ಈ ವಸ್ತುಗಳನ್ನು ಡೈನಿಂಗ್ ಟೇಬಲ್ ಮೇಲಿಡುವ ಅಭ್ಯಾಸ ನಿಮಗೂ ಇದ್ಯಾ? ಹಣದ ಸಮಸ್ಯೆಗೆ ಇದೇ ಮೂಲ ಕಾರಣ
ದಿನ ಬೆಳಗಾದರೆ ಸಾಕು ಎಲ್ಲರದ್ದೂ ಓಡಾಟದ ಬದುಕು. ಯಾರಿಗೂ ಯಾವುದಕ್ಕೂ ಸಮಯವೇ ಇಲ್ಲ. ಈ ಓಡಾಟದ ನಡುವೆ ಮನೆಯಲ್ಲಿ ಯಾವ ವಸ್ತುಗಳನ್ನು ಎಲ್ಲಿ ಇಡುತ್ತೇವೆ ಎನ್ನುವ ಗೊಡವೆ ಕೂಡಾ ಅನೇಕರಿಗೆ ಇರುವುದಿಲ್ಲ. ಇದೇ ಆತುರದಲ್ಲಿ ಜನರು ಡೈನಿಂಗ್ ಟೇಬಲ್ ಮೇಲೆಯೂ ಇದ್ದ ಬದ್ದ ಎಲ್ಲಾ ವಸ್ತುಗಳನ್ನು ಎಸೆದು ಬಿಡುತ್ತಾರೆ. ಮನೆಯೊಳಗೆ ಬಂದಾಗ ಕೈಯ್ಯಲ್ಲಿ ಅದೇನೇ ವಸ್ತು ಇರಲಿ ಅದನ್ನು ಥಟ್ ಅಂತ ಡೈನಿಂಗ್ ಟೇಬಲ್ ಮೇಲೆ ಇಡುವುದು ಅನೇಕರ ಅಭ್ಯಾಸ. ಆದರೆ ವಾಸ್ತು ಪ್ರಕಾರ ನೋಡುವುದಾದರೆ ಈ ಅಭ್ಯಾಸವೇ ತಪ್ಪು. ಇದು ನಮ್ಮ ಜೀವನದ ಅನೇಕ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಡೈನಿಂಗ್ ಟೇಬಲ್ ಅಂದರೆ ಇಡೀ ಕುಟುಂಬ ಒಟ್ಟಿಗೆ ಕುಳಿತು ಊಟ ಮಾಡುವ ಸ್ಥಳವಾಗಿದೆ. ಇಲ್ಲಿಂದಲೇ ಕುಟುಂಬ ಬಾಂಧವ್ಯ ಮತ್ತು ಸಾಮರಸ್ಯ ಬೆಳೆಯುತ್ತದೆ. ಆದರೆ, ಇದೇ ಮೇಜಿನ ಮೇಲೆ ಯಾವು ಯಾವುದೋ ವಸ್ತುಗಳನ್ನು ತಂದಿಟ್ಟರೆ ನಕಾರಾತ್ಮಕ ಶಕ್ತಿಯು ಮನೆಯನ್ನು ಸುತ್ತುವರೆಯಬಹುದು. ಊಟಕ್ಕೆ ಕುಳಿತುಕೊಳ್ಳುವ ಟೇಬಲ್ ಯಾವತ್ತೂ ಸ್ಚಚ್ಛವಾಗಿರಬೇಕು. ಇಲ್ಲವಾದಲ್ಲಿ ಹಣಕಾಸು ಸಮಸ್ಯೆಗಳ ಮೂಲ ಇದೇ ಆಗಬಹುದು. ಊಟದ ಟೇಬಲ್‌ಗೆ ಸಂಬಂಧಿಸಿದ ವಾಸ್ತು ನಿಯಮಗಳು ಏನು ಹೇಳುತ್ತೇವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಊಟದ ಮೇಜಿನ ಮೇಲೆ ಔಷಧಿಗಳನ್ನು ಇಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ, ಊಟದ ಮೇಜಿನ ಮೇಲೆ ಔಷಧಿಗಳು ಅಥವಾ ಪ್ರಿಸ್ಕ್ರಿಪ್ಷನ್‌ಗಳನ್ನು ಇಡಲೇಬಾರದು. ಈ ಅಭ್ಯಾಸವು ಮನೆ ಮಂದಿಯನ್ನು ಅನಾರೋಗ್ಯಕ್ಕೆ ದೂಡುತ್ತದೆ ಎಂದು ಹೇಳಲಾಗುತ್ತದೆ. ಇದು ಅನಗತ್ಯ ಕಾಯಿಲೆಗಳು ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಮನೆ ಮಂದಿಗೆ ಎದುರಾಗುವ ಆರೋಗ್ಯ ಸಮಸ್ಯೆಯನ್ನು ತಪ್ಪಿಸಬೇಕಾದರೆ ಮೊದಲು ಈ ಅಭ್ಯಾಸವನ್ನು ಬಿಟ್ಟು ಬಿಡಿ.
