ಗೋವಾ; ಪ್ರವಾಸಿಗರಲ್ಲಿ ಆತಂಕ, ಮೊದಲ ಓಮಿಕ್ರಾನ್ ಪ್ರಕರಣ ದಾಖಲು
ಪಣಜಿ, ಡಿಸೆಂಬರ್ 27; ಗೋವಾದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಮೊದಲ ಪ್ರಕರಣ ಸೋಮವಾರ ದಾಖಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದ ಓಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 578.
ಯುಕೆಯಿಂದ ಗೋವಾಕ್ಕೆ ಆಗಮಿಸಿದ 8 ವರ್ಷದ ಬಾಲಕನಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿದೆ.
ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ಈ ಕುರಿತು ಪಿಟಿಐಗೆ ಮಾಹಿತಿ ನೀಡಿದ್ದಾರೆ, "ಡಿಸೆಂಬರ್ 17ರಂದು ಬಾಲಕ ಯುಕೆಯಿಂದ ರಾಜ್ಯಕ್ಕೆ ವಾಪಸ್ ಆಗಿದ್ದ. ಪುಣೆಯ ಲ್ಯಾಬ್‌ನಿಂದ ವರದಿ ಬಂದಿದೆ" ಎಂದು ಹೇಳಿದ್ದಾರೆ.

"ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕೋವಿಡ್ ಹರಡುವಿಕೆ ತಡೆಗಟ್ಟಲು, ಓಮಿಕ್ರಾನ್ ನಿಯಂತ್ರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈಗಾಲಗೇ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೂಚನೆಯನ್ನು ನೀಡಿದ್ದಾರೆ. ಕೋವಿಡ್ ಹರಡುವಿಕೆ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ.
ಭಾನುವಾರ ಗೋವಾದಲ್ಲಿ 25 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 1,80,050. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಶೂನ್ಯವಾಗಿದೆ. ರಾಜ್ಯದಲ್ಲಿ ಇದುವರೆಗೂ ಮೃತಪಟ್ಟವರು 3,519.
ವಿವಿಧ ರಾಜ್ಯಗಳಲ್ಲಿ ಪ್ರಕರಣಗಳು ಏರಿಕೆ; ದೇಶದ ವಿವಿಧ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ರಾಜಸ್ಥಾನದಲ್ಲಿ 2 ಹೊಸ ಪ್ರಕರಣಣ ದಾಖಲಾಗಿದೆ. ಜೈಪುರದಲ್ಲಿ 1, ಉದಯಪುರದಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಇದರಲ್ಲಿ 37 ಸೋಂಕಿತರು ಗುಣಮುಖಗೊಂಡಿದ್ದಾರೆ.
ಗುಜರಾತ್ ರಾಜ್ಯದಲ್ಲಿಯೂ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಖ್ಯಮಮಂತ್ರಿ ಭೂಪೇಂದ್ರ ಪಟೇಲ್ ಸೋಮವಾರ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದರು. ರಾಜ್ಯದಲ್ಲಿನ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 49 ಆಗಿದೆ.
ಗಾಂಧಿ ನಗರದ ಸರ್ಕಾರಿ ಆಸ್ಪತ್ರೆಗೆ ಮುಖ್ಯಮಂತ್ರಿಗಳು ದಿಢೀರ್ ಭೇಟಿ ಕೊಟ್ಟರು. ರೋಗಿಗಳ ಜೊತೆ ಸಂವಾದ ನಡೆಸಿದರು. ಗುಜರಾತ್ ಸರ್ಕಾರ ಕಳೆದ ವಾರವೇ ರಾಜ್ಯದಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿಯೂ ಓಮಿಕ್ರಾನ್ ಬಗ್ಗೆ ಮಾತನಾಡಿದ್ದರು, "ಈ ಜಾಗತಿಕ ಮಹಾಮಾರಿಯನ್ನು ಸದೆಬಡೆಯಲು ಒಬ್ಬ ನಾಗರಿಕನಂತೆ ನಮ್ಮ ಪ್ರಯತ್ನ ಬಹಳ ಮಹತ್ವಪೂರ್ಣವಾಗಿದೆ ಎಂಬುದು ಕಳೆದ 2 ವರ್ಷಗಳ ಅನುಭವವಾಗಿದೆ. ನಮ್ಮ ವಿಜ್ಞಾನಿಗಳು ಈ ಹೊಸ ರೂಪಾಂತರಿ ಒಮಿಕ್ರಾನ್ ನ ಅಧ್ಯಯನವನ್ನು ನಿರಂತರವಾಗಿ ಮಾಡುತ್ತಿದ್ದಾರೆ" ಎಂದು ಹೇಳಿದ್ದರು.
"ಪ್ರತಿ ದಿನ ಅವರಿಗೆ ಹೊಸ ಮಾಹಿತಿ ಲಭಿಸುತ್ತಿದೆ. ಅವರ ಸಲಹೆ ಮೇರೆಗೆ ಕೆಲಸ ಕಾರ್ಯ ನಡೆಯುತ್ತಿದೆ. ಹೀಗಿರುವಾಗ ಸ್ವಯಂ ಜಾಗರೂಕತೆ, ಸ್ವಂತ ನೀತಿ ನಿಯಮಗಳು ಕೊರೊನಾ ರೂಪಾಂತರಿ ವಿರುದ್ಧ ಹೋರಾಡಲು ದೇಶದ ಬಹುದೊಡ್ಡ ಶಕ್ತಿಯಾಗಿದೆ. ನಮ್ಮ ಸಾಮೂಹಿಕ ಶಕ್ತಿಯೇ ಕೊರೊನಾವನ್ನು ಸೋಲಿಸಲಿದೆ. ಇದೇ ಜವಾಬ್ದಾರಿಯೊಂದಿಗೆ ನಾವು 2022 ಅನ್ನು ಪ್ರವೇಶಿಸಬೇಕಿದೆ" ಎಂದು ಕರೆ ನೀಡಿದ್ದರು.
ದೇಶದ ವಿವಿಧ ರಾಜ್ಯಗಳು ಹೊಸ ವರ್ಷದ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಡೆಯಲು, ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ಮಾಡುವುದನ್ನು ನಿಯಂತ್ರಿಸಲು ನೈಟ್ ಕರ್ಫ್ಯೂ ಜಾರಿಗೊಳಿಸಿವೆ. ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಜನರು ಮಾತ್ರ ಸೇರಬೇಕು ಎಂಬ ನಿಯಮ ಜಾರಿಗೊಳಿಸಿವೆ.












Click it and Unblock the Notifications