40 ಸಾವಿರ ಟಿಕ್ ಟಾಕ್ ಫಾಲೋವರ್ಸ್ ಇರುವ ಷಾರುಖ್ ಖಾನ್ ಗೆ ಕಳ್ಳತನ ಕಸುಬು
ಗ್ರೇಟರ್ ನೋಯ್ಡಾ, ಸೆಪ್ಟೆಂಬರ್ 5: ಜನಪ್ರಿಯ ಟಿಕ್ ಟಾಕ್ ಬಳಕೆದಾರ ಮತ್ತು ಆತನ ಮೂವರು ಸ್ನೇಹಿತರನ್ನು ಗುರುವಾರ ಬೆಳಗ್ಗೆ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಐದು ಮೊಬೈಲ್ ಫೋನ್, ಒಂದು ಬೈಕ್ ಹಾಗೂ ಮೂರೂವರೆ ಸಾವಿರ ರುಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಇಪ್ಪತ್ಮೂರು ವರ್ಷದ ಷಾರುಖ್ ಖಾನ್ ಬಂಧಿತ. ತಾನು ನೃತ್ಯ ಮಾಡುವ ವಿಡಿಯೋಗಳನ್ನು ಅಪ್ಲಿಕೇಷನ್ ಮೂಲಕ ಹಂಚಿಕೊಳ್ಳುತ್ತಿದ್ದ. ಆತನಿಗೆ ನಲವತ್ತು ಸಾವಿರದಷ್ಟು ಫಾಲೋವರ್ಸ್ ಇದ್ದಾರೆ. ಆತನ ಮೂವರು ಸ್ನೇಹಿತರಾದ ಅಸೀಫ್, ಫೈಜಾನ್, ಮುಕೇಶ್ ಸಹಾಯ ಮಾಡಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿನ ವಿವಿಧ ಸ್ಥಳಗಳಲ್ಲಿ ಇದ್ದ ಸಿಸಿಟಿವಿ ಫೂಟೇಜ್ ಸಹಾಯದಿಂದ ಆತನನ್ನು ಬಂಧಿಸಲು ಸಾಧ್ಯವಾಯಿತು. ಆರೋಪಿಗಳು ದಾರಿಹೋಕರಿಂದ ಮೊಬೈಲ್ ಫೋನ್ ಹಾಗೂ ನಗದು ಕದಿಯುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಆರು ದರೋಡೆ ಪ್ರಕರಣದಲ್ಲಿ ಪಾಲ್ಗೊಂಡಿದ್ದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಆರೋಪಿಗಳ ಪೈಕಿ ಮುಕೇಶ್ ಬಿಹಾರದವನು. ಉಳಿದ ಮೂವರು ಉತ್ತರಪ್ರದೇಶದ ಬುಲಂದ್ ಶಹರ್ ನವರು.












Click it and Unblock the Notifications