ಗೋವಾದಲ್ಲಿ ಕೋವಿಡ್ ಪ್ರಕರಣ ಏರಿಕೆ; ಹಲವು ನಿರ್ಬಂಧ
ಪಣಜಿ, ಜನವರಿ 04; ಹೊಸ ವರ್ಷದ ಪಾರ್ಟಿ, ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದ ಗೋವಾದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಇದರಿಂದಾಗಿ ಹಲವು ನಿರ್ಬಂಧಗಳನ್ನು ಘೋಷಣೆ ಮಾಡಲಾಗಿದೆ.
ಗೋವಾದಲ್ಲಿ ಸೋಮವಾರ 388 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1,671ಕ್ಕೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಕೋವಿಡ್ ಟಾಸ್ಕ್ ಫೋರ್ಸ್ ತುರ್ತು ಸಭೆ ನಡೆಸಿತು.
ಸಭೆಯ ಬಳಿಕ ನೈಟ್ ಕರ್ಫ್ಯೂ, ಶಾಲೆಗಳ ಭೌತಿಕ ತರಗತಿ ರದ್ದು, ಕಾಲೇಜುಗಳಿಗೆ ಜನವರಿ 26ರ ತನಕ ರಜೆ ಸೇರಿದಂತೆ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಕೋವಿಡ್ ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಿರ್ಬಂಧಗಳು; ಗೋವಾ ಸರ್ಕಾರ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಜನವರಿ 26ರಂದು ಕೋವಿಡ್ ಟಾಸ್ಕ್ ಫೋರ್ಸ್ ಮತ್ತೆ ಸಭೆ ನಡೆಸಲಿದ್ದು, ಮುಂದಿನ ತೀರ್ಮಾನ ಕೈಗೊಳ್ಳಲಿದೆ.
8 & 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳನ್ನು ಜನವರಿ 26ರ ತನಕ ರದ್ದುಗೊಳಿಸಲಾಗಿದೆ. 10 ರಿಂದ 12ನೇ ತರಗತಿಯ ಮಕ್ಕಳು ಕೋವಿಡ್ ಲಸಿಕೆ ಪಡೆಯಲು ಮಾತ್ರ ಆಗಮಿಸಲಿದ್ದಾರೆ. ಕಾಲೇಜುಗಳು ಜನವರಿ 26ರ ತನಕ ಮುಚ್ಚಿರುತ್ತವೆ.
ಸಭೆಯ ಬಳಿಕ ಮಾತನಾಡಿದ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಶೇಖರ್ ಸಲ್ಕಾರ್, "ಜನವರಿ 26ರಂದು ಕೋವಿಡ್ ಟಾಸ್ಕ್ ಫೋರ್ಸ್ ಮತ್ತೆ ಸಭೆ ನಡೆಸಲಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
"ಗೋವಾ ಜನರ ಆರೋಗ್ಯ, ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಆರೋಗ್ಯವೂ ನಮಗೆ ಮುಖ್ಯ. ಆದ್ದರಿಂದ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ" ಎಂದು ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಪ್ರತಿಕ್ರಿಯೆ ನೀಡಿದ್ದಾರೆ.
"ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಹೊಸ ವರ್ಷ ಮತ್ತು ಕ್ರಿಸ್ ಮಸ್ ಸಂದರ್ಭದಲ್ಲಿ ಗೋವಾಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಡಿಸೆಂಬರ್ 31ರಂದು ಪಾರ್ಟಿ, ಸಮಾರಂಭಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿತ್ತು.
ಗೋವಾಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧವಿದ್ದ ಕಾರಣ ಗೋವಾಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.
ಓಮಿಕ್ರಾನ್ ಪ್ರಕರಣಗಳು; ಗೋವಾ ರಾಜ್ಯದಲ್ಲಿ ಒಟ್ಟು 4 ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಸೋಂಕಿತರಲ್ಲಿ ಒಬ್ಬರು ಗೋವಾದ ನಿವಾಸಿಯಾಗಿದ್ದು, ಯಾವುದೇ ಟಾವೆಲ್ ಹಿಸ್ಟರಿ ಹೊಂದಿಲ್ಲ.
ರಾಜ್ಯದಲ್ಲಿನ ಕೋವಿಡ್ ಪಾಸಿಟಿವಿಟಿ ದರ ಶೇ 10.7ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ 5ರಷ್ಟಿದೆ. ಆದ್ದರಿಂದ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಒಳಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಗೋವಾದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಈಗಾಗಲೇ ಚುನಾವಣಾ ಆಯೋಗದ ತಂಡ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದೆ. ಫ್ರೆಬ್ರವರಿ ಅಂತ್ಯ ಅಥವ ಮಾರ್ಚ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಹಡಗಿನಲ್ಲಿ ಬಂದವರಿಗೆ ಸೋಂಕು; ಮಂಬೈನಿಂದ ಗೋವಾಕ್ಕೆ ಆಗಮಿಸಿದ ಹಡಗಿನಲ್ಲಿದ್ದ 2000 ಜನರಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ಮಾಹಿತಿ ಇದೆ. ಪ್ರಯಾಣಿಕರ ಕೋವಿಡ್ ಪರೀಕ್ಷೆ ನಡೆಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ವಾಸ್ಕೋ ಬಳಿ ಹಡಗು ನಿಂತಿದೆ.












Click it and Unblock the Notifications