ಅಂಗಾಲಿಗೆ ಹರಳೆಣ್ಣೆ ಹಚ್ಚಿದರೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಸಿಗುವುದು ಪರಿಹಾರ
ಹರಳೆಣ್ಣೆಯನ್ನು ಕ್ಯಾಸ್ಟರ್ ಆಯಿಲ್ ಎಂದು ಕೂಡಾ ಕರೆಯಲಾಗುತ್ತದೆ. ಈ ಎಣ್ಣೆಯನ್ನು ಶತಮಾನಗಳಿಂದಲೂ ಚರ್ಮ, ಜಠರಗರುಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಾಂಪ್ರದಾಯಿಕ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ. ಹರಳೆಣ್ಣೆ ಬಹಳ ದಪ್ಪವಾಗಿದ್ದು, ಮಸುಕಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಸೌಂದರ್ಯವರ್ಧಕಗಳಿಂದ ಹಿಡಿದು ವೈದ್ಯಕೀಯ ಉದ್ದೇಶಗಳವರೆಗೆ ಈ ಸಸ್ಯಜನ್ಯ ಎಣ್ಣೆಯನ್ನು ಬಳಸಲಾಗುತ್ತದೆ.
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಅಪಾರ ಪ್ರಮಾಣದ ರಿಕಿನೋಲಿಕ್ ಆಮ್ಲವನ್ನು ಹೊಂದಿದೆ. ಹಾಗಾಗಿ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿಯೂ ಇದು ಕೆಲಸ ಮಾಡುತ್ತದೆ. ಕ್ಯಾಸ್ಟರ್ ಆಯಿಲ್‌ನ ಔಷಧೀಯ ಗುಣಗಳಿಂದಾಗಿ ಇದನ್ನು 'ಪಾಮ್ ಕ್ರಿಸ್ಟ್' ಎಂದು ಕೂಡಾ ಕರೆಯಲಾಗುತ್ತಿತ್ತು. ಪಾಮ್ ಕ್ರಿಸ್ಟ್ ಎಂದರೆ 'ಕ್ರಿಸ್ತನ ಅಂಗೈ' ಎಂದರ್ಥ. ಪ್ರಾಚೀನ ಕಾಲದಿಂದಲೂ ಔಷಧೀಯ ರೂಪದಲ್ಲಿ ಹರಳೆಣ್ಣೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈಜಿಪ್ಟಿನ ದಾಖಲೆಗಳ ಪ್ರಕಾರ ಇದನ್ನು ಕ್ರಿ.ಪೂ 1550 ರ ಹಿಂದೆಯೇ ಬಳಸಲಾಗುತ್ತಿತ್ತು ಎನ್ನಲಾಗಿದೆ.

ಮಸಾಜ್‌ಗೆ ಕ್ಯಾಸ್ಟರ್ ಆಯಿಲ್ ಬಳಕೆ:
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಕೇವಲ ಕೂದಲು ಅಥವಾ ಚರ್ಮದ ಸೌಂದರ್ಯ ಕಾಪಾಡವಲ್ಲಿ ಮಾತ್ರ ಪ್ರಮಖ ಪಾತ್ರ ವಹಿಸುವುದಿಲ್ಲ. ಬದಲಾಗಿ, ಇದು ಮಸಾಜ್ ಎಣ್ಣೆಯಾಗಿ ಅದ್ಭುತ ಕೆಲಸ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ ಸಂಧಿವಾತಕ್ಕೆ ಚಿಕಿತ್ಸೆ ನೀಡುವ ಎಣ್ಣೆಯಾಗಿ ಹೆಸರುವಾಸಿಯಾಗಿದೆ. ಈ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಂಧಿವಾತದಿಂದ ಪರಿಹಾರ ಪಡೆಯಬಹುದು. ಹರಳೆಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಂಧಿವಾತದಿಂದ ಉಂಟಾಗುವ ನೋವನ್ನು ನಿವಾರಿಸಬಹುದು. ಕ್ಯಾಸ್ಟರ್ ಆಯಿಲ್‌ನ ಉರಿಯೂತದ ಗುಣಲಕ್ಷಣಗಳು ಕೀಲು ನೋವು, ನರಗಳ ಉರಿಯೂತ ಮತ್ತು ಸ್ನಾಯು ನೋವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಸಹಕಾರಿಯಾಗಿದೆ.
