ಆಕ್ಷನ್ ಪ್ರಿಯರ ಗಮನ ಸೆಳೆದ 'ಕೆಡಿ- ದಿ ಡೆವಿಲ್' ಸಿನಿಮಾ: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಗಳಿಸಿದ್ದೇಷ್ಟು ಗೊತ್ತಾ?
ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ಕೆಡಿ- ದಿ ಡೆವಿಲ್' (KD - The Devil) ಸಿನಿಮಾ ಗುರುವಾರ ತೆರೆಕಂಡಿದೆ. ಬೃಹತ್ ತಾರಾಗಣವನ್ನು ಹೊಂದಿರುವ ಈ ಆಕ್ಷನ್ ಡ್ರಾಮಾ ಆಧಾರಿತ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಸಾಧಾರಣ ಆರಂಭವನ್ನು ಪಡೆದುಕೊಂಡಿದೆ. ದೇಶಾದ್ಯಂತ ಒಟ್ಟು 845 ಶೋಗಳಲ್ಲಿ ಪ್ರದರ್ಶನಗೊಂಡಿರುವ ಈ ಸಿನಿಮಾ, ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 3.50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ 'ಸ್ಯಾಕ್ನಿಲ್ಕ್' (Sacnilk) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಧ್ರುವ ಸರ್ಜಾ ಚಿತ್ರದ ಮೊದಲ ದಿನದ ದೇಶೀಯ ಒಟ್ಟು ಗಳಿಕೆ 4.10 ಕೋಟಿ ರೂಪಾಯಿಗಳಷ್ಟಿದೆ. ಚಿತ್ರದ ನೆಟ್ ಕಲೆಕ್ಷನ್ ಸದ್ಯಕ್ಕೆ 3.50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ.

ಬಿಡುಗಡೆಯ ಮೊದಲ ದಿನವಾದ ಗುರುವಾರ ಚಿತ್ರವು ಒಟ್ಟಾರೆ ಶೇ. 46.0 ರಷ್ಟು ಆಕ್ಯುಪೆನ್ಸಿ ದಾಖಲಿಸಿದೆ. ಆದಾಗ್ಯೂ, ಚಿತ್ರದ ಕನ್ನಡದ 2ಡಿ (2D) ಆವೃತ್ತಿಯು ಒಟ್ಟಾರೆ ಶೇ. 23.80 ರಷ್ಟು ಆಕ್ಯುಪೆನ್ಸಿಯನ್ನು ವರದಿ ಮಾಡಿದೆ. ಮುಂಜಾನೆಯ ಶೋಗಳು ಶೇ. 18.50 ರಷ್ಟು ಪ್ರೇಕ್ಷಕರೊಂದಿಗೆ ನಿಧಾನಗತಿಯ ಆರಂಭ ಪಡೆದುಕೊಂಡವು. ನಂತರ ಮಧ್ಯಾಹ್ನದ ಶೋಗಳಲ್ಲಿ ಈ ಪ್ರಮಾಣ ಶೇ. 24.00 ಕ್ಕೆ ಸುಧಾರಿಸಿತು. ಸಂಜೆಯ ಶೋಗಳಲ್ಲಿ ಕೊಂಚ ಇಳಿಕೆ ಕಂಡುಬಂದು ಶೇ. 17.33 ರಷ್ಟು ಆಕ್ಯುಪೆನ್ಸಿ ದಾಖಲಾದರೆ, ರಾತ್ರಿಯ ಶೋಗಳಲ್ಲಿ ಪ್ರೇಕ್ಷಕರ ಸಂಖ್ಯೆ ಶೇ. 28.25 ರಷ್ಟು ಆಕ್ಯುಪೆನ್ಸಿ ಏರಿಕೆ ಕಂಡುಬಂದಿದೆ.
ಚಿತ್ರದ ತಾರಾಗಣ
'ಕೆಡಿ: ದಿ ಡೆವಿಲ್' ಸಿನಿಮಾವು ದೊಡ್ಡ ಮಟ್ಟದ ತಾರಾಗಣವನ್ನು ಹೊಂದಿದೆ. ಧ್ರುವ ಸರ್ಜಾ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ಕಿಚ್ಚ ಸುದೀಪ್, ಶಿಲ್ಪಾ ಶೆಟ್ಟಿ ಕುಂದ್ರಾ, ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತ ಮತ್ತು ನೋರಾ ಫತೇಹಿ ಮುಂತಾದ ಘಟಾನುಘಟಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಸಂಕೇತ್ ಆಚಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಚಿತ್ರದ ಕಥೆಯು 1980ರ ದಶಕದಲ್ಲಿ ನಡೆಯುವ ಕೊಲೆಗಳ ಸರಮಾಲೆಯೊಂದಿಗೆ ಆರಂಭವಾಗುತ್ತದೆ. ಈ ಘಟನೆಗಳು ಮಚ್ಚು (ಮಚ್ಚೆಟೆ) ಎಂಬ ಪ್ರಮುಖ ಅಸ್ತ್ರವನ್ನು ಪರಿಚಯಿಸುವುದಲ್ಲದೆ, ಅದರ ಐತಿಹಾಸಿಕ ಹಿನ್ನೆಲೆಯನ್ನು ಸೂಚಿಸುತ್ತವೆ. ನಂತರ ಕಥೆಯು ಹಿಂಧಿನ ಸಾಂಪ್ರದಾಯಿಕ ಗರಡಿ ಮನೆಯೊಂದನ್ನು ತೆರೆದಿಡುತ್ತದೆ. ಇಲ್ಲಿ ಸಂಜಯ್ ದತ್ ಅಭಿನಯದ 'ಡಾಕ್ ದೇವ' ಪಾತ್ರದ ಪರಿಚಯವಾಗುತ್ತದೆ. ಬಳಿಕ ಕಥೆಯು ಧ್ರುವ ಸರ್ಜಾ ನಿರ್ವಹಿಸಿರುವ 'ಕಾಳಿ' ಪಾತ್ರದತ್ತ ಸಾಗುತ್ತದೆ.
ವಿಮರ್ಶೆ ಹೇಗಿದೆ?
"ಒಟ್ಟಾರೆಯಾಗಿ ಹೇಳುವುದಾದರೆ, 'ಕೆಡಿ- ದಿ ಡೆವಿಲ್' ಪ್ರೇಕ್ಷಕರಿಗೆ ಮಿಶ್ರ ಸಿನಿಮೀಯ ಅನುಭವವನ್ನು ನೀಡುತ್ತದೆ" ಎಂದು ವಿಮರ್ಶೆಯಲ್ಲಿ ತಿಳಿಸಲಾಗಿದೆ. "ಆದಾಗ್ಯೂ ಕಾಳಿಯ ಪಾತ್ರದಲ್ಲಿ ಧ್ರುವ ಸರ್ಜಾ ಅವರ ನಟನೆ ಅತ್ಯುತ್ತಮವಾಗಿ ಮೂಡಿಬಂದಿದೆ" ಎಂದು ಶ್ಲಾಘಿಸಲಾಗಿದೆ. ವಾರಾಂತ್ಯದಲ್ಲಿ ರಜೆಯ ಕಾರಣದಿಂದ ಚಿತ್ರದ ಗಳಿಕೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.












Click it and Unblock the Notifications