ನನಗೆ ಮತ್ತೆ ಮುಖ್ಯಮಂತ್ರಿ ಆಗುವ ಉದ್ದೇಶ ಇರಲಿಲ್ಲ: ಬಿಜೆಪಿ ಟೀಕೆಗಳಿಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ
ಪಟ್ನಾ, ಆಗಸ್ಟ್ 24: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಸರ್ಕಾರವು ಪ್ರತಿಪಕ್ಷ ಬಿಜೆಪಿಯ ಶಾಸಕರ ವಾಕ್‌ಔಟ್ ನಡುವೆ ಬುಧವಾರ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದಿದೆ. 165 ಶಾಸಕರ ಬೆಂಬಲದೊಂದಿಗೆ ಮಹಾಮೈತ್ರಿಕೂಟವು 243 ಸದಸ್ಯ ಬಲದ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಸುಲಭವಾಗಿ ಗೆದ್ದುಕೊಂಡಿತು.
ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಬಿಜೆಪಿ ತಮ್ಮ ವಿರುದ್ಧ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ವಿಚಾರದಲ್ಲಿ ಮಾಡಿದ್ದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಬಿಟ್ಟು ಹೊರಬಂದು ಮಹಾಮೈತ್ರಿಕೂಟದೊಂದಿಗೆ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ನನಗೆ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಇರಲಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಧಾನಿಯಾಗಬೇಕೆಂಬ ತನ್ನ ಮಹತ್ವಾಕಾಂಕ್ಷೆಯ ಆರೋಪದ ಕುರಿತು ಕುಮಾರ್, ತನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆಯಿಲ್ಲ ಆದರೆ ಬಿಹಾರದ ಅಭಿವೃದ್ಧಿಗಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದರು.
ಕಡಿಮೆ ಸೀಟು ಗೆದ್ದಿದ್ದರು ನಿತೀಶ್ ಕುಮಾರ್ ಅವರನ್ನು ಸಿಎಂ ಮಾಡಿದ್ದಾಗಿ ಹೇಳುತ್ತಿದ್ದ ಬಿಜೆಪಿಗೆ ಉತ್ತರ ನೀಡಿದ ನಿತೀಶ್ ಕುಮಾರ್, 2020 ರ ವಿಧಾನಸಭಾ ಚುನಾವಣೆಯನ್ನು ಮಾತ್ರ ನೆನಪಿಸಿಕೊಳ್ಳಬೇಡಿ, ಆದರೆ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗಿಂತ ಜೆಡಿಯು ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎನ್ನುವುದನ್ನು ನೆನಪು ಮಾಡಿಕೊಳ್ಳಿ ಎಂದರು.

ಮಾಧ್ಯಮಗಳು ಕೇಂದ್ರ ಸರ್ಕಾರದ ಹಿಡಿತದಲ್ಲಿವೆ
ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್ ಕುಮಾರ್, ಪಾಟ್ನಾ ವಿಶ್ವವಿದ್ಯಾನಿಲಯಕ್ಕೆ ಕೇಂದ್ರ ಸ್ಥಾನಮಾನಕ್ಕಾಗಿ ತಮ್ಮ ಮನವಿಯನ್ನು ಬಿಜೆಪಿ ಸರ್ಕಾರ ಸ್ವೀಕರಿಸಲ್ಲ ಎಂದು ಹೇಳಿದರು.
"2017ರಲ್ಲಿ ನಾನು ಪಾಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಾಗ ಯಾರೂ ಅದರತ್ತ ಗಮನ ಹರಿಸಲಿಲ್ಲ. ಈಗ ಕೇಂದ್ರ ಸರ್ಕಾರ ಅದು ನಿಮ್ಮದೇ ಕೆಲಸ ಎನ್ನುವಂತೆ ಜಾಹೀರಾತು ನೀಡುತ್ತಿದ್ದೀರಿ. ಸಾಮಾಜಿಕ ಮಾಧ್ಯಮ ಮತ್ತು ದೇಶದ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೊಂದಿದೆ. ಕೇಂದ್ರದ ಕೆಲಸಗಳ ಬಗ್ಗೆ ಮಾತ್ರ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಆರೋಪಿಸಿದರು.

ವಾಜಪೇಯಿ ಮತ್ತು ಅಡ್ವಾಣಿ ಗೌರವದಿಂದ ನಡೆಸಿಕೊಂಡರು
ಆಗಸ್ಟ್ ತಿಂಗಳ ಆರಂಭದಲ್ಲಿ ಬಿಜೆಪಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿರುವ ನಿತೀಶ್ ಕುಮಾರ್ ಬಿಜೆಪಿ ಮೇಲಿನ ದಾಳಿಯನ್ನು ಮುಂದುವರೆಸಿದರು.
"ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿಯಂತಹ ನಾಯಕರು ನನ್ನನ್ನು ಗೌರವದಿಂದ ನಡೆಸಿಕೊಂಡರು. 2013ರಲ್ಲಿ ಬಿಜೆಪಿ ಅವರನ್ನು ಕಡೆಗಣಿಸಿದ್ದನ್ನು ವಿರೋಧಿಸಿ ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಂಡೆ" ಎಂದು ಹೇಳಿದ್ದಾರೆ.
ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಸಂದರ್ಭದಲ್ಲಿ ಅದನ್ನು ವಿರೋಧಿಸಿದ್ದ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು.

ಬಿಜೆಪಿ ಶಾಸಕರ ಕಾಲೆಳೆದ ಸಿಎಂ ನಿತೀಶ್ ಕುಮಾರ್
ಬಿಜೆಪಿ ಪಕ್ಷದ ವಿರುದ್ಧ ನಿತೀಶ್ ಕುಮಾರ್ ಟೀಕೆ ಮಾಡಲು ಆರಂಭಿಸುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ವಾಕ್‌ಔಟ್ ಮಾಡಲು ಮುಂದಾದರು.
ಬಿಜೆಪಿ ಶಾಸಕರು ಸದನದಿಂದ ಹೊರ ಹೋಗಲು ಶುರು ಮಾಡುತ್ತಿದ್ದಂತೆ ಅವರನ್ನು ಉದ್ದೇಶಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್, "ನೀವು (ಬಿಜೆಪಿ ಶಾಸಕರು) ಎಲ್ಲರೂ ಓಡಿಹೋಗುತ್ತಿದ್ದೀರಾ? ನೀವು ನನ್ನ ವಿರುದ್ಧ ಹೇಳಿದರೆ ಮಾತ್ರ ನಿಮ್ಮ ಪಕ್ಷದಲ್ಲಿ ಸ್ಥಾನ ಪಡೆಯುತ್ತೀರಿ. ನೀವೆಲ್ಲರೂ ಆ ಕೆಲಸ ಮಾಡಬೇಕು. ನಿಮ್ಮ ಮೇಲಿನ ಅಧಿಕಾರಿಗಳಿಂದ ಆದೇಶ ಬರಲಿದೆ" ಎಂದು ವ್ಯಂಗ್ಯವಾಡಿದರು.

ಮಹಾಘಟಬಂಧನ್‌ನಲ್ಲಿ ಎಂಟು ಪಕ್ಷಗಳ ಶಾಸಕರು
ಆರ್ ಜೆಡಿ, (79), ಜೆಡಿಯು (45), ಕಾಂಗ್ರೆಸ್ (19), ಸಿಪಿಐ-ಎಂಎಲ್ (12), ಹಚ್‌ಎಎಂಎಸ್ (4), ಸಿಪಿಐ (2), ಸಿಪಿಎಂ (2), ಎಐಎಂಐಎಂ (1) ಒಟ್ಟು ಎಂಟು ಪಕ್ಷಗಳು ಒಟ್ಟಾಗಿ ಮಹಾಘಟಬಂಧನ್ ಸರ್ಕಾರ ರಚನೆ ಮಾಡಿವೆ. ಪಕ್ಷೇತರ ಶಾಸಕ ಮತ್ತು ಸಚಿವ ಸುಮಿತ್ ಕುಮಾರ್ ಸಿಂಗ್ ಕೂಡ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಿದ್ದಾರೆ.
ಅಗತ್ಯವಿರುವ 121 ಶಾಸಕರ ಸಂಖ್ಯೆಗಿಂತ 165 ಶಾಸಕರು ಮಹಾಮೈತ್ರಿ ಸರ್ಕಾರವನ್ನು ಬೆಂಬಲಿಸುವುದರೊಂದಿಗೆ. ಬಹುಮತ ಸಾಬೀತು ಪರೀಕ್ಷೆ ಕೇವಲ ಔಪಚಾರಿಕವಾಗಿತ್ತು.











Click it and Unblock the Notifications