ಆಯುರ್ವೇದದಲ್ಲಿ ಹರಳೆಣ್ಣೆ:
ಆಯುರ್ವೇದದ ದೃಷ್ಟಿಕೋನದಿಂದ ಪರಿಗಣಿಸಿದಾಗ, ಹರಳೆಣ್ಣೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ದೇಹದ ಯಾವುದೇ ಗೆಡ್ಡೆಗಳು ಮತ್ತು ಹೆಚ್ಚುವರಿ ಅಂಗಾಂಶಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಈ ಎಣ್ಣೆ ಹೊಂದಿದೆ. ಜೊತೆಗೆ ಗಾಯವಾದಾಗ, ನೋವು, ಸೆಳೆತ ಇದ್ದಾಗ ಅಥವಾ ಆಘಾತಗಳ ಸಂದರ್ಭದಲ್ಲಿ ಅತ್ಯಂತ ಉಪಯುಕ್ತವಾಗಿದೆ. ಹರಳೆಣ್ಣೆಯನ್ನು ಬಳಸಿಕೊಂಡು ಪೂರ್ಣ ದೇಹದ ಮಸಾಜ್ ಅನ್ನು ಆಯುರ್ವೇದವು ಶಿಫಾರಸು ಮಾಡುವುದಿಲ್ಲ. ಆಯುರ್ವೇದವು ಈ ಎಣ್ಣೆಯನ್ನು ಕೆಲವು ನಿರ್ದಿಷ್ಟ ಮಸಾಜ್‌ಗಳಿಗೆ ಮಾತ್ರ ಶಿಫಾರಸು ಮಾಡುತ್ತದೆ. ಅವುಗಳಲ್ಲಿ ಒಂದು ಪಾದ ಅಥವಾ ಅಂಗಾಲಿನ ಮಸಾಜ್. ಮೈಗ್ರೇನ್, ತಲೆನೋವು ಅಥವಾ ಕಣ್ಣು ಉರಿ ಸಮಸ್ಯೆ ಕಾಡುತ್ತಿದ್ದರೆ ಇದು ಪರಿಹಾರವಾಗಿ ಕೆಲಸ ಮಾಡಲಿದೆ. ತೆಂಗಿನೆಣ್ಣೆ ಮತ್ತು ಹರಳೆಣ್ಣೆ ಮಿಶ್ರಣವನ್ನು ಪಾದಗಳಿಗೆ ಉಜ್ಜುವುದರಿಂದ ಈ ತೊಂದರೆಗಳಿಂದ ಮುಕ್ತಿ ಪಡೆಯಲು ಸಹಾಯವಾಗುತ್ತದೆ. ಪದೇ ಪದೇ ತಲೆ ನೋವಿನಿಂದ ಬಳಲುತ್ತಿರುವವರು ಈ ರೀತಿ ಅಂಗಾಲಿಗೆ ಹರಳೆಣ್ಣೆ ಮಸಾಜ್ ಮಾಡಿದರೆ ನೋವು ನಿವಾರಣೆಯಾಗುವುದು.
ಉತ್ತಮ ನಿದ್ದೆಗೆ ಹರಳೆಣ್ಣೆ ಮಸಾಜ್:
ಹರಳೆಣ್ಣೆಯಿಂದ ಅಂಗಾಲಿನ ಮಸಾಜ್ ಮಾಡಿದರೆ ವಾತ ದೋಷ ನಿವಾರಣೆಯಾಗುವುದು. ವಾತ ದೋಷವು ಮುಖ್ಯವಾಗಿ ದೇಹದ ಚಲನೆ ಮತ್ತು ನರಮಂಡಲದ ಚಟುವಟಿಕೆಗಳಿಗೆ ಅಡ್ಡಿ ಪಡಿಸುತ್ತದೆ. ಅತಿ ಹೆಚ್ಚು ಆಯಾಸ, ಒತ್ತಡ, ಸರಿಯಾಗಿ ನಿದ್ದೆ ಬಾರದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಂಗಾಲಿಗೆ ಹರಳೆಣ್ಣೆ ಮಸಾಜ್ ಮಾಡಬಹುದು. ಈ ಎಣ್ಣೆಯನ್ನು ಪಾದಕ್ಕೆ ಹಚ್ಚುವುದರಿಂದ ವಾತ ಉಲ್ಬಣವಾಗದಂತೆ ನೋಡಿಕೊಳ್ಳಬಹುದು.
