದು, ಅವರು ಈ ದೊಡ್ಡ ಕೆಲಸದ ಹೊರೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆಯೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಹಲವು ಬಳಕೆದಾರರು ಕೆಲಸದ ಸ್ಥಳದ ಕಳಪೆ ನಿರ್ವಹಣೆ ಮತ್ತು 'ಬರ್ನ್‌ಔಟ್' ಸಂಸ್ಕೃತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಅನೇಕರು ತಮ್ಮದೇ ಆದ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, "ನಾನು ಫ್ರೆಶರ್ ಆಗಿದ್ದಾಗ ಒಮ್ಮೆ ಸತತ 20 ಗಂಟೆಗಳ ಕಾಲ ಕೆಲಸ ಮಾಡಿ, ನಂತರ ಸ್ಟ್ಯಾಂಡಪ್ ಮೀಟಿಂಗ್‌ಗೆ ಹಾಜರಾಗಲು ಕೇವಲ ಒಂದು ಗಂಟೆ ಮಾತ್ರ ನಿದ್ದೆ ಮಾಡಿದ್ದೆ" ಎಂದು ಸ್ಮರಿಸಿಕೊಂಡಿದ್ದಾರೆ.
ಮತ್ತಷ್ಟು ಮಂದಿ ವರ್ಕ್-ಲೈಫ್ ಬ್ಯಾಲೆನ್ಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, "ನಿಮಗೆ ಕುಟುಂಬವಿದೆಯೇ? ನಿಮ್ಮ ನೋಟಿಸ್ ಪಿರಿಯಡ್ ಸಮಯದಲ್ಲಿ ಇಷ್ಟು ತಡವಾಗಿ ಕೆಲಸ ಮಾಡುವುದರ ಬಗ್ಗೆ ಅವರು ಏನಂದುಕೊಳ್ಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ. ಕೆಲವರು ಉದ್ಯೋಗಿಯ ದೃಷ್ಟಿಕೋನವನ್ನು ಬೆಂಬಲಿಸಿದ್ದು, "ನಿಮ್ಮ ಕೆಲಸವನ್ನು ಮುಗಿಸಿ, ಆದರೆ ಅತಿಯಾದ ಒತ್ತಡವನ್ನು ತೆಗೆದುಕೊಳ್ಳಬೇಡಿ" ಎಂದು ಸಲಹೆ ನೀಡಿದ್ದಾರೆ.












Click it and Unblock the Notifications