ಲಾಲೂ ನನ್ನನ್ನು ಶೂಟ್ ಮಾಡಬಹುದು, ಬೇರೇನೂ ಅವರಿಂದಾಗದು: ನಿತೀಶ್ ಕುಮಾರ್
ಪಾಟ್ನಾ, ಅಕ್ಟೋಬರ್ 27: ಲಾಲೂ ಪ್ರಸಾದ್ ಯಾದವ್ ನನ್ನನ್ನು ಶೂಟ್ ಮಾಡಬಹುದು ಬೇರೇನೂ ಆಗದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಸರ್ಕಾರದ ವಿಸರ್ಜನೆಗೆ ತಾವು ತಯಾರಿ ನಡೆಸಿರುವುದಾಗಿ ಹೇಳಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ಗೆ ನಿತೀಶ್ ತಿರುಗೇಟು ನೀಡಿದ್ದಾರೆ.
ತಾರಾಪುರ ಮತ್ತು ಕುಶೇಶ್ವರ ಆಸ್ಥಾನ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕಾರಣ ಆಡಳಿತಾರೂಢ ಜೆಡಿಯು ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಲಾಲೂ ಪ್ರಸಾದ್ ಯಾದವ್ ಅವರು ಮೂರು ವರ್ಷಗಳ ಬಳಿಕ ಇತ್ತೀಚೆಗೆ ಪಾಟ್ನಾಗೆ ಆಗಮಿಸಿದ್ದು, ಉಪಚುನಾವಣೆ ಪ್ರಚಾರ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹೇಳಿದ್ದರು. ಉಪಚುನಾವಣೆಗಳಲ್ಲಿ ನಿತೀಶ್‌ರನ್ನು ವಿಸರ್ಜನೆ ಮಾಡಲಿದ್ದೇವೆ ಎಂದು ಲಾಲೂ ಹೇಳಿದ್ದರು. ಇದರ ಹಿನ್ನೆಲೆಯಲ್ಲೇ ನಿತೀಶ್ ಹಾಗೂ ಲಾಲೂ ಮಾತಿನ ಚಕಮಕಿ ಆರಂಭಗೊಂಡಿದೆ.

ನನ್ನನ್ನು ವಿಸರ್ಜನೆ ಮಾಡುವ ಕುರಿತು ಲಾಲೂ ಪ್ರಸಾದ್ ಯಾದವ್ ಹೇಳಿಕೆ ನೀಡಿದ್ದಾರೆ. ಅವರು ನನ್ನ ಮೇಲೆ ಗುಂಡು ಹಾರಿಸಬಹುದು. ಇದನ್ನೊಂದು ಬಿಟ್ಟು ಅವರು ಇನ್ನೇನು ತಾನೇ ಮಾಡಲು ಸಾಧ್ಯ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಲಾಲೂ ಬೇಕಾದರೆ ನನ್ನ ಮೇಲೆ ಗುಂಡಿನ ದಾಳಿ ನಡೆಸಬಹುದು. ಏಕೆಂದರೆ ಅವರು ಇದನ್ನೊಂದನ್ನು ಬಿಟ್ಟು ಬೇರೆ ಏನನ್ನೂ ಮಾಡಲಾರರು ಎಂದು ನಿತೀಶ್ ಕುಮಾರ್ ಪತ್ರಕರ್ತರ ಪ್ರಶ್ನೆಗೆ ಹಾಸ್ಯಭರಿತವಾಗಿ ಉತ್ತರ ನೀಡಿದರು.
ಅಲ್ಲದೇ ಕಾಂಗ್ರೆಸ್ ಬಗ್ಗೆಯೂ ಮಾತನಾಡಿದ್ದ ಲಾಲೂ, ಕಾಂಗ್ರೆಸ್ ಈ ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷ. ರಾಜ್ಯ ಮತ್ತು ದೇಶದ ಒಳಿತಿಗಾಗಿ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಹೇಳಿದ್ದರು.
ಲಾಲು ಪ್ರಸಾದ್ ಯಾದವ್ ಬಿಹಾರದಲ್ಲಿ ಎನ್‌ಡಿಎ ಆಡಳಿತ ಕೊನೆಗಾಣಿಸುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ ರಾಜ್ಯದ ಜನತೆ ಯಾರನ್ನು ಮನೆಯಲ್ಲಿ ಕೂರಿಸಬೇಕು ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲೇ ನಿರ್ಧರಿಸಿಯಾಗಿದೆ. ಲಾಲೂ ಅವರಿಗೆ ಇನ್ನೂ ಸತ್ಯದ ಅರಿವಾಗಿಲ್ಲ ಎಂದರೆ ಅದಕ್ಕೆ ನಾನು ಹೊಣೆಯಲ್ಲ ಎಂದು ನಿತೀಶ್ ಕುಮಾರ್ ವ್ಯಂಗ್ಯವಾಡಿದರು.