ಸ್ನಾಯು, ಕೀಲು ನೋವಿಗೆ ಪರಿಹಾರ:
ಹರಳೆಣ್ಣೆ ಆಂಟಿ ಇನ್ಫ್ಲಮೇಟರಿ ಮತ್ತು ನೋವು ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ರಿಕಿನೋಲಿಕ್ ಅಂಶದಲ್ಲಿ ಸಮೃದ್ಧವಾಗಿದೆ. ಹಾಗಾಗಿ ಈ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿದರೆ ಸ್ನಾಯುಗಳಲ್ಲಿನ ಒತ್ತಡ ನಿವಾರಣೆಯಾಗುವುದು. ಇದು ರಕ್ತದ ಹರಿವನ್ನು ಹೆಚ್ಚಿಸಿ, ನೈಸರ್ಗಿಕವಾಗಿ ಸ್ನಾಯುಗಳಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೀಲುಗಳು ಮತ್ತು ಸ್ನಾಯುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಪ್ರಾಚೀನ ಕಾಲದಿಂದಲೂ ಸಂಧಿವಾತದ ನೋವು, ಉರಿಯೂತ ಮತ್ತು ಕೀಲು ನೋವಿಗೆ ನೈಸರ್ಗಿಕ ಚಿಕಿತ್ಸೆಯಾಗಿ ಕ್ಯಾಸ್ಟರ್ ಆಯಿಲ್ ಅನ್ನು ಬಳಸಲಾಗುತ್ತಿದೆ.
ವಾರಕ್ಕೆ ಎರಡು ಬಾರಿ ಹರಳೆಣ್ಣೆ ಮಸಾಜ್:
ಈ ಎಣ್ಣೆಯಿಂದ ಅಂಗಾಲಿಗೆ ಮಸಾಜ್ ಮಾಡಿ ನಂತರ ಬಿಸಿನೀರಿನ ಶಾಖ ಕೊಟ್ಟರೆ ಕೀಲು ನೋವಿನಿಂದ ಪರಿಹಾರ ಪಡೆಯಬಹುದು. ಇದು ಒಂದು ರೀತಿಯಲ್ಲಿ ನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಕೀಲು ನೋವಿನಿಂದ ಬಳಲುತ್ತಿರುವವರಿಗೆ ಆರಾಮ ನೀಡುತ್ತದೆ. ವಾರಕ್ಕೆ ಎರಡು ಬಾರಿ ಹರಳೆಣ್ಣೆಯಿಂದ ಕಾಲಿಗೆ ಮಸಾಜ್ ಮಾಡುತ್ತಾ ಬಂದರೆ ಕೀಲು ನೋವು ಗಮನಾರ್ಹವಾಗಿ ಸುಧಾರಿಸಬಹುದು ಅಥವಾ ಕಡಿಮೆ ಮಾಡಬಹುದು.
ಈ ಎಣ್ಣೆ ದಪ್ಪವಾಗಿದ್ದರೂ, ಮಸಾಜ್ ಸಮಯದಲ್ಲಿ ಚರ್ಮದ ಆಳದವರೆಗೆ ಸೇರಿಕೊಂಡು ತ್ವಚೆಯನ್ನು ನಿರ್ವಿಷಗೊಳಿಸಿ ಪೋಷಿಸುತ್ತದೆ. ಇದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ.
