ಗೋವಾದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1,000 ರೂ. ನೀಡುತ್ತೇವೆ: ಕೇಜ್ರಿವಾಲ್
ಪಣಜಿ, ಡಿಸೆಂಬರ್ 05: "ಗೋವಾದಲ್ಲಿ ಜನರು ಮತ ಹಾಕಿ ಎಎಪಿ ಗೋವಾದಲ್ಲಿ ಸರ್ಕಾರವನ್ನು ರಚನೆ ಮಾಡಿದರೆ ಎಲ್ಲಾ ಮಹಿಳೆಯರಿಗೂ ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ," ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಭಾನುವಾರ ನವೇಲಿಮ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, "ಮಹಿಳೆಯರಿಗೆ ಗೋವಾದಲ್ಲಿ ಗೃಹ ಆಧಾರ್ ಪ್ರಯೋಜನವನ್ನು ತಿಂಗಳಿಗೆ 1500 ರೂ.ನಿಂದ 2500 ರೂ.ಗೆ ಹೆಚ್ಚಿಸಲಾಗುವುದು. 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 1000 ರೂ. ನೀಡಲಾಗುವುದು," ಎಂದು ಭರವಸೆ ನೀಡಿದ್ದಾರೆ.
"ಇದು ಅತ್ಯಂತ ದೊಡ್ಡದಾದ ವಿಶ್ವದಲ್ಲಿ ಮಹಿಳಾ ಸಬಲೀಕರಣ ಕಾರ್ಯಕ್ರಮ ಆಗಲಿದೆ. ಕೇಜ್ರಿವಾಲ್ 'ಉಚಿತ' ನೀಡುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಈವರೆಗೆ ಮಂತ್ರಿಗಳು ಮಾತ್ರ ಜನರ ತೆರಿಗೆ ಹಣದಿಂದ ಉಚಿತ ಪ್ರಯೋಜನವನ್ನು ಪಡೆಯುತ್ತಿದ್ದರು. ನಾಯಕರು ಕೂಡಾ ಜನರಿಂದ ಬಂದ ತೆರಿಗೆ ಹಣದ ಉಚಿತ ಪ್ರಯೋಜನವನ್ನು ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಹಾಗಲ್ಲ, ಜನರಿಗೆ ಪ್ರಯೋಜನ ಆಗಲಿದೆ, ಜನರು ಸೌಲಭ್ಯ ಪಡಯುವುದು ಅವರ ಹಕ್ಕು," ಎಂದು ಅರವಿಂದ್ ಕೇಜ್ರಿವಾಲ್ ವಿವರಿಸಿದ್ದಾರೆ.

ಗೋವಾದಲ್ಲಿ ಹಣಕಾಸಿನ ಕೊರತೆ ಇಲ್ಲ
"ನಾವು ರಾಜ್ಯ ಎಲ್ಲಾ ಮಹಿಳೆಯರಿಗಾಗಿ ಈ ಯೋಜನೆಗಳನ್ನು ನೀಡುತ್ತೇವೆ. ಯಾರಿಗೆ ಈ ಹಣ ಬೇಕಾಗಿಲ್ಲ ಎಂದು ಅನಿಸುತ್ತದೆಯೋ ಅವರು ಈ ಯೋಜನೆಯಿಂದ ಹೊರಗೆ ಉಳಿಯಬಹುದು. ಗೋವಾದಲ್ಲಿ ಇಂತಹ ಯೋಜನೆಗಳಿಗೆ ಹಣ ನೀಡಲು ಹಣಕಾಸಿನ ಕೊರತೆ ಇಲ್ಲ," ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು. "ರಾಜ್ಯ ಬಜೆಟ್ 22,000 ಕೋಟಿ ರೂಪಾಯಿಗಳಾಗಿದ್ದು, ಅದರಲ್ಲಿ ಸರಿಸುಮಾರು 20 ಪ್ರತಿಶತ, ಅಂದರೆ 4,400 ಕೋಟಿ ರೂಪಾಯಿ ಭ್ರಷ್ಟಾಚಾರಕ್ಕೆ ಒಳಗಾಗಿದೆ," ಎಂದು ಈ ಸಂದರ್ಭದಲ್ಲೇ ಕೇಜ್ರಿವಾಲ್ ಆರೋಪ ಮಾಡಿದ್ದಾರೆ. "ಈ ಹಣವನ್ನು ನಾವು ಜನರಿಗೆ ಸಹಾಯ ಮಾಡಲು ಬಳಸಿಕೊಳ್ಳುತ್ತೇವೆ. ಗೋವಾದಲ್ಲಿ ಈ ಯೋಜನೆಗಾಗಿ ವರ್ಷಕ್ಕೆ 1,000 ಕೋಟಿಗಿಂತ ಕಡಿಮೆ ಹಣ ಖರ್ಚಾಗಲಿದೆ," ಎಂದು ಹೇಳಿದ್ದಾರೆ.
ಗೋವಾದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ
ಗೋವಾದಲ್ಲಿ ಮುಂದಿನ ವರ್ಷ ಅಂದರೆ 2022 ರ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಗೋವಾದಲ್ಲಿ ಒಟ್ಟು 40 ವಿಧಾನಸಭೆ ಸೀಟುಗಳು ಇದ್ದು, ಇದಕ್ಕಾಗಿ ಈಗ ಎಂಟು ಪಕ್ಷಗಳು ಸಮರ ಆರಂಭ ಮಾಡಿಕೊಂಡಿದೆ. ಈ 40 ವಿಧಾನಸಭೆ ಕ್ಷೇತ್ರದಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ಎಎಪಿ ಈಗಾಗಲೇ ಹೇಳಿಕೊಂಡಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್, ಮಮತಾ ಬ್ಯಾನರ್ಜಿಯ ಟಿಎಂಸಿ, ಶಿವಸೇನೆ, ಸಿಪಿಐಎಂ, ಗೋವಾ ಫಾರ್ವಡ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಇಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿದೆ.
ಪಂಜಾಬ್‌ನಲ್ಲಿಯೂ ಭರವಸೆ ನೀಡಿದ್ದ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ ಇದೇ ಭರವಸೆಯನ್ನು ಪಂಜಾಬ್‌ನಲ್ಲಿಯೂ ನೀಡಿದ್ದಾರೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಪಂಜಾಬ್‌ನಲ್ಲಿ ಎಎಪಿ ಗೆದ್ದರೆ 18 ವರ್ಷ ಮೇಲ್ಪಟ್ಟ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಹಾಕಲಾಗುವುದು," ಎಂದು ಆಶ್ವಾಸನೆ ನೀಡಿದ್ದಾರೆ. "ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗುವಂತೆ ಜನರು ಮತವನ್ನು ಹಾಕಿದರೆ, 18 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಿಗೆ ನಾವು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಜಮೆ ಮಾಡುತ್ತೇವೆ," ಎಂದು ಎಎಪಿ ಆಶ್ವಾಸನೆ ನೀಡಿದೆ. ಪಂಜಾಬ್‌ನ ಮೊಗಾದಲ್ಲಿ ಅರವಿಂದ್ ಕೇಜ್ರಿವಾಲ್ ಈ ಘೋಷಣೆಯನ್ನು ಮಾಡಿದ್ದಾರೆ. ಜನತೆಯು ಎಎಪಿಗೆ ಮತ ಹಾಕಿದರೆ ಪ್ರತಿ ತಿಂಗಳು 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ," ಎಂದು ಹೇಳಿದ್ದಾರೆ. "ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ," ಎಂದು ತಿಳಿಸಿದ್ದಾರೆ. "ಜನರಿಗಾಗಿ ಕೆಲಸ ಮಾಡುವ ಉದ್ದೇಶವೇ ನಮಗೆ ಹೆಚ್ಚು ಮುಖ್ಯವಾದ ವಿಷಯ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.












Click it and Unblock the Notifications