ಬೇಸಿಗೆ ತಾಪಮಾನಕ್ಕೆ ನೈಸರ್ಗಿಕ ಪರಿಹಾರ: ದಕ್ಷಿಣ ಭಾರತದ 5 ಪಾರಂಪರಿಕ ತಂಪು ಆಹಾರಗಳು
ಭಾರತದಾದ್ಯಂತ ಸೂರ್ಯನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಈ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಜನರು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ದಕ್ಷಿಣ ಭಾರತದ ಪಾರಂಪರಿಕ ಆಹಾರಗಳು ನೈಸರ್ಗಿಕವಾಗಿ ನಮ್ಮ ದೇಹವನ್ನು ತಂಪಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು ಈಗ ಸೀಸನಲ್ ಸೂಪರ್‌ಫುಡ್‌ಗಳು ಎಂದು ಹೇಳಲಾಗುತ್ತದೆ.
ಇಲ್ಲಿದೆ ಬೇಸಿಗೆ ಕಾಲದ ದಕ್ಷಿಣ ಭಾರತೀಯ 5 ಪಾರಂಪರಿಕ ಆಹಾರಗಳು:
1. ಕರ್ನಾಟಕದ ಸೌತೆಕಾಯಿ ಮಜ್ಜಿಗೆ ಹುಳಿ
ಕರ್ನಾಟಕದಲ್ಲಿ ವಿಶೇಷವಾಗಿ ಉಡುಪಿ ಮತ್ತು ಮಂಗಳೂರು ಭಾಗದ ಒಂದು ಜನಪ್ರಿಯ, ತಂಪಾದ ಮತ್ತು ಆರೋಗ್ಯಕರವಾದ ಸಾಂಬಾರ್. ಸೌತೆಕಾಯಿ ಮತ್ತು ಮಜ್ಜಿಗೆ ಸೇರಿಸಿ ಮಾಡುವ ಹುಳಿ ಬೇಸಿಗೆಯಲ್ಲಿ ಹೆಚ್ಚು ಜನಪ್ರಿಯ. ನೀರಿನ ಅಂಶ ಅಧಿಕವಾಗಿರುವ ಸೌತೆಕಾಯಿ ಮತ್ತು ಮಜ್ಜಿಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ಹೈಡ್ರೇಶನ್ ಕಾಪಾಡುತ್ತದೆ.

2. ಆಂಧ್ರ-ತೆಲಂಗಾಣದ ಪಚ್ಚಿ ಪುಲುಸು
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪಚ್ಚಿ ಪುಲುಸು ಬೇಸಿಗೆಯ ಫೇವರಿಟ್ ಸಾರು. ಹುಣಸೆಹಣ್ಣು, ಈರುಳ್ಳಿ, ಬೆಲ್ಲ ಮತ್ತು ಹಸಿಮೆಣಸಿನಕಾಯಿ ಬಳಸಿ ಬೇಯಿಸದೆ ೫ ನಿಮಿಷಗಳಲ್ಲಿ ತಯಾರಿಸುವ ಸಾಂಪ್ರದಾಯಿಕ ರುಚಿಕರವಾದ ಸಾರು. ಈ ಪದಾರ್ಥ ದೇಹಕ್ಕೆ ತಂಪು ನೀಡುತ್ತದೆ. ಹುಣಸೆಹಣ್ಣು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ.
3. ಕೇರಳದ ಮಾವಿನ ಹಣ್ಣಿನ ಕರಿ
ಕೇರಳದ ಮಾವಿನ ಹಣ್ಣಿನ ಕರಿ, ಇದನ್ನು ಹೆಚ್ಚಾಗಿ ಮಾಂಬಜಾ ಪುಲಿಸ್ಸೆರಿ ಎಂದು ಕರೆಯಲಾಗುತ್ತದೆ. ಇದು ಮಾಗಿದ ಮಾವಿನ ಹಣ್ಣು, ಮೊಸರು ಮತ್ತು ತೆಂಗಿನ ಹಾಲಿನಿಂದ ತಯಾರಿಸಿದ ಹುಳಿ ಮತ್ತು ಸಿಹಿ ಮಿಶ್ರಿತ ಸಾಂಪ್ರದಾಯಿಕ ಕರಿ ಆಗಿರುತ್ತದೆ. ಕೇರಳದಲ್ಲಿ ಬೇಸಿಗೆಯಲ್ಲಿ ಮಾವಿನ ಹಣ್ಣಿನ ಕರಿ ವಿಶೇಷ ಎಂದರೆ ಸುಲಭವಾಗಿ ಜೀರ್ಣವಾಗುತ್ತದೆ. ತೆಂಗಿನ ಹಾಲು ದೇಹವನ್ನು ತಂಪಾಗಿಡುತ್ತದೆ, ಮಾವಿನ ಹಣ್ಣು ವಿಟಮಿನ್ C ನೀಡುತ್ತದೆ.
4. ತೆಲಂಗಾಣದ ಚಾಲ್ಲಾ ಪುಲುಸು ಮತ್ತು ಅಂಬಲಿ
ಗ್ರಾಮೀಣ ತೆಲಂಗಾಣದಲ್ಲಿ ಸಾಂಪ್ರದಾಯಿಕ ಆಹಾರ ಪದ್ದತಿಯಲ್ಲಿ ಚಾಲ್ಲಾ ಪುಲುಸು (ಮಜ್ಜಿಗೆ ಆಧಾರಿತ ಕರಿ) ಮತ್ತು ಅಂಬಲಿ ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯ ಆಹಾರಗಳು. ಸರಳ ಪದಾರ್ಥಗಳಿಂದ ತಯಾರಾಗುವ ಇವು ದೇಹಕ್ಕೆ ಪೌಷ್ಟಿಕಾಂಶ ಮತ್ತು ಆರೋಗ್ಯಕರ ಖಾದ್ಯಗಳಾಗಿವೆ.

5. ತಮಿಳುನಾಡಿನ ಮೊಸರು ಅನ್ನ
ತಮಿಳುನಾಡಿನಲ್ಲಿ ಮೊಸರು ಅನ್ನ ಬೇಸಿಗೆಯ ಪ್ರಮುಖ ಆಹಾರ. ಅನ್ನ ಮತ್ತು ತಾಜಾ ಮೊಸರು ಮತ್ತು ಹಾಲು ಸೇರಿಸಿ ತಯಾರಿಸುವ ತಂಪಾದ ಈ ಆಹಾರ ಜೀರ್ಣಕ್ರಿಯೆಗೆ ಸಹಕಾರಿ. ಸಾಸಿವೆ, ಕರಿಬೇವು, ಶುಂಠಿ ತಾಳಿಸಿದರೆ ರುಚಿ ಹೆಚ್ಚುತ್ತದೆ. ದ್ರಾಕ್ಷಿ ಅಥವಾ ದಾಳಿಂಬೆ ಸೇರಿಸಿದರೆ ಇನ್ನಷ್ಟು ರುಚಿಕರವಾಗುತ್ತದೆ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ ಪಾರಂಪರಿಕ ಆಹಾರಗಳು ಸರಳ ಮತ್ತು ಪರಿಣಾಮಕಾರಿ ಮಾರ್ಗಗಳಾಗಿವೆ. ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಂಡರೆ ಆರೋಗ್ಯಕರ ಬೇಸಿಗೆಯನ್ನು ಅನುಭವಿಸಬಹುದು.












Click it and Unblock the Notifications