ಮಸಾಜ್‌ಗೆ ಹರಳೆಣ್ಣೆ ಬಳಸುವುದು ಹೇಗೆ?:
1.ನೇರವಾಗಿ ಹಚ್ಚಿ:
ಮಸಾಜ್ ಮಾಡಲು ಇದು ಅತ್ಯಂತ ಸರಳ ಮಾರ್ಗವಾಗಿದೆ. ಒಂದು ಬಟ್ಟಲಿನಲ್ಲಿ ಐದು ಹನಿ ಹರಳೆಣ್ಣೆ ತೆಗೆದುಕೊಂಡು, ಅದನ್ನು ಉಗುರು ಬೆಚ್ಚಗಾಗುವವರೆಗೆ ಬಿಸಿ ಮಾಡಿ. ಎಣ್ಣೆ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. ನಂತರ ಉಗುರು ಬೆಚ್ಚಗಿರುವ ಎಣ್ಣೆಯನ್ನು ಅಂಗಾಲಿನ ಚರ್ಮದ ಮೇಲೆ ನಿಧಾನವಾಗಿ ಹಚ್ಚಿ. ವೃತ್ತಾಕಾರದ ಚಲನೆಗಳಲ್ಲಿ ಮಸಾಜ್ ಮಾಡಿ. ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ನೆನಪಿರಲಿ ಮಸಾಜ್ ಮಾಡಿದ ತಕ್ಷಣ ಕಾಲನ್ನು ತೊಳೆಯುವ ಅಗತ್ಯವಿಲ್ಲ. ಮಸಾಜ್ ಆದ ಮೇಲೆ ಒಂದೆರಡು ಗಂಟೆಗಳ ಕಾಲ ಎಣ್ಣೆಯನ್ನು ಚರ್ಮದ ಮೇಲೆ ಹಾಗೆಯೇ ಇರಲು ಬಿಡಿ. ಅಥವಾ ರಾತ್ರಿ ಅಂಗಾಲಿಗೆ ಹರಳೆಣ್ಣೆ ಮಸಾಜ್ ಮಾಡಿ ಬೆಳಗ್ಗೆ ತೊಳೆದರೂ ಅಡ್ಡಿಯಿಲ್ಲ.
2. ಹಾಟ್ ಕಂಪ್ರೆಸ್ ಬಳಸುವುದು:
ಇದು ಶಾಖವನ್ನು ಬಳಸಿಕೊಂಡು ಹರಳೆಣ್ಣೆ ಪ್ಯಾಕ್ ಬಳಸುವ ವಿಧಾನವಾಗಿದೆ.
ಈ ವಿಧಾನಕ್ಕೆ -ಹೆಕ್ಸೇನ್ ಫ್ರೀ ಕ್ಯಾಸ್ಟರ್ ಆಯಿಲ್
ಹತ್ತಿ ಬಟ್ಟೆ
ಪ್ಲಾಸ್ಟಿಕ್ ಹೊದಿಕೆ
ಬಿಸಿನೀರಿನ ಬಾಟಲ್
ಮುಚ್ಚಳವನ್ನು ಹೊಂದಿರುವ ಗಾಜಿನ ಪಾತ್ರೆ ಯ ಅಗತ್ಯವಿದೆ.
ಹತ್ತಿ ಬಟ್ಟೆಯನ್ನು ಹರಳೆಣ್ಣೆಯಲ್ಲಿ ಚೆನ್ನಾಗಿ ನೆನೆಸಿ. ಒಂದಿಡೀ ದಿನ ಅಥವಾ ಹಲವಾರು ಗಂಟೆಗಳವರೆಗೆ ಈ ಬಟ್ಟೆ ಎಣ್ಣೆಯಲ್ಲಿ ನೆನೆದರೆ ಒಳ್ಳೆಯದು. ನಂತರ ಬಟ್ಟೆಯನ್ನು ದೇಹದ ಅಪೇಕ್ಷಿತ ಭಾಗ(ಗಳ) ಮೇಲೆ ಇರಿಸಿ. ಈ ಬಟ್ಟೆಯನ್ನು ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಸುತ್ತಿ. ಈಗ ಹೀಟಿಂಗ್ ಪ್ಯಾಡ್ ಅಥವಾ ನೀರಿನ ಬಾಟಲಿಯನ್ನು ಚರ್ಮದ ಮೇಲೆ ಸುತ್ತಿದ ಬಟ್ಟೆಯ ಮೇಲೆ ಇರಿಸಿ. ಈ ಸಂದರ್ಭದಲ್ಲಿ ನಿಮ್ಮ ಪಾದಗಳನ್ನು ಮೇಲಕೆತ್ತಿ 30-60 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ಹೀಟಿಂಗ್ ಪ್ಯಾಡ್ ಅಥವಾ ಬಿಸಿ ನೀರಿನ ಬಾಟಲಿಯನ್ನು ಬಟ್ಟೆಯ ಮೇಲೆ ನಿಧಾನವಾಗಿ ಉಜ್ಜುತ್ತಿರಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications