'ಜಲಗಾರ' ಹೆಸರಲ್ಲಿ ಅಶ್ಲೀಲ ಕಾಮೆಂಟ್; ಟ್ರೋಲರ್ಸ್ ಚಳಿ ಬಿಡಿಸಲು ಮುಂದಾದ ವಿಜಯಲಕ್ಷ್ಮಿ ದರ್ಶನ್
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಅಶ್ಲೀಲ ಪದಗಳನ್ನು ಬಳಸಿ ನಿಂದಿಸುತ್ತಿರುವ ಹಾಗೂ ಮಾನಹಾನಿ ಮಾಡುತ್ತಿರುವ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಸತತವಾಗಿ ನಡೆಯುತ್ತಿರುವ ಈ ಸೈಬರ್ ಕಿರುಕುಳದಿಂದ ಬೇಸತ್ತಿರುವ ವಿಜಯಲಕ್ಷ್ಮಿ ಅವರು, ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
'ಜಲಗಾರ ಯುನಿವರ್ಸಿಟಿ' ಖಾತೆಯಿಂದ ಸತತ ಟ್ರೋಲಿಂಗ್
ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸತತವಾಗಿ ಸೈಬರ್ ಕಿರುಕುಳ ನೀಡುತ್ತಿರುವ ಘಟನೆಗಳು ಮತ್ತೆ ಮುನ್ನಲೆಗೆ ಬಂದಿದ್ದು, ತೀವ್ರ ಸ್ವರೂಪ ಪಡೆದುಕೊಂಡಿವೆ. ನಕಲಿ ಖಾತೆಗಳ ಮೂಲಕ ಮಾನಹಾನಿ ಮಾಡುತ್ತಿರುವ ಕಿಡಿಗೇಡಿಗಳಿಗೆ ಪಾಠ ಕಲಿಸಲು ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ವಿಜಯಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ 'ಜಲಗಾರ ಯುನಿವರ್ಸಿಟಿ' ಎಂಬ ಹೆಸರಿನ ಅಕೌಂಟ್‌ನಿಂದ ಸತತವಾಗಿ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ಅವರು ಚಿತ್ರಮಂದಿರಕ್ಕೆ ಸಿನಿಮಾವೊಂದನ್ನು ವೀಕ್ಷಿಸಲು ಹೋಗಿದ್ದ ವಿಡಿಯೋವನ್ನು ಬಳಸಿಕೊಂಡು, ಈ ಖಾತೆಯಲ್ಲಿ ಅತ್ಯಂತ ಆಕ್ಷೇಪಾರ್ಹ ಹಾಗೂ ಕೆಟ್ಟದಾಗಿ ಕಾಮೆಂಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಕೇವಲ ನಟ ದರ್ಶನ್ ಅವರಿಗೆ ಸಂಬಂಧಿಸಿದ ವಿಷಯಗಳಿಗಷ್ಟೇ ಸೀಮಿತವಾಗದೆ, ಕಿಡಿಗೇಡಿಗಳು ವಿಜಯಲಕ್ಷ್ಮಿ ಅವರ ವೈಯಕ್ತಿಕ ಬದುಕು ಮತ್ತು ಚಾರಿತ್ರ್ಯದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹದ್ದು ಮೀರುತ್ತಿರುವ ಟ್ರೋಲಿಂಗ್ ಮತ್ತು ಅಶ್ಲೀಲ ನಿಂದನೆಗಳಿಗೆ ಬ್ರೇಕ್ ಹಾಕಲು ವಿಜಯಲಕ್ಷ್ಮಿ ಅವರು ಕೊನೆಗೂ ಪೊಲೀಸರ ಮೊರೆ ಹೋಗಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು, ನಕಲಿ ಪ್ರೊಫೈಲ್‌ಗಳ ಹಿಂದೆ ಅಡಗಿರುವ ಅಸಲಿ ಕಿಡಿಗೇಡಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಮಹಿಳೆಯರ ತೇಜೋವಧೆ ಮಾಡುವ ಹಾಗೂ ಮಾನಹಾನಿಕರ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಇಂತಹ ಟ್ರೋಲ್ ಪೇಜ್‌ಗಳ ಐಪಿ ಅಡ್ರೆಸ್ ಟ್ರ್ಯಾಕ್ ಮಾಡಿ, ಅವರ ವಿರುದ್ಧ ಕಠಿಣ ಕಾನೂನು ಜರುಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಇಂತಹ ಸೈಬರ್ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ದರ್ಶನ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಹಿಂದೆಯೂ ದೂರು ನೀಡಿದ್ದ ದರ್ಶನ್ ಪತ್ನಿ
ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸತತವಾಗಿ ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬದ ವಿರುದ್ಧ ಅತ್ಯಂತ ಅಶ್ಲೀಲವಾದ ಪದಗಳನ್ನು ಬಳಸಿ ನಿಂದಿಸುತ್ತಿದ್ದರು. ಇದರಿಂದ ಬೇಸತ್ತ ವಿಜಯಲಕ್ಷ್ಮಿ ಅವರು ಖುದ್ದಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ, ಅಂದಿನ ಕಮಿಷನರ್‌ಗೆ ಲಿಖಿತ ದೂರನ್ನು ಸಲ್ಲಿಸಿದ್ದರು. ತಮ್ಮನ್ನು ಟಾರ್ಗೆಟ್ ಮಾಡಿ ತೇಜೋವಧೆ ಮಾಡುತ್ತಿರುವ ಕೆಲವು ನಿರ್ದಿಷ್ಟ ಪ್ರೊಫೈಲ್‌ಗಳು ಹಾಗೂ ಹ್ಯಾಂಡಲ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ತಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿದ್ದರು.
ಕಮಿಷನರ್ ಸೂಚನೆಯ ಮೇರೆಗೆ ಈ ಪ್ರಕರಣವನ್ನು ಬೆಂಗಳೂರಿನ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಕಲಿ (Fake) ಖಾತೆಗಳನ್ನು ಸೃಷ್ಟಿಸಿಕೊಂಡು ಕಾಮೆಂಟ್ ಮಾಡುತ್ತಿದ್ದವರ ಐಪಿ ಅಡ್ರೆಸ್ ಕಲೆಹಾಕಲು ಪೊಲೀಸರು ಮುಂದಾಗಿದ್ದರು. ಇದೇ ವೇಳೆ ವಿಜಯಲಕ್ಷ್ಮಿ ಅವರು ತಮ್ಮ ಅಧಿಕೃತ ಖಾತೆಯಲ್ಲಿ, "ಇನ್ನು ಮುಂದೆ ಯಾರಾದರೂ ಮಿತಿ ಮೀರಿ ಅಶ್ಲೀಲ ಕಾಮೆಂಟ್‌ಗಳನ್ನು ಹಾಕಿದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ವಿಜಯಲಕ್ಷ್ಮಿ ಅವರು ಕಮಿಷನರ್ ಭೇಟಿಯಾಗಿ ದೂರು ನೀಡಿದ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಹಾಗೂ ಮಹಿಳಾ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತಿದ್ದವು. ಸೆಲೆಬ್ರಿಟಿಗಳ ವೈಯಕ್ತಿಕ ಜೀವನವನ್ನು ಮುಂದಿಟ್ಟುಕೊಂಡು, ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟಬಂದಂತೆ ನಿಂದಿಸುವ ಪ್ರವೃತ್ತಿಗೆ ಬ್ರೇಕ್ ಹಾಕಲೇಬೇಕು ಎಂಬ ದೊಡ್ಡ ಮಟ್ಟದ ಚರ್ಚೆ ರಾಜ್ಯಾದ್ಯಂತ ನಡೆದಿತ್ತು.












Click it and Unblock the Notifications