ಉಪ್ಪಿನ ಡಬ್ಬಿಯನ್ನು ತೆರೆದೇ ಇಡುವುದು:
ವಾಸ್ತು ಪ್ರಕಾರ, ಊಟದ ಮೇಜಿನ ಮೇಲೆ ಯಾವತ್ತೂ ತೆರೆದ ಪಾತ್ರೆಯಲ್ಲಿ ಉಪ್ಪಿನ ಬಾಟಲಿಯನ್ನು ಬಿಡಬೇಡಿ. ಹಗಲು ರಾತ್ರಿ ಎನ್ನದೇ ೨೪ ಗಂಟೆಯೂ ಉಪ್ಪನ್ನು ತೆರೆದಿಡುವುದರಿಂದ ಮನೆಗೆ ಬಡತನ ವಕ್ಕರಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾಗಿ ಉಪ್ಪಿನ ಅವಶ್ಯಕತೆಯಿದ್ದಾಗ ಮಾತ್ರ ಉಪ್ಪಿನ ಡಬ್ಬವನ್ನು ತಂದು ಅದನ್ನು ಮತ್ತೆ ಅಡುಗೆ ಮನೆಯಲ್ಲಿಯೇ ಇಡಿ.
ಮುರಿದ ಪಾತ್ರೆಗಳನ್ನು ಟೇಬಲ್ ಮೇಲೆ ಇಡುವುದು:
ವಾಸ್ತು ಪ್ರಕಾರ, ಊಟದ ಮೇಜಿನ ಮೇಲೆ ಮುರಿದ ಪಾತ್ರೆಗಳು ಅಥವಾ ಬಿರುಕು ಬಿಟ್ಟ ತಟ್ಟೆಗಳನ್ನು ಎಂದಿಗೂ ಇಡಬಾರದು. ಹಾಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.ಇದು ಮನೆಯಲ್ಲಿ ವಾಸ್ತು ದೋಷ ಕಾಣಿಸಿಕೊಳ್ಳುವುದಕ್ಕೂ ಕಾರಣವಾಗುತ್ತದೆ.
ಹಳಸಿದ ಆಹಾರವನ್ನು ಟೇಬಲ್ ಮೇಲೆ ಇಡುವುದು:
ವಾಸ್ತು ಪ್ರಕಾರ, ಊಟದ ಮೇಜಿನ ಮೇಲೆ ದೀರ್ಘಕಾಲ ಅಥವಾ ಇಡೀ ದಿನ ಉಳಿದಿರುವ ಅಥವಾ ಹಳಸಿದ ಆಹಾರವನ್ನು ಇಡಬೇಡಿ.ಇದು ಅನ್ನಪೂರ್ಣ ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ ಮನೆಯಲ್ಲಿರುವ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.
ಊಟದ ಮೇಜನ್ನು ಸ್ವಚ್ಛವಾಗಿಡಿ:
ವಾಸ್ತು ಪ್ರಕಾರ, ಊಟದ ಮೇಜು ಮತ್ತು ಡೈನಿಂಗ್ ಟೇಬಲ್ ಇರುವ ಕೋಣೆ ಯಾವಗಲೂ ಸ್ವಚ್ಛವಾಗಿರಬೇಕು. ಟೇಬಲ್ ಅನ್ನು ಸರಿಯಾಗಿ ಒರೆಸಿ ಶುಚಿಯಾಗಿಟ್ಟುಕೊಳ್ಳಬೇಕು. ಅದರ ಮೇಲೆ ಅಗತ್ಯ ವಸ್ತುಗಳನ್ನು ಮಾತ್ರ ಇರಿಸಿ. ಊಟದ ಟೇಬಲ್ ಮೇಲೆ ತಾಜಾ ಹೂವುಗಳು ಮತ್ತು ತಾಜಾ ಹಣ್ಣುಗಳ ಬಟ್ಟಲು ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications