ರಾಯಚೂರು: ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ
ರಾಯಚೂರು, ಜುಲೈ 25: ನಗರದ ಸರಕಾರಿ ಕಿರಿಯ ಬಾಲಕಿಯರ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿ ಎರಡು ದಿನ ಕಳೆದರೂ, ಇನ್ನೂ ಪತ್ತೆಯಾಗದಿರುವುದು ಪಾಲಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಶನಿವಾರ ಕಾಲೇಜಿಗೆ ಹೋಗಿದ್ದ ಶಕ್ತಿನಗರದ ಇಬ್ಬರು ವಿದ್ಯಾರ್ಥಿನಿಯರು ಹಾಗೂ ರಾಯಚೂರು ನಗರದ ಇಬ್ಬರು ವಿದ್ಯಾರ್ಥಿನಿಯರು ಮತ್ತೆ ಮನೆಗೆ ಮರಳದಿರುವುದರಿಂದ ಭಾನುವಾರ ಮಹಿಳಾ ಠಾಣೆಯಲ್ಲಿ ಪೋಷಕರು ಅಪಹರಣದ ದೂರು ದಾಖಲಿಸಿದ್ದಾರೆ.
ನಾಪತ್ತೆಯಾದವರಲ್ಲಿ ಮೂವರು ದ್ವಿತೀಯ ಪಿಯುಸಿ ಹಾಗೂ ಒಬ್ಬಳು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ . ಪೊಲೀಸರು ಮಂತ್ರಾಲಯ ಸೇರಿದಂತೆ ಅನುಮಾನವಿರುವ ಪ್ರದೇಶಗಳಲ್ಲಿ ಶೋಧ ನಡೆಸಿದ್ದರು. ಆದರೆ, ಎಲ್ಲಿಯೂ ಸಹ ಬಾಲಕಿಯರ ಸುಳಿವು ದೊರೆಯದಿರುವುದರಿಂದ ಆತಂಕ ಮೂಡಿಸಿದೆ.

ಎರಡು ದಿನಗಳಿಂದ ವಿದ್ಯಾರ್ಥಿನಿಯರು ಎಲ್ಲಿ ಇದ್ದಾರೆ? ಎನ್ನುವ ಮಾಹಿತಿ ತಿಳಿಯದೆ ಪಾಲಕರು ಕಳವಳಗೊಂಡಿದ್ದಾರೆ. ನಾಲ್ವರ ಪೈಕಿ ಮೂವರು ಆಪ್ತ ಗೆಳತಿಯರಾಗಿದ್ದಾರೆ. ವಿದ್ಯಾರ್ಥಿನಿಯರಿಗೆ ಸಂಪರ್ಕದಲ್ಲಿರುವ ಎಲ್ಲರನ್ನು ವಿಚಾರಿಸಲಾಗಿದೆ. ಆದರೆ, ಯಾರಿಂದಲೂ ಯಾವುದೇ ಸುಳಿವು ದೊರೆಯದಿರುವುದರಿಂದ ಇದೊಂದು ನಿಗೂಢ ಪ್ರಕರಣವಾಗಿದೆ.
ಕಾಲೇಜಿನ ಮಾಹಿತಿಯನ್ವಯ ವಿದ್ಯಾರ್ಥಿನಿಯರು ಶನಿವಾರ ಕಾಲೇಜಿಗೆ ಬಂದಿರಲಿಲ್ಲ. ಕಾಲೇಜಿಗೆ ಹೋಗುವುದಾಗಿ ಹೇಳಿದಂತಹ ವಿದ್ಯಾರ್ಥಿಗಳು ಎಲ್ಲಿ ಹೋದರು? ಎನ್ನುವುದೇ ಈಗ ಯಕ್ಷಪ್ರಶ್ನೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೋಧ ಕಾರ್ಯ ಮತ್ತಷ್ಟು ತೀವ್ರಗೊಳಿಸಲಾಗಿದೆ.
ಸೋಮವಾರ ಡಿವೈಎಸ್‌ಪಿ ವೆಂಕಟೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಗಂಡೂರಾವ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಹಾಜರಾತಿ ಮತ್ತು ದಾಖಲಾತಿಗಳ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಪೊಲೀಸರ ತಂಡಗಳನ್ನು ರಚಿಸಿ ತನಿಖೆ ಜವಾಬ್ದಾರಿ ವಹಿಸಲಾಗಿದೆ.

ಪೊಲೀಸರ ತನಿಖೆಗೆ ಸಂಪೂರ್ಣ ಸಹಕರಿಸುತ್ತಿದ್ದೇವೆ. ಕಾಲೇಜ್ ಕ್ಯಾಂಪಸ್ನಲ್ಲಿ ಸಿಸಿ ಕ್ಯಾಮೆರಾ ಸ್ಥಗಿತಗೊಂಡಿದೆ. ಅದರಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ. ನಾಪತ್ತೆಯಾಗಿರುವ ಮೂವರು ವಿದ್ಯಾರ್ಥಿನಿಯರು ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿದ್ದರೆ, ಒಬ್ಬರು ಮಾತ್ರ ಪ್ರಥಮ ಪಿಯುಸಿ ಓದುತ್ತಿದ್ದಾರೆ ಎಂದು ಪ್ರಾಚಾರ್ಯ ಚಂದ್ರಶೇಖರ್ ತಿಳಿಸಿದ್ದಾರೆ.
ಕಲಿಕೆಯಲ್ಲಿ ಹಿಂದಿದ್ದ ವಿದ್ಯಾರ್ಥಿನಿಯರು; ಕಾಣೆಯಾಗಿರುವ ವಿದ್ಯಾರ್ಥಿನಿಯರು ವಿಷಯವು ಜುಲೈ 23ರಂದು ಗೊತ್ತಾಯಿತು. ಕಾಲೇಜು ಕ್ಯಾಂಪಸ್ನ ಆಚೆ ಈ ವಿದ್ಯಮಾನ ನಡೆದಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯರ ಬಗ್ಗೆ ತರಗತಿ ಉಪನ್ಯಾಸಕರಿಂದ ಮಾಹಿತಿ ಪಡೆದಿದ್ದೇವೆ. ಇವರು ನಾಲ್ವರೂ ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ. ಓದಿನಲ್ಲೂ ಹಿಂದುಳಿದಿದ್ದರು. ಹಾಜರಾತಿ ದಾಖಲೆ ಪ್ರಕಾರ 4 ದಿನಗಳಿಂದ ಕಾಲೇಜಿಗೆ ಬಂದಿಲ್ಲ. ಪೊಲೀಸರು ಕೇಳಿದ್ದರಿಂದ ಅವರಿಗೆ ಹಾಜರಾತಿ ಪುಸ್ತಕ ಮತ್ತು ಅಗತ್ಯ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.












Click it and Unblock the Notifications