ಅನಾರೋಗ್ಯದ ಕಾರಣಕ್ಕೆ ನಾನು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೆ. ಆದರೆ ರಾಜ್ಯದ ಹಿತದೃಷ್ಟಿಯಿಂದ ಮತ್ತೆ ರಾಜಕಾರಣದಲ್ಲಿ ಸಕ್ರಿಯನಾಗುತ್ತೇನೆ. ಎನ್‌ಡಿಎ ಮತ್ತು ನಿತೀಶ್ ಕುಮಾರ್ ಅವರ ದುರಾಡಳಿತವನ್ನು ಕೊನೆಗಾಣಿಸುತ್ತೇನೆ ಎಂದು ಲಾಲೂ ಪ್ರಸಾದ್ ಯಾದವ್ ಗುಡುಗಿದ್ದರು.
ಇದಕ್ಕೂ ಮೊದಲು ಮಾತನಾಡಿದ್ದ ಲಾಲೂ ಪ್ರಸಾದ್ ಯಾದವ್, ಬಿಹಾರದಲ್ಲಿ ಎನ್‌ಡಿಎ ಆಡಳಿತ ಕೊನೆಗಾಣಿಸುವುದು ನಮ್ಮ ಗುರಿಯಾಗಿದೆ. ನಿತೀಶ್ ಕುಮಾರ್ ಅವರ ವಿಜರ್ಜನ್ ಮಾಡಿಯೇ ಸಿದ್ಧ ಎಂದು ಗುಡುಗಿದ್ದರು.
ಸೆಪ್ಟೆಂಬರ್ 2018ರಲ್ಲಿ ಲಾಲು ಪ್ರಸಾದ್ ಯಾದವ್ ಒಮ್ಮೆ ಮಾತ್ರ ಮಗ ತೇಜ್ ಪ್ರತಾಪ್ ಮದುವೆಗೆಂದು ರಾಂಚಿಯಿಂದ ಜಾಮೀನಿನ ಮೇಲೆ ಪಾಟ್ನಾಕ್ಕೆ ಬಂದಿದ್ದರು. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಹಲವು ಬಾರಿ ಜಾಮೀನು ವಾಯಿದೆಯನ್ನು ವಿಸ್ತರಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತೇಜ್ ಪ್ರತಾಪ್ ಮತ್ತು ತೇಜಸ್ವಿ ತಮ್ಮ ಬಹುಕಾಲದ ವೈಷಮ್ಯ ಮರೆತಂತೆ ಕಂಡುಬಂದರು.
ರಾಂಚಿಯಿಂದ ಬಂದ ಲಾಲು ಯಾದವ್ ನೇರವಾಗಿ ತಮ್ಮ ಪತ್ನಿಯ ಮನೆಗೆ ತೆರಳಿದರು. ತಮಗಾಗಿ ಕಾದು ನಿಂತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿಲ್ಲ. ಲಗುಬಗೆಯ ಮಾತಿಗೆ ಹೆಸರುವಾಸಿಯಾದ ಲಾಲು ಯಾದವ್ ಮಾತಿನ ಮೋಡಿಯಿಂದ ಎಂಥ ವಾತಾವರಣದಲ್ಲಿಯೂ ಎಲ್ಲರನ್ನೂ ತಮ್ಮತ್ತ ಸೆಳೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ನಮ್ಮದೇ ದೊಡ್ಡ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಆರ್‌ಜೆಡಿ, ಉಪಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎಯಿಂದ ಕೆಲ ಶಾಸಕರನ್ನು ಸೆಳೆದು ರಾಜ್ಯ ರಾಜಕಾರಣದ ಸಮೀಕರಣ ಬದಲಿಸುವ ಮಾತು ಆಡುತ್ತಿದೆ.
ಆರ್‌ಜೆಡಿ ಮತ್ತು ಅದರ ಮೈತ್ರಿ ಪಕ್ಷ ಕಾಂಗ್ರೆಸ್ ನಡುವೆ ಸಂಬಂಧ ಹಳಸಿದೆ. 2024ರ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿತ್ತು. ಇದೇ ಫೆಬ್ರವರಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಎರಡು ತಿಂಗಳ ನಂತರ ಹೊಸ ಅರ್ಜಿ ಸಲ್ಲಿಸಲು ಸೂಚಿಸಿತ್ತು.
ಲಾಲೂ ಪ್ರಸಾದ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚೈಬಾಸಾ ಖಜಾನೆಯಲ್ಲಿ 33.67 ಕೋಟಿ ಅವ್ಯವಹಾರ ಪ್ರಕರಣದ ಮೇಲೆ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಸೇರಿ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಬಹುಕೋಟಿ ಮೇವು ಹಗರಣದಲ್ಲಿ ನಾಲ್ಕು ಪ್ರಕರಣಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್ ಅವರಿಗೆ ಮೂರು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿದೆ.












Click it and Unblock the Notifications