ಬಿಹಾರ ಮತದಾರರ ನಿರ್ಧಾರದ ಬಗ್ಗೆ ತೇಜಸ್ವಿ ಯಾದವ್ ಭವಿಷ್ಯ
ಪಾಟ್ನಾ, ನವೆಂಬರ್.07: ಬಿಹಾರದ 16 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಅಂತಿಮ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು ರಾಜ್ಯದ ಜನರು ಭವಿಷ್ಯದ ಕುರಿತು ನಿರ್ಧರಿಸಲಿದ್ದಾರೆ ಎಂದು ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಭವಿಷ್ಯ ನುಡಿದಿದ್ದಾರೆ.
"ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬದಲ್ಲಿ ಪ್ರತಿಯೊಬ್ಬ ಪ್ರಜೆಯೂ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಈ ಚುನಾವಣೆಯು ಬಿಹಾರದ ಮುಂದಿನ ಭವಿಷ್ಯವನ್ನು ತೀರ್ಮಾನಿಸಲಿದೆ. ಸಿಎಂ ನಿತೀಶ್ ಕುಮಾರ್ ಈಗಾಗಲೇ ಸಾಕಷ್ಟು ದಣಿದು ಹೋಗಿದ್ದಾರೆ. ರಾಜ್ಯವನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ" ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಬಿಹಾರದಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣಾ ಮತದಾನ ಪೂರ್ಣಗೊಂಡಿದೆ. ಎರಡೂ ಹಂತಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಮಾಣದ ಮತದಾನ ನಡೆದಿದೆ. ನವೆಂಬರ್.10ರಂದು 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವು ಹೊರ ಬೀಳಲಿದೆ.

ಅಂತಿಮ ಹಂತದಲ್ಲಿ 78 ಕ್ಷೇತ್ರಕ್ಕೆ ಮತದಾನ:
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೇ ಹಾಗೂ ಅಂತಿಮ ಹಂತದಲ್ಲಿ 16 ಜಿಲ್ಲೆಗಳ 78 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಬಾರಿ 2.35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೂರನೇ ಹಂತದ ಕಣದಲ್ಲಿ 382 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 1204 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1094 ಪುರುಷ ಅಭ್ಯರ್ಥಿಗಳಾಗಿದ್ದರೆ, 110 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3ನೇ ಹಂತದಲ್ಲಿ ಒಟ್ಟು 2,35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಈ ಪೈಕಿ 1.23 ಕೋಟಿ ಪುರುಷ ಹಾಗೂ 1.12ರಷ್ಟು ಮಹಿಳಾ ಮತದಾರರಿದ್ದಾರೆ.
ಪಕ್ಷವಾರು ಅಭ್ಯರ್ಥಿಗಳು?:
ಬಿಹಾರದಲ್ಲಿ ಅಂತಿಮ ಹಂತದ ಚುನಾವಣಾ ಕಣದಲ್ಲಿ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. 78 ಕ್ಷೇತ್ರಗಳ ಪೈಕಿ ಆರ್ ಜೆಡಿ 46 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಲೋಕಜನಶಕ್ತಿ ಪಕ್ಷವು 2ನೇ ಸ್ಥಾನದಲ್ಲಿದೆ. ಜೆಡಿಯು 37, ಬಿಜೆಪಿ 35, ಎನ್ ಸಿಪಿ 31, ಕಾಂಗ್ರೆಸ್ 25, ರಾಷ್ಟ್ರೀಯ ಲೋಕ ಸಮತಾ ಪಕ್ಷ 23, ಬಹುಜನ ಸಮಾಜವಾದಿ ಪಕ್ಷ 19 ಹಾಗೂ ಸಿಪಿಐ ಪಕ್ಷದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದಾರೆ.











Click it and Unblock the Notifications