ಗೋವಾ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದ ಸರ್ಕಾರ!
ಪಣಜಿ, ಜುಲೈ.03: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆಯೇ ಪ್ರವಾಸೋದ್ಯಮಕ್ಕೆ ಗೋವಾ ಸರ್ಕಾರವು ಮುಕ್ತ ಅವಕಾಶ ನೀಡಿದೆ. ಗೋವಾಗೆ ತೆರಳುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಹಾಗೂ ದಿಗ್ಬಂಧನ ವಿಧಿಸುವುದಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ಘೋಷಿಸಿದೆ.
Recommended Video
ಜುಲೈ.03ರ ಶುಕ್ರವಾರದಿಂದ ಗೋವಾದಲ್ಲಿ 250 ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ಪುನಾರಂಭಿಸುವುದಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರವಾಸೋದ್ಯ ಸಚಿವ ಮನೋಹರ್ ಅಜಗಾನ್ಕರ್ ಮಾಹಿತಿ ನೀಡಿದ್ದಾರೆ.
ದೇಶೀಯ ವಿಮಾನಯಾನ ಸಂಚಾರದಲ್ಲಿ ಜುಲೈ.02ರಿಂದಲೇ ಅನುಮತಿ ನೀಡಿದ್ದು, ಪ್ರಯಾಣಿಕರಿಗೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಈ ಕುರಿತು ಗೋವಾ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದು ಪ್ರವಾಸೋದ್ಯಮ ಸಚಿವ ಮನೋಹರ್ ಅಜಗಾನ್ಕರ್ ತಿಳಿಸಿದರು. ಹಾಗಿದ್ದಲ್ಲಿ ಗೋವಾ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಇರುವ ಅಂಶಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ.

ಗೋವಾ ಸರ್ಕಾರದ ಹೊಸ ಮಾರ್ಗಸೂಚಿ:
- ಮೊದಲೇ ಹೋಟೆಲ್ ಬುಕ್ಕಿಂಗ್ ಮಾಡುವುದು ಕಡ್ಡಾಯವಾಗಿದೆ. ಹೆಚ್ಚಿನ ಸುರಕ್ಷತೆ ಮತ್ತು ನೈರ್ಮಲ್ಯ ಹೊಂದಿರುವ ಹೋಟೆಲ್‌ಗಳನ್ನು ಮಾತ್ರ ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ.
- ಮೊದಲೇ ಘೋಷಿಸಲಾದ ಹೋಟೆಲ್‌ನಲ್ಲಿ ಲಭ್ಯವಿರುವ ಸ್ವಯಂ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಬೇಕು.
- ಗೋವಾಗೆ ಆಗಮಿಸಿದವರನ್ನು ದಿಗ್ಬಂಧನದಲ್ಲಿ ಇರಿಸುವ ಅಗತ್ಯವಿಲ್ಲ. ಅದಕ್ಕಾಗಿ ಕಳೆದ 48 ಗಂಟೆಗಳ ಹಿಂದೆ ಪ್ರಯಾಣಿಕರು ತಮಗೆ ಕೊರೊನಾವೈರಸ್ ಸೋಂಕು ಇಲ್ಲ ಎನ್ನುವುದಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದಲ್ಲಿ ಗೋವಾದಲ್ಲಿಯೇ ಪ್ರಯಾಣಿಕರು ತಮ್ಮ ಸ್ವಂತ ಹಣದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ಮಾಡಿಸಿಕೊಳ್ಳಬೇಕು.
- ರಸ್ತೆ ಮೂಲಕ ಗೋವಾಗೆ ತೆರಳುವ ಪ್ರವಾಸಿಗರಿಗೆ ದೋಡಮಾರ್ಗ್, ಪತ್ರದೇವಿ, ಕೆರಿ, ಮೊಲೆಮ್, ಪೊಲೆಮ್ ಮೂಲಕ ಆಗಮಿಸಲು ಅವಕಾಶ ನೀಡಲಾಗಿದೆ. ವಿಮಾನದಲ್ಲಿ ತೆರಳುವವರು ದಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವುದು ಹಾಗೂ ರೈಲ್ವೆ ಮಾರ್ಗದಲ್ಲಿ ಆಗಮಿಸುವ ಪ್ರವಾಸಿಗರಿಗೆ ಮಡ್ಗಾಂವ್, ತಿವಿಮ್ ಮತ್ತು ವಾಸ್ಕೋ ಡಾ ಗಾಮಾದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ.
- ಪ್ರತಿಯೊಂದು ಪ್ರವೇಶ ಕೇಂದ್ರದಲ್ಲಿ, ಪ್ರವಾಸಿಗರು ಆಗಮಿಸಿದ ನಂತರ, ಥರ್ಮಲ್ ಗನ್ ಮೂಲಕ ತಪಾಸಣೆಗೆ ಒಳಪಡಿಸಲಾಗುತ್ತದೆ. ಪರಿಶೀಲಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಪಡೆದುಕೊಂಡು ಪ್ರವಾಸ ಆರಂಭಿಸಬೇಕು.
- ಪ್ರವಾಸಿಗರ ಸ್ವ್ಯಾಬ್ ಮಾದರಿಯನ್ನು ರಾಜ್ಯ ಪ್ರವೇಶ ಕೇಂದ್ರಗಳಲ್ಲಿ ಸಂಗ್ರಹಿಸಲಾಗುತ್ತದೆ. COVID-19 ಪ್ರಮಾಣಪತ್ರ ಹೊಂದಿರುವವರಿಗೆ ಈ ರೀತಿಯ ತಪಾಸಣೆ ಇರುವುದಿಲ್ಲ.
- ಪ್ರವಾಸಿಗರು ವಸತಿ ಸೌಕರ್ಯದಲ್ಲಿ ಪ್ರವೇಶಿಸಿದ ಬಳಿಕ ಫಲಿತಾಂಶ ಬರುವವರೆಗೆ ಎರಡು ವಾರಗಳವರೆಗೆ ಪ್ರತ್ಯೇಕವಾಗಿರಬೇಕು.
- ನಿಮ್ಮ ಫಲಿತಾಂಶಗಳು 1-2 ದಿನಗಳಲ್ಲಿ ಬರುತ್ತವೆ. ನಕಾರಾತ್ಮಕವಾಗಿದ್ದರೆ, ನೀವು ಗೋವಾದಲ್ಲಿ ಉಳಿಯಬಹುದು; ಆದಾಗ್ಯೂ, ಸಕಾರಾತ್ಮಕವಾಗಿದ್ದರೆ, ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರಬೇಕಾಗುತ್ತದೆ.
- ರಾಜ್ಯ ಸರ್ಕಾರದ ಆದೇಶದ ನಂತರ ಗೋವಾದಾದ್ಯಂತ 250ಕ್ಕೂ ಹೆಚ್ಚು ಹೋಟೆಲ್‌ಗಳು ಪುನಾರಂಭಗೊಂಡಿವೆ.












Click it and Unblock the Notifications