ಗೋವಾ ಚುನಾವಣೆ; ಪತಿ, ಪತ್ನಿ ಇಬ್ಬರೂ ಶಾಸಕರಾಗಿ ಆಯ್ಕೆ!
ಪಣಜಿ, ಮಾರ್ಚ್ 10; ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಚುನಾವಣಾ ಕಣದಲ್ಲಿ ಐವರು ದಂಪತಿಗಳಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ದಂಪತಿಗಳಿಬ್ಬರೂ ಗೆಲುವು ಸಾಧಿಸಿದ್ದಾರೆ, ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದವರಲ್ಲಿ ಪತಿ ಗೆದ್ದು ಪತ್ನಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ವಾಲ್ಪೊಯ್ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಅವರ ಪತ್ನಿ ದೇವಿಯ ಪೊರಿಯಮ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಇಬ್ಬರೂ ಸಹ ಗೆಲುವು ಸಾಧಿಸಿದ್ದಾರೆ.
ಇನ್ನೂ ಪಣಜಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಟಾನಾನ್ಸಿಯೋ ಮಾನ್ಸೆರೇಟ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ತಲೈಗಾವ್ ಕ್ಷೇತ್ರದಲ್ಲಿ ಅಟಾನಾನ್ಸಿಯೋ ಮಾನ್ಸೆರೇಟ್ ಪತ್ನಿ ಜೆನಿಫರ್ ಮಾನ್ಸೆರೇಟ್‌ಗೆ ಟಿಕೆಟ್ ನೀಡಿತ್ತು. ಅವರು ಸಹ ಗೆಲುವು ಕಂಡಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷ ಕಲಾಂಘುಟ್ ಕ್ಷೇತ್ರದಲ್ಲಿ ಮಿಚೆಲ್ ಲೊಬೋಗೆ ಟಿಕೆಟ್ ನೀಡಿತ್ತು. ಅವರ ಪತ್ನಿ ಡೇಲಿಯಾ ಮಿಚೆಲ್ ಲೊಬೋಗೆ ಸಹ ಸಿಯೋಲಿಮ್ ಕ್ಷೇತ್ರದಲ್ಲಿ ಟಿಕೆಟ್ ನೀಡಿತ್ತು. ಮಿಚೆಲ್ ಲೊಬೋ ಗೆಲುವು ಸಾಧಿಸಿದ್ದಾರೆ.
ಗುರುವಾರ ಗೋವಾ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಸಂಜೆ 4.36ರ ವೇಳೆಗೆ 31 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ 18, ಕಾಂಗ್ರೆಸ್ 6, ಎಎಪಿ 1, ಗೋವಾ ಫಾರ್ವರ್ಡ್ ಪಾರ್ಟಿ 1, ಎಂಜಿಪಿ 1, ಆರ್‌ಜಿಪಿ 1 ಸ್ಥಾನದಲ್ಲಿ ಜಯಗಳಿಸಿದೆ. ಮೂವರು ಪಕ್ಷೇತರ ಅಭ್ಯರ್ಥಿಗಳು ಸಹ ಗೆದ್ದಿದ್ದಾರೆ.
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಒಂದೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ ನಡೆದಿತ್ತು. ಗುರುವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.
ಗೋವಾದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21. ಬಿಜೆಪಿ ಅತಿ ದೊಡ್ಡ ಪಕ್ಷವಾದರೂ ಸ್ಪಷ್ಟ ಬಹುಮತ ಬಂದಿಲ್ಲ. ಮೂವರು ಪಕ್ಷೇತರರರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯಪಾಲರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ರಾಜ್ಯಪಾಲರ ಬಳಿ ಹಕ್ಕು ಮಂಡನೆ ಮಾಡಲಿದೆ.












Click it and Unblock the